ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಕಲಶೋತ್ಸವಕ್ಕೆ ದೇವರ ಕೃಪೆ: ಕಟೀಲ್‌

ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
Last Updated 14 ಮಾರ್ಚ್ 2021, 15:36 IST
ಅಕ್ಷರ ಗಾತ್ರ

ಮಂಗಳೂರು: ‘ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾಡುವ ಸಂಕಲ್ಪವು ಭಕ್ತರಿಗಿಂತ, ಹೆಚ್ಚಾಗಿ ದೇವರ ನಿರ್ಧಾರ. ಎಲ್ಲ ಕೆಲಸ ಕಾರ್ಯಗಳಿಗೆ ದೇವರ ಕೃಪೆ ಬಹಳ ಮುಖ್ಯ’ ಎಂದು ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಗೌರವಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಭಾನುವಾರ ಶಕ್ತಿನಗರದ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಪ್ರತಿಷ್ಟಾ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹಿಂದೂ ಸಂಸ್ಕೃತಿಯಲ್ಲಿ ಭಕ್ತರ ನಂಬಿಕೆಗೆ ಅಪಾರ ಶಕ್ತಿ ಇದೆ. ದೇವಸ್ಥಾನದವರಿಗೆ ಬ್ರಹ್ಮಕಲಶ ಮಾಡುವ ಯೋಗ ಇದ್ದರೆ ನಮಗೆ ಅದರಲ್ಲಿ ಭಾಗವಹಿಸುವ ಭಾಗ್ಯ ಸಿಗಬೇಕಷ್ಟೇ’ ಎಂದು ಹೇಳಿದರು.

ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಅವರು ಮಾತನಾಡಿ, ‘ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಏಪ್ರಿಲ್‌ 20 ರಿಂದ 25 ವರಿಗೆ ನಡೆಯಲಿದ್ದು, ಈ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ಪ್ರಮುಖ ಮಠಗಳ ಸ್ವಾಮೀಜಿಗಳು, ಮುಖ್ಯಮಂತ್ರಿ, ಸಚಿವರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬ್ರಹ್ಮಕಲಶೋತ್ಸವ ಅಂಗವಾಗಿ ಏ.18 ರಂದು ಹೊರೆಕಾಣಿಕೆ ಮೆರವಣಿಗೆಯು ಬಂಟ್ಸ್ ಹಾಸ್ಟೆಲ್ ಮೈದಾನದಿಂದ ಹೊರಟು ಕ್ಷೇತ್ರ ತಲುಪಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

‘ಏಪ್ರಿಲ್‌ 20 ರಂದು ಬ್ರಹ್ಮಕಲಶೋತ್ಸವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಲಿದ್ದು, ಸಚಿವ ಎಸ್. ಅಂಗಾರ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅಂದು ಸಂಜೆ 5.30 ರಿಂದ ಶಕ್ತಿ ರೆಸಿಡೆನ್ಸಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಏ.21 ರಂದು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಹಾಪೂಜೆ ನೆರವೇರಲಿದೆ. ಸಂಜೆ ಹರಿಕಥಾ ಸತ್ಸಂಗ ಹಾಗೂ ಸನಾತನ ನಾಟ್ಯಾಲಯದಿಂದ ಸನಾತನ ನೃತ್ಯಾಂಜಲಿ ನಡೆಯಲಿದೆ’ ಎಂದು ತಿಳಿಸಿದರು.

ಏ.22 ರಂದು ಮಹಾಪೂಜೆ ಹೋಮಗಳು ನೆರವೇರಲಿವೆ. ಸಂಜೆ ಸೌರಭ ನೃತ್ಯ ಕಲಾ ಪರಿಷತ್ ಮಂಗಳೂರು ಅವರಿಂದ ಕೃಷ್ಣ ನೃತ್ಯ ಮಾಧುರ್ಯಂ ನೃತ್ಯ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್‌, ಅನೇಕ ಗಣ್ಯರು ಭಾಗವಹಿಸಲಿದ್ದು, ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಅಧ್ಯಕ್ಷತೆ ವಹಿಸುವರು.ತುಳುನಾಡ ತುಡರ್ ಮಂಗಳೂರು ಅವರಿಂದ ಮಾರಿಯಮ್ಮ ತುಳು ಜಾನಪದ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕೆ.ಸಿ. ನಾಯಕ್, ಸುಗುಣಾ ನಾಯಕ್, ಪ್ರಧಾನ ಕಾರ್ಯದರ್ಶಿ ಎಚ್.ಕೆ. ಪುರುಷೋತ್ತಮ್, ಕೋಶಾಧಿಕಾರಿ ಕೃಷ್ಣಪ್ರಸಾದ್ ಮಡ್ತಿಲ, ಡಾ.ಅನಂತಕೃಷ್ಣ ಭಟ್, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಶಕೀಲಾ ಕಾವ, ವನಿತಾ ಪ್ರಸಾದ್, ಶಕ್ತಿ ರೆಸಿಡೆನ್ಸಿಯಲ್‌ ಸ್ಕೂಲ್‌ನ ಮುಖ್ಯ ಸಂಚಾಲಕ ರಮೇಶ ಕೆ, ಇದ್ದರು.

ಮೊದಲ ಬಾರಿಗೆ ವಿಶಿಷ್ಟ ಬ್ರಹ್ಮಕಲಶೋತ್ಸವ

ಏ.25 ರಂದು ನಸುಕಿನ ವೇಳೆ 3.48 ರಿಂದ 4.21 ರ ನಡುವೆ ಬರುವ ಲಗ್ನ ಮುಹೂರ್ತದಲ್ಲಿ ಅಷ್ಟಬಂಧ ಲೇಪನ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಇದು ಮೊದಲ ಬಾರಿಗೆ ನಡೆಯುವ ವಿಶೇಷ ಸನ್ನಿವೇಶ. ಬಹಳಷ್ಟು ಬ್ರಹ್ಮಕಲಶಗಳು ಬೆಳಿಗ್ಗೆ 8 ರ ಬಳಿಕ ನಡೆದರೆ ಇಲ್ಲಿ ಕೊಂಚ ಬೇಗನೆ ಮಾಡಲಾಗುತ್ತದೆ. ನಂತರ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ ಸಂಗೀತ ನೃತ್ಯ ವೈಭವ ನಡೆಯಲಿದ್ದು, ಸಮಾರೋಪ ಸಮಾರಂಭದೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಏ.29 ರಂದು ವಾರ್ಷಿಕ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ ಎಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ತಿಳಿಸಿದರು.

ವಿಶೇಷ ಚಂಡಿಕಾ ಹವನ

‘ಏ.23 ರಂದು ಕ್ಷೇತ್ರದಲ್ಲಿ ವಿಶೇಷ ಚಂಡಿಕಾ ಹವನ ನಡೆಯಲಿದೆ. ಸ್ಯಾಕ್ಸೋಫೋನ್ ವಾದನ ಮತ್ತು ಭರತ ನಾಟ್ಯಗಳಲ್ಲದೆ ಅಂದು ರಾತ್ರಿ ಕೃಷ್ಣ ಲೀಲಾಮೃತಂ ಯಕ್ಷಗಾನ ಬಯಲಾಟ ನಡೆಯಲಿದೆ. ಏ 24 ರಂದು ಬ್ರಹ್ಮಕಲಶೋತ್ಸವ ಸ್ಥಾಪನೆ ಇತ್ಯಾದಿ ವೈದಿಕ ಕಾರ್ಯಕ್ರಮಗಳಿದ್ದು, ಸಂಜೆ ರಾಗ ಧ್ವನಿ ತಂಡದಿಂದ ಗೀತ- ಗಾನ ಲಹರಿ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಪಾಲ್ಗೊಳ್ಳಲಿದ್ದಾರೆ. ನಂತರ ಅಂಕುಶ್ ಎನ್.ನಾಯಕ್ ಅವರಿಂದ ಸಿತಾರ್ ವಾದನ ನಡೆಯಲಿದೆ’ ಎಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT