ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಚ್ಚನಾಡಿ: ತ್ಯಾಜ್ಯ ನೀರಿಗೆ ತಡೆಗೋಡೆ

ತುರ್ತು ಕಾಮಗಾರಿ ಆರಂಭಿಸಿದ ಮಂಗಳೂರು ಮಹಾನಗರ ಪಾಲಿಕೆ
Last Updated 21 ಆಗಸ್ಟ್ 2019, 15:45 IST
ಅಕ್ಷರ ಗಾತ್ರ

ಮಂಗಳೂರು: ಪಚ್ಚನಾಡಿ ಪ್ರದೇಶದ ಮಂದಾರ ಬಡಾವಣೆಯ ಸಮೀಪದ ಕಂಜಿರಾಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸ್ಥಳದಿಂದ ಹರಿಯುತ್ತಿರುವ ಕೊಳಚೆ ನೀರು ನೈಸರ್ಗಿಕ ತೊರೆಗೆ ಸೇರದಂತೆ ಅಡ್ಡಲಾಗಿ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಮಂಗಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.

‘ಘನತ್ಯಾಜ್ಯ ಸುರಿಯುತ್ತಿರುವ ಪ್ರದೇಶದಲ್ಲಿ ಅಪಾರ ಪ್ರಮಾಣದ ನೀರಿನ ಸಂಗ್ರಹವಿದೆ. ಅಲ್ಲಿಂದ ಹರಿಯುತ್ತಿರುವ ಕೊಳಚೆ ನೀರು ತೊರೆಗೆ ಸೇರದಂತೆ ತಡೆಯಲು ತುರ್ತು ಕ್ರಮ ಕೈಗೊಳ್ಳಬೇಕಿದೆ. ಅದಕ್ಕಾಗಿ ತಾತ್ಕಾಲಿಕ ತಡೆಗೋಡೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಪಾಲಿಕೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಸೇಲಂ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಯಾಲಜಿಕಲ್‌ ಸರ್ವೆ ಆಫ್‌ ಇಂಡಿಯಾ, ಜಿಯೋ ಮರೈನ್‌ ಇನ್‌ಸ್ಟಿಸ್ಯೂಟ್‌, ಸುರತ್ಕಲ್‌ ಎನ್‌ಐಟಿಕೆ ಮತ್ತು ಕೊಯಮತ್ತೂರಿನಿಂದ ಬಂದಿರುವ ತಜ್ಞರು ಸ್ಥಳಕ್ಕೆ ಭೇಟಿನೀಡಿ ಅಧ್ಯಯನ ನಡೆಸಿದ್ದಾರೆ. ಅವರು ನೀಡುವ ವರದಿಗಳಲ್ಲಿನ ಶಿಫಾರಸು ಆಧರಿಸಿ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ತ್ಯಾಜ್ಯವನ್ನು ಸಂಪೂರ್ಣ ತೆರವುಗೊಳಿಸಿ, ಅಲ್ಲಿನ ಜಮೀನನ್ನು ಯಥಾಸ್ಥಿತಿಗೆ ತರಬೇಕೆಂಬ ಬೇಡಿಕೆ ಸ್ಥಳೀಯರಿಂದ ವ್ಯಕ್ತವಾಗಿದೆ. ಅತ್ಯುತ್ತಮ ಸಲಹೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಚ್ಚನಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವುದಕ್ಕೆ ಪ್ರತ್ಯೇಕವಾದ ನೋಡೆಲ್‌ ಅಧಿಕಾರಿಯನ್ನು ನೇಮಿಸುವುದಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ತ್ಯಾಜ್ಯ ನೀರು ಒಂದು ಕಿಲೋ ಮೀಟರ್‌ಗೂ ಹೆಚ್ಚು ದೂರ ಹರಿದಿದೆ. ತ್ಯಾಜ್ಯ ರಾಶಿಯ ಕುಸಿತದಿಂದ 12 ಎಕರೆಗೂ ಹೆಚ್ಚು ಕೃಷಿ ಜಮೀನಿಗೆ ಹಾನಿಯಾಗಿದೆ. ಅಡಿಕೆ, ತೆಂಗು, ಬಾಳೆ, ಕರಿಮೆಣಸು ಬೆಳೆಗೆ ಹಾನಿಯಾಗಿದೆ. ಕೊಳ, ಕೆರೆ, ಬಾವಿ ಸೇರಿದಂತೆ ಸುತ್ತಲಿನ ಪ್ರದೇಶಗಳ ಜಲಮೂಲಗಳು ಮಲಿನಗೊಂಡಿವೆ.

ತ್ಯಾಜ್ಯ ರಾಶಿಯು ಕುಸಿದು ಬಿದ್ದಿರುವುದರಿಂದ ಮಂಗಳಜ್ಯೋತಿಯಿಂದ ಮಂದಾರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮುಚ್ಚಿಹೋಗಿದೆ. ಕುಡುಪು ಮಾರ್ಗವಾಗಿ ಮಂದಾರ ಸಂಪರ್ಕಿಸುವ ರಸ್ತೆಯ ದುರಸ್ತಿ ಕಾಮಗಾರಿ ಆರಂಭಿಸಲಾಗಿದೆ. ತೊಂದರೆಗೊಳಗಾಗಿದ್ದ 24 ಕುಟುಂಬಗಳನ್ನು ತಾತ್ಕಾಲಿಕವಾಗಿ ನೀರುಮಾರ್ಗ ಸಮೀಪದ ಬೈತುರ್ಲಿಯ ಕರ್ನಾಟಕ ಗೃಹ ಮಂಡಳಿಯ ಫ್ಲ್ಯಾಟ್‌ಗಳಿಗೆ ಸ್ಥಳಾಂತರಿಸಲಾಗಿದೆ. ಕುಸಿದು ಬಿದ್ದಿರುವ ಘನ ತ್ಯಾಜ್ಯದ ರಾಶಿ ಮತ್ತು ಅದರಿಂದ ಹರಿಯುತ್ತಿರುವ ನೀರು ಇಡೀ ಪ್ರದೇಶದಲ್ಲಿ ಅಸಹನೀಯವಾದ ದುರ್ನಾತವನ್ನು ಸೃಷ್ಟಿಸಿದೆ.

ಕಾಂಗ್ರೆಸ್‌ ಮುಖಂಡರ ಭೇಟಿ: ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ ಕುಮಾರ್‌, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ ನೇತೃತ್ವದ ಕಾಂಗ್ರೆಸ್‌ ಮುಖಂಡರ ನಿಯೋಗ ಪಚ್ಚನಾಡಿಯ ಮಂದಾರ ಪ್ರದೇಶಕ್ಕೆ ಬುಧವಾರ ಭೇಟಿನೀಡಿ ತ್ಯಾಜ್ಯ ರಾಶಿ ಕುಸಿತದಿಂದ ಆಗಿರುವ ಹಾನಿ ಕುರಿತು ಮಾಹಿತಿ ಪಡೆಯಿತು.

ಮಾಧ್ಯಮ ಪ್ರತಿನಿಧಿಗಳ ಜೊತೆ ಸ್ಥಳದಲ್ಲಿ ಮಾತನಾಡಿದ ರಮಾನಾಥ ರೈ, ‘ತ್ಯಾಜ್ಯ ರಾಶಿ ಕುಸಿತ ಒಂದು ದೊಡ್ಡ ದುರಂತ. ಇದರಿಂದ ಮನೆಗಳು, ಕೃಷಿ ಜಮೀನುಗಳು ಸಂಪೂರ್ಣವಾಗಿ ನಾಶವಾಗಿವೆ. ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 100 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್‌ ಘೋಷಿಸಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿನೀಡಿದ್ದ ಬಿಜೆಪಿ ಮುಖಂಡರು ಹಿಂದಿನ ಸರ್ಕಾರವನ್ನು ದೂಷಿಸಿದ್ದಾರೆ. ಹಿಂದಿನ ಸರ್ಕಾರವನ್ನು ದೂರುವ ಬದಲಿಗೆ ಈಗ ಅವರು ಸರಿಯಾದ ರೀತಿಯಲ್ಲಿ ಕೆಲಸ ಮಾಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿ ಎಂದರು.

ಯು.ಟಿ.ಖಾದರ್‌ ಮಾತನಾಡಿ, ‘ಘಟನೆ ನಡೆದು 15 ದಿನಗಳಾದರೂ ಸರ್ಕಾರ ಯಾವುದೇ ಸರಿಯಾದ ಕ್ರಮ ಕೈಗೊಂಡಿಲ್ಲ. ಸಂಸದರು ಮತ್ತು ಶಾಸಕರು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಸ್ಥಳಕ್ಕೆ ಕರೆತಂದು ಪರಿಸ್ಥಿತಿಯ ಮನವರಿಕೆ ಮಾಡಬೇಕು. ಸಂತ್ರಸ್ತ ಕುಟುಂಬಗಳ ಸ್ಥಳಾಂತರ ಮತ್ತು ಪರಿಹಾರ ಕಾರ್ಯಕ್ಕೆ ಅಗತ್ಯ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿಯವರಿಗೆ ಕಾಂಗ್ರೆಸ್‌ ಮನವಿ ಸಲ್ಲಿಸಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT