ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಜನರ ಆರೋಗ್ಯ ಕಾಳಜಿಗೆ ‘ಹೃದಯ ವೈಶಾಲ್ಯ’ ಕಾರ್ಯಕ್ರಮ

ಪ್ರತಿ ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರ ಆಯೋಜನೆ
Published 6 ಜೂನ್ 2023, 7:21 IST
Last Updated 6 ಜೂನ್ 2023, 7:21 IST
ಅಕ್ಷರ ಗಾತ್ರ

ಮಂಗಳೂರು: ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತದ ಪ್ರಕರಣಗಳ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಆರೋಗ್ಯ ಕಾಳಜಿಗೆ ‘ಹೃದಯ ವೈಶಾಲ್ಯ’ ಎಂಬ ವಿನೂತನ ಕಾರ್ಯಕ್ರಮವೊಂದು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅನುಷ್ಠಾನಗೊಳ್ಳಲಿದೆ.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್ ಫೌಂಡೇಷನ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.

ಏನಿದು ಕಾರ್ಯಕ್ರಮ: ಕಾರ್ಡಿಯಾಲಜಿ ಎಟ್ ಡೋರ್‌ಸ್ಟೆಪ್ ಫೌಂಡೇಷನ್ ಜಿಲ್ಲೆಯ ವಿವಿಧೆಡೆಗಳ ಆರೋಗ್ಯ ಕೇಂದ್ರಗಳಿಗೆ 135 ಇಸಿಜಿ ಯಂತ್ರಗಳನ್ನು ಉಚಿತವಾಗಿ ಪೂರೈಸಿದೆ. ಇದರಿಂದಾಗಿ ಗ್ರಾಮೀಣ ಜನರು ಹೃದಯ ಸಂಬಂಧಿ ತೊಂದರೆಗಳಾದಾಗ ಸುಲಭವಾಗಿ ಇಸಿಜಿ ಯಂತ್ರದ ಮೂಲಕ ಪರೀಕ್ಷೆ ಮಾಡಿಸಿಕೊಂಡು, ಈ ವರದಿಯನ್ನು ವಾಟ್ಸ್‌ಆ್ಯಪ್ ಅಥವಾ ಇನ್ನಾವುದಾದರೂ ಮಾಧ್ಯಮದ ಮೂಲಕ ವೈದ್ಯರಿಗೆ ಕಳುಹಿಸಿ ಆರೋಗ್ಯದ ಸ್ಥಿತಿಗತಿ ತಿಳಿದುಕೊಳ್ಳಬಹುದಾಗಿದೆ. ಈ ನಡುವೆ ಈ ಯಂತ್ರಗಳ ಪೂರ್ಣ ಪ್ರಮಾಣದ ಪ್ರಯೋಜನ ಪಡೆಯಲು ಮುಂದಾಗಿರುವ ಜಿಲ್ಲಾ ಪಂಚಾಯಿತಿಯು ಇದಕ್ಕಾಗಿ ಒಂದು ಕಾರ್ಯಕ್ರಮ ರೂಪಿಸಿದೆ.

ಪ್ರತಿ ಬುಧವಾರ ನಿಗದಿಪಡಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಹೃದಯ ವೈಶಾಲ್ಯ’ ಶಿಬಿರ ಆಯೋಜಿಸಲಿದೆ. ವೈದ್ಯಾಧಿಕಾರಿ, ಸಮುದಾಯ ಆರೋಗ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆಶಾ ಕಾರ್ಯಕರ್ತರು, ಅಮೃತ ಆರೋಗ್ಯ ಸಂಯೋಜಕರು, ಸಂಬಂಧಿತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಈ ಶಿಬಿರಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಜೂನ್ 7ರಿಂದ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಜಾರಿಗೊಳ್ಳಲಿದ್ದು, ಹೃದಯ ತಜ್ಞ ಡಾ. ಪದ್ಮನಾಭ ಕಾಮತ್ ನೇತೃತ್ವದ ತಂಡ ಶಿಬಿರದಲ್ಲಿ ಭಾಗಿಯಾಗಲಿದೆ. ಜೂನ್ 7ರಂದು ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರ, 14ರಂದು ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ, 21ರಂದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರ, ನಂತರ ತಿಂಗಳ ಸಮೀಕ್ಷೆ ನಡೆಯುತ್ತದೆ. ಜುಲೈ ತಿಂಗಳಿನಲ್ಲಿ ಮತ್ತೆ ಹೀಗೆ ಶಿಬಿರಗಳು ನಡೆಯುತ್ತವೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್.

‘ಪ್ರತಿ ತಿಂಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸಮರ್ಪಕವಾಗಿ ನಡೆಸಲು ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಪೂರ್ವಭಾವಿಯಲ್ಲಿ ಆರೋಗ್ಯ ಕೇಂದ್ರದ ಸುತ್ತಲಿನ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ, ಜಾಗೃತಿ ಮೂಡಿಸಲು ಕೂಡ ಯೋಚಿಸಲಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT