ಬುಧವಾರ, ನವೆಂಬರ್ 13, 2019
18 °C
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ: ಹರೀಶ್‌ ಕುಮಾರ್ ಬದಲಾವಣೆ!

ಪುನಶ್ಚೇತನಕ್ಕೆ ಗುರಿಕಾರನ ಹುಡುಕಾಟ?

Published:
Updated:
Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುರುವಾಗಿದ್ದು, ನಿರೀಕ್ಷೆ ಹೆಚ್ಚಿದೆ.

ಹಾಲಿ ಅಧ್ಯಕ್ಷ ಹರೀಶ್‌ ಕುಮಾರ್, ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಒಬ್ಬರಿಗೆ ಒಂದು ಹುದ್ದೆ ಹಾಗೂ ಪಕ್ಷ ಬಲವರ್ಧನೆಯ ನಿಟ್ಟಿನಲ್ಲಿ ಬದಲಾವಣೆಯ ಹೆಜ್ಜೆಯನ್ನು ಕೆಪಿಸಿಸಿ ಇಟ್ಟಿದೆ. ಹೊಸ ಅಧ್ಯಕ್ಷರ ಆಯ್ಕೆ ಕುರಿತು ಕೆಪಿಸಿಸಿಯ ಉಸ್ತುವಾರಿ ಎಂ.ಎನ್. ಸೂರಜ್‌ ಹೆಗ್ಡೆ ಈಚೆಗೆ ಜಿಲ್ಲೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದು, ಶೀಘ್ರವೇ ವರದಿ ನೀಡಲಿದ್ದಾರೆ.

ಹರೀಶ್‌ ಕುಮಾರ್ ಅವರನ್ನು ಬದಲಾವಣೆ ಮಾಡಿದರೆ, ಹಿಂದುಳಿದ ವರ್ಗದವರಿಗೇ ಹುದ್ದೆ ನೀಡಬೇಕು ಎಂಬ ಬೇಡಿಕೆಯನ್ನು ಕೆಲವು ಮುಖಂಡರು ಮಂಡಿಸಿದ್ದಾರೆ. ಆಡಳಿತಾರೂಢ ಬಿಜೆಪಿಯಲ್ಲಿ ಬಂಟ ಸಮುದಾಯವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದೆ. ಹೀಗಾಗಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಹಿಂದ ವರ್ಗಕ್ಕೆ ಆದ್ಯತೆ ನೀಡಬೇಕು ಎಂಬ ಅಹವಾಲು ಮುಂದಿಟ್ಟಿದ್ದಾರೆ.

ಇನ್ನೊಂದೆಡೆ, ಬಿಜೆಪಿಗೆ ಸೆಡ್ಡು ಹೊಡೆಯಲು ಬಂಟ ಸಮುದಾಯದ ಅಭ್ಯರ್ಥಿಯನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಸಲಹೆಗಳೂ ಕೇಳಿಬಂದಿವೆ. ಇದಕ್ಕೆ ಪೂರಕವಾಗಿ ಮಾಜಿ ಸಚಿವ ರಮಾನಾಥ ರೈ ಹಾಗೂ ಇತರರ ಹೆಸರು ಮುಂಚೂಣಿಗೆ ಬಂದಿವೆ.

ಆದರೆ, ‘ನಾನು ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿ ಇಲ್ಲ. ಕಾರ್ಯಕರ್ತರ ಅಭಿಪ್ರಾಯವನ್ನು ಆಧರಿಸಿ, ಸೂಕ್ತ ಅಭ್ಯರ್ಥಿಯನ್ನು ಪಕ್ಷವೇ ನೇಮಿಸಲಿ. ಸಂಘಟನೆಗೆ ನನ್ನ ಸಂಪೂರ್ಣ ಸಹಕಾರ ಇರಲಿದೆ. ಈಗಾಗಲೇ, ವಿಪಕ್ಷವಾಗಿ ಜನಪರವಾದ ಹೋರಾಟಗಳನ್ನು ನಡೆಸುತ್ತಿದ್ದೇವೆ’ ಎಂದು ರಮಾನಾಥ ರೈ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇದರ ಜೊತೆಗೆ ಮಹಾ ನಗರ ಪಾಲಿಕೆ ಚುನಾವಣೆಯೂ ಶೀಘ್ರದಲ್ಲೇ ಬರಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಶಶಿಧರ ಹೆಗ್ಡೆ ಮತ್ತಿತರ ಹೆಸರು ಕೇಳಿಬಂದಿವೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೆಸರು ಚಾಲನೆಯಲ್ಲಿದೆ. ಆದರೆ, ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಜಾರಿಗೊಂಡರೆ, ಅವರಿಗೆ ಹಿನ್ನಡೆಯಾಗಲಿದೆ.

ಬಿಜೆಪಿ ಕಾರ್ಯತಂತ್ರಗಳಿಗೆ ಪ್ರತಿಯಾಗಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಲು ಸರ್ವಸಮ್ಮತ ಅಭ್ಯರ್ಥಿಯ ಹುಡುಕಾಟದಲ್ಲಿ ಪಕ್ಷವಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಮತ್ತಿತರರ ಹೆಸರುಗಳು ಪರಿಶೀಲನೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕಾಗಿ ಎಲ್ಲರೊಂದಿಗೆ ಹೊಂದಾಣಿಕೆಯಾಗುವ ಹರೀಶ್ ಕುಮಾರ್ ಹುದ್ದೆಯಲ್ಲಿ ಮುಂದುವರಿಯಲಿ ಎಂದೂ ಕೆಲವು ಮಾಜಿ ಶಾಸಕರುಗಳು ಸಲಹೆ ನೀಡಿದ್ದಾರೆ.

ಸದ್ಯ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಯು.ಟಿ.ಖಾದರ್‌ ಒಬ್ಬರೇ ಶಾಸಕರು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಅವರೊಂದಿಗೆ ಸಮಾಲೋಚಿಸಿಕೊಂಡು ಹುದ್ದೆಯನ್ನು ನೀಡುವ ನಿರೀಕ್ಷೆ ಇದೆ. ಕಾವು ಹೇಮನಾಥ ಶೆಟ್ಟಿ, ಧನಂಜಯ ಅಡ್ಪಂಗಾಯ, ಪ್ರಸಾದ್‌ರಾಜ್ ಕಾಂಚನ್, ಪಿ.ವಿ. ಮೋಹನ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೆಸರುಗಳೂ ಕೇಳಿಬಂದಿವೆ.

ಕೆಪಿಸಿಸಿ ಉಸ್ತುವಾರಿಗಳು ಕಾರ್ಯಕರ್ತರ ಅಭಿಪ್ರಾಯಗಳನ್ನು ಆಲಿಸಿದರೂ, ಅಂತಿಮವಾಗಿ ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಅಧ್ಯಕ್ಷರ ನೇಮಕವಾಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ ಪ್ರಮುಖ ಆಕಾಂಕ್ಷಿಗಳು.

‘ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯವನ್ನು ಯಥಾವತ್ತಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸುತ್ತೇನೆ’ ಎನ್ನುತ್ತಾರೆ ಕೆಪಿಸಿಸಿ ಉಸ್ತುವಾರಿಯಾಗಿ ಬಂದಿದ್ದ ಎಂ.ಎನ್. ಸೂರಜ್ ಹೆಗ್ಡೆ.

ಪ್ರತಿಕ್ರಿಯಿಸಿ (+)