ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈವಗಳ ಆರಾಧನೆಯಿಂದ ಸಾನ್ನಿಧ್ಯ ವೃದ್ಧಿ: ಡಾ. ಪದ್ಮಪ್ರಸಾದ ಅಜಿಲ

ಕುದ್ಯಾಡಿ ಗರಡಿಯಲ್ಲಿ ಕಲಶಾಭಿಷೇಕ, ಧಾರ್ಮಿಕ ಸಭೆ
Last Updated 26 ಜನವರಿ 2023, 14:46 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ದೈವಗಳು ಕ್ಷಿಪ್ರವಾಗಿ ಸ್ಪಂದಿಸುವ ಮತ್ತು ನಮಗೆ ಅಭಯ ನೀಡುವ ಶಕ್ತಿಗಳು. ಅವುಗಳ ಆರಾಧನೆಯನ್ನು ನಿಯಮ ಮೀರದೆ ಸಮರ್ಪಕ ರೀತಿಯಲ್ಲಿ ನಡೆಸಿಕೊಂಡು ಹೋದಾಗ ಆರಾಧಕರಿಗೂ ಒಳಿತಾಗುವ ಜೊತೆಗೆ ಸಾನ್ನಿಧ್ಯ ವೃದ್ಧಿಯೂ ಸಾಧ್ಯ ಎಂದು ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲ ಹೇಳಿದರು.

ಕುದ್ಯಾಡಿ ಗ್ರಾಮದ ನವೀಕೃತ ಕೊಡಮಣಿತ್ತಾಯ ದೈವಸ್ಥಾನ- ಬ್ರಹ್ಮ ಬೈದರ್ಕಳ ಗರಡಿ ಇದರ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಕಾರ್ಯಕ್ರಮಗಳ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಮಾತನಾಡಿ, ‘ಈ ಗರಡಿ ಊರಿನ ಅಭಿವೃದ್ಧಿಯ ಸಂಕೇತ.‌ ಜನರು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ಸದಾ ಸಾರ್ಥಕ. ದೇಶ ಕೂಡ ಇದೇ ರೀತಿ ಬೆಳವಣಿಗೆ ಕಾಣುತ್ತಿದೆ. ಕುದ್ಯಾಡಿ ಚಿಕ್ಕ ಗ್ರಾಮವಾದರೂ ಗ್ರಾಮಸ್ಥರ ಮನಸ್ಸು ದೊಡ್ಡದು.‌ ಊರಿನವರು ಧಾರ್ಮಿಕ ಕ್ಷೇತ್ರಗಳಿಗಳ ಅಭಿವೃದ್ಧಿಯಲ್ಲಿ ತೊಡಗಿದಾಗ ಧರ್ಮಸ್ಥಳದ ಸಹಕಾರ ಸದಾ ಇದೆ’ ಎಂದರು.

ಬಳಂಜದ ಶ್ರೀಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಎಚ್.ಎಸ್, ಸುಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ಪೂಜಾರಿ, ಉಪಾಧ್ಯಕ್ಷೆ ಯಶೋದಾ ಲಿಂಗಪ್ಪ ಬಂಗೇರ, ಸದಸ್ಯ ಶುಭಕರ ಪೂಜಾರಿ ಇದ್ದರು.

ಗರಡಿಯ ಕೆಲಸ ಕಾರ್ಯಗಳಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಪ್ರಕಾಶ್ ಭಟ್, ಕೊರಗಪ್ಪ ಪೂಜಾರಿ ಕೊಡಿಬಾಳೆ, ಅನಂತರಾಜ್ ಜೈನ್ ಅಂತರಗುತ್ತು, ಶಶಿಕಾಂತ್ ಜೈನ್ ಮುಂಡಾಜೆಗುತ್ತು, ಲಿಂಗಪ್ಪ ಬಂಗೇರ ಕೆಂಪನೊಟ್ಟು, ಅಚ್ಯುತ ಪೂಜಾರಿ ಕೊಡಿಬಾಳೆಗುತ್ತು, ನಾರಾಯಣ ಪೂಜಾರಿ ಹೊಸ್ಮಾರು, ಡಾ.ಎನ್.ಎಂ. ತುಳುಪುಳೆ, ವಾಸು ಪೂಜಾರಿ, ಜಗದೀಶ್ ಪೂಜಾರಿ ಹಾಗೂ ಇತರ ದಾನಿಗಳನ್ನು ಸನ್ಮಾನಿಸಲಾಯಿತು.

ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು ಪ್ರಾಸ್ತಾವಿಕ ಮಾತನಾಡಿದರು. ವಿಜಯಕುಮಾರ್ ಜೈನ್ ಹಾಗೂ ಪ್ರಶಾಂತ್ ಎಚ್. ಹಿಮರಡ್ಡ ಕಾರ್ಯಕ್ರಮ ನಿರ್ವಹಿಸಿದರು. ಯಶೋಧರ ಬಿ. ಸಾಲ್ಯಾನ್ ಬಾಕ್ಯರಡ್ಡ ವಂದಿಸಿದರು.

ಧಾರ್ಮಿಕ ಕಾರ್ಯಕ್ರಮ: ಅಳದಂಗಡಿಯ ಸೋಮನಾಥೇಶ್ವರಿ ದೇವಸ್ಥಾನದ ಆಸ್ರಣ್ಣ ಪ್ರಕಾಶ್ ಭಟ್ ನೇತೃತ್ವದಲ್ಲಿ ತೋರಣ ಮುಹೂರ್ತ ನೆರವೇರಿತು. ಮುಂಡಾಜೆಗುತ್ತುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ, ಕೆಂಪನೊಟ್ಟುಗುತ್ತುವಿನಿಂದ ದೈವದ ಭಂಡಾರ ಹಾಗೂ ಕೊಡಿಬಾಳೆಗುತ್ತುವಿನಿಂದ ಬೈದರ್ಕಳ ಭಂಡಾರ ಗರಡಿಗೆ ಆಗಮಿಸಿ, ದರ್ಶನ ನಡೆಯಿತು. ಗಣಹವನ, ಪ್ರಧಾನ ಹೋಮ ನಡೆದು, ಕಲಶಾಭಿಷೇಕ, ದೈವಗಳಿಗೆ ಪರ್ವಸೇವೆ ನಡೆದು, ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಧಾರ್ಮಿಕ ಸಭೆ, ಅನ್ನಸಂತರ್ಪಣೆ ನಡೆಯಿತು. 10.30ರಿಂದ ದೈವ ಹಾಗೂ ಕೊಡಮಣಿತ್ತಾಯ ದೈವದ ನೇಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT