ಪುತ್ತೂರು: ಪುತ್ತೂರು ತಾಲ್ಲೂಕಿನ ಮಾಡ್ನೂರು ಗ್ರಾಮದ ಕಾವು ಸಮೀಪ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ ಜಾಗವನ್ನು ಸಮತಟ್ಟುಗೊಳಿಸಿದ್ದರಿಂದ ಮಣ್ಣು ಕುಸಿದು ಮೇಲ್ಭಾಗದಲ್ಲಿರುವ ಮನೆ ಮತ್ತು ಕೋಳಿಫಾರಂ ಅಪಾಯದ ಸ್ಥಿತಿಗೆ ತಲುಪಿದೆ.
ಕಾವು ನಿವಾಸಿ ವೆಂಕಪ್ಪ ಕುಲಾಲ್ ಅವರ ಮನೆ ಹಾಗೂ ಕೋಳಿಫಾರಂನ ಹಿಂಬದಿಯ ಧರೆ ಕುಸಿದಿದೆ. ಮಣ್ಣು ಕುಸಿದು ವೆಂಕಪ್ಪ ಕುಲಾಲ್ ಅವರ ಒಂದು ತೆಂಗಿನ ಮರ ಮತ್ತು ಧರೆಯ ಬದಿಯಲ್ಲಿದ್ದ ಅಡಿಕೆ ಮರಗಳು ಉರುಳಿವೆ.
ಸುಮಾರು 50 ಅಡಿಯಷ್ಟು ಎತ್ತರದಲ್ಲಿರುವ ವೆಂಕಪ್ಪ ಕುಲಾಲ್ ಅವರ ಮನೆ ಮತ್ತು ಕೋಳಿಫಾರಂ ಕುಸಿಯುವ ಸ್ಥಿತಿಯಲ್ಲಿದೆ.
ಮುಂಜಾಗ್ರತಾ ಕ್ರಮವಾಗಿ ವಾಸ್ತವ್ಯವನ್ನು ಸಮೀಪದಲ್ಲೇ ಇರುವ ಗ್ರಾಮ ಪಂಚಾಯಿತಿಯ ಸಮುದಾಯ ಭವನಕ್ಕೆ ಸ್ಥಳಾಂತರಿಸುವಂತೆ ಅರಿಯಡ್ಕ ಗ್ರಾಮ ಪಂಚಾಯಿತಿ ನೋಟಿಸ್ ನೀಡಿದೆ. ಸಮುದಾಯ ಭವನದ ಕೀಲಿಕೈಯನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ವೃದ್ಧೆಯ ಮನೆ ಕುಸಿತ
ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ತೆಗ್ಗು ಸಮೀಪದ ಕಟ್ಟೇಜಿರ್ ನಿವಾಸಿ ವೃದ್ಧೆ ಬೀಪಾತುಮ್ಮ ಅವರ ಹಳೆಯ ಹೆಂಚಿನ ಮನೆಯ ಮಾಡು ಸಂಪೂರ್ಣವಾಗಿ ಕುಸಿದಿದ್ದು, ಒಂದು ಭಾಗದ ಗೋಡೆಯೂ ಕುಸಿತಕ್ಕೊಳಗಾಗಿದೆ.
ಬೀಪಾತುಮ್ಮ ಅವರೊಬ್ಬರೇ ಈ ಮನೆಯಲ್ಲಿ ವಾಸ್ಯವ್ಯವಿದ್ದರು. ಶಿಥಿಲಗೊಂಡು ಕುಸಿಯುವ ಭೀತಿ ಇದ್ದುದರಿಂದ ಅವರು ಅಲ್ಲಿ ವಾಸ್ಯವ್ಯ ಇರಲಿಲ್ಲ ಎಂದು ಗೊತ್ತಾಗಿದೆ.
ಘಟನಾ ಸ್ಥಳಕ್ಕೆ ಕೆಯ್ಯೂರು ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತಾಧಿಕಾರಿ ಸ್ವಾತಿ, ಗ್ರಾಮ ಸಹಾಯಕ ನಾರಾಯಣ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.