ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: 30ನೇ ವರ್ಷದ ಕೋಟಿ– ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

Last Updated 28 ಜನವರಿ 2023, 13:03 IST
ಅಕ್ಷರ ಗಾತ್ರ

ಪುತ್ತೂರು: ‘ಬೇರೆ ಬೇರೆ ರೀತಿಯಲ್ಲಿ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸಗಳು ಆಗಬೇಕಿದೆ. ಕಂಬಳದಲ್ಲಿ ಕೋಣಗಳಿಗೆ ಹಿಂಸೆ ಆಗುತ್ತಿದೆ ಎನ್ನುವುದು ಸರಿಯಲ್ಲ. ದೈಹಿಕ ಸಾಮರ್ಥ್ಯ ಹೆಚ್ಚಳ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಂಬಳವೊಂದು ಉತ್ತಮ ಕಾರ್ಯಕ್ರಮ’ ಎಂದು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಹೇಳಿದರು.

ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ವತಿಯಿಂದ ಇಲ್ಲಿನ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ 30ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವನ್ನು ಶನಿವಾರ ಬೆಳಿಗ್ಗೆ ಉದ್ಘಾಟಿಸಿ ಅವರು ಮಾತನಾಡಿದರು.

ತುಳುನಾಡಿನ ಜಾನಪದ ಸಂಸ್ಕೃತಿಗಳ್ಲೊಂದಾದ ಕಂಬಳದ ಬಗ್ಗೆ ಯುವ ಸಮುದಾಯದಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಕಂಬಳ ಸಮಿತಿಯವರು ಕಂಬಳ ಕರೆಯಲ್ಲಿ ಕಂಬಳದ ಕೋಣ ಓಡಿಸುವ ಬಗ್ಗೆ ಯುವ ಸಮುದಾಯಕ್ಕೆ ತರಬೇತಿ ನೀಡುವ ಕುರಿತು ಚಿಂತನೆ ಮಾಡಬೇಕು. ವರ್ಷದಲ್ಲಿ ಕನಿಷ್ಠ 4 ಬಾರಿಯಾದರೂ ಕಾರ್ಯಕ್ರಮ ಮಾಡುವ ಯೋಜನೆ ಮಾಡಿದರೆ ಕಂಬಳ ಕರೆಯಲ್ಲಿ ಕೋಣ ಓಡಿಸುವ ಕಲೆಯನ್ನು ಯುವಜನತೆ ಕರಗತ ಮಾಡಿಕೊಳ್ಳಲು ಸಹಕಾರಿಯಾಗಬಲ್ಲದು ಎಂದ ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಕಂಬಳ ತುಳುನಾಡಿನ ವಿಶಿಷ್ಟ ಸಾಂಪ್ರದಾಯಿಕ ಕಲೆ. 30ನೇ ವರ್ಷಕ್ಕೆ ಕಾಲಿಟ್ಟಿರುವ ಪುತ್ತೂರಿನ ಕಂಬಳಕ್ಕೆ ತನ್ನದೇ ಆದ ವಿಶೇಷತೆಯ ಹೆಸರಿದೆ. ಬೇಸಾಯ ಸಂಪ್ರದಾಯದ ಕಂಬಳ ಮುಂದಿನ ಪೀಳಿಗೆಗೆ ಜಾನಪದ ಕ್ರೀಡಾಕೂಟವಾಗಿ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಕಂಬಳ ಸಮಿತಿಯ ಪ್ರಯತ್ನ ನಿರಂತರವಾಗಿರಬೇಕು ಎಂದರು.

ಪುತ್ತೂರು ಸೇಂಟ್‌ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಆ್ಯಂಟನಿ ಪ್ರಕಾಶ್ ಮೊಂತೆರೊ ಮಾತನಾಡಿ, ಎಲ್ಲಾ ಜಾತಿ, ಧರ್ಮ, ನಂಬಿಕೆ, ಭಾಷೆಯವರನ್ನು ಒಗ್ಗಟ್ಟಾಗಿಸುವ, ಎಲ್ಲರ ಮನಸ್ಸುಗಳನ್ನು ಒಂದುಗೂಡಿಸುವ ಜತೆಗೆ ಮನೋಲ್ಲಾಸಗೊಳಿಸುವ ಕೆಲಸ ಕಂಬಳದಿಂದ ಆಗುತ್ತಿದೆ ಎಂದರು.

ಮಹಾಲಿಂಗೇಶ್ವರ ದೇವಳ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತೂರು ಜಾತ್ರೆ ಬಿಟ್ಟರೆ ಇಲ್ಲಿನ ಎರಡನೇ ದೊಡ್ಡ ಹಬ್ಬ ಕಂಬಳ. ಸಂಸ್ಕೃತಿಯ ಪ್ರತೀಕವಾದ ಕಂಬಳ ಧಾರ್ಮಿಕ ವ್ಯವಸ್ಥೆಯ ಜತೆಯಾಗಿ ನಡೆಯುವ ಕಾರ್ಯಕ್ರಮವಾಗಿದೆ ಎಂದರು.

ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಮಾತನಾಡಿ, ಪ್ರಾಣಿ ಮತ್ತು ಮನುಷ್ಯನ ನಡುವಿನ ಒಡನಾಟದ ಕ್ರೀಡೆ ಕಂಬಳ. ಕಂಬಳ ಸೌಹಾರ್ದತೆಯ ಸಂಕೇತ. ಕಂಬಳವನ್ನು ಜಾತಿ-ಧರ್ಮದ ಅಡ್ಡ ಗೋಡೆಗಳಿಲ್ಲದೆ ಕ್ರೀಡೆಯಾಗಿ ನೋಡಬೇಕು, ಜತೆಗೆ ಪ್ರೋತ್ಸಾಹ ನೀಡಬೇಕು ಎಂದರು.

ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸುದಾನ ದೇವಾಲಯದ ಧರ್ಮಗುರು ವಿಜಯ ಹಾರ್ವನ್ ಮಾತನಾಡಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಕೆಯ್ಯೂರು ದೇವಳದ ಮಾಜಿ ಆಡಳಿತ ಮೊಕ್ತೇಸರ ಚೆನ್ನಪ್ಪ ರೈ ದೇರ್ಲ, ಉಪ್ಪಿನಂಗಡಿ ಸಹಸ್ತ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ವಕೀಲ ನಿರ್ಮಲ್ ಕುಮಾರ್ ಜೈನ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕಬಡ್ಡಿ ಆಟಗಾರ ಪ್ರಶಾಂತ್ ಕುಮಾರ್ ರೈ ಕೈಕಾರ, ಬೈಲುಗುತ್ತು ಮಾರಪ್ಪ ಶೆಟ್ಟಿ, ಪ್ರೀತಂ ಪೂಂಜಾ, ಉಪ್ಪಿನಂಗಡಿ ಸಹಸ್ತ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಧರ್ಣಪ್ಪ ಮೂಲ್ಯ, ಭಾಸ್ಕರ ಗೌಡ ಕೋಡಿಂಬಾಳ, ಸಂಜೀವ ಪೂಜಾರಿ ಕೂರೇಲು ಕೂರೇಲು ಇದ್ದರು.

ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಸಂಚಾಲಕ ಎನ್.ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಕಂಬಳ ಸಮಿತಿಯ ಶಿವರಾಮ ಆಳ್ವ, ಕೃಷ್ಣಪ್ರಸಾದ್ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಜೋಕಿಂ ಡಿಸೊಜ, ಶಶಿಕಿರಣ್ ರೈ ಇದ್ದರು.

ಪುತ್ತೂರು ಕೋಟಿ-ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ವಸಂತ ಕುಮಾರ್ ರೈ ವಂದಿಸಿದರು. ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT