ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ | ನಿಪಾ ವೈರಾಣು ಸೋಂಕು ಭೀತಿ: ಜ್ವರ ಪೀಡಿತರ ಮೇಲೆ ವಿಶೇಷ ನಿಗಾ

Published 13 ಸೆಪ್ಟೆಂಬರ್ 2023, 12:47 IST
Last Updated 13 ಸೆಪ್ಟೆಂಬರ್ 2023, 12:47 IST
ಅಕ್ಷರ ಗಾತ್ರ

ಮಂಗಳೂರು: ಕೇರಳದ ಕೊಯಿಕ್ಕೋಡ್‌ ಜಿಲ್ಲೆಯಲ್ಲಿ ಇಬ್ಬರು ನಿಪಾ ವೈರಾಣುವಿನ ಜ್ವರದಿಂದ ಮೃತಪಟ್ಟಿದ್ದು, ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಈ ಸೋಂಕು ಹರಡದಂತೆ ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯಲ್ಲಿ ಜ್ವರದಿಂದ ಬಳಲುವವರ ಮೇಲೆ ವಿಶೇಷ ನಿಗಾ ಇಡುವಂತೆ ಇಲಾಖೆ ಸೂಚಿಸಿದೆ.

ಈ ಕುರಿತು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುದರ್ಶನ್‌, ‘ಕೇರಳ ರಾಜ್ಯಕ್ಕೆ ಹೊಂದಿಕೊಂಡು ಇರುವ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜ್ವರ ಸಮೀಕ್ಷೆ ನಡೆಸಲಿದ್ದೇವೆ. ಜ್ವರಪೀಡಿತರಲ್ಲಿ ನಿಪಾ ಸೋಂಕಿನ ಲಕ್ಷಣಗಳಿದ್ದರೆ ವಿಶೇಷ ನಿಗಾ ವಹಿಸಲಿದ್ದೇವೆ. ಸಾಮಾನ್ಯ ಜ್ವರ ಬಂದರೂ ಜನ ನಿರ್ಲಕ್ಷಿಸದೇ ವೈದ್ಯರನ್ನು ಕಾಣಬೇಕು’ ಎಂದರು.

‘ನಗರದ ಜಿಲ್ಲಾ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಯಲ್ಲಿ ನಿಪಾ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಅನ್ನು ಗೊತ್ತುಪಡಿಸಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲೂ ಈ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಹೊಂದಿರುವಂತೆ ಸೂಚನೆ ನೀಡಲಾಗಿದೆ. ನಿಪಾ ರೋಗ ಲಕ್ಷಣ ಕಂಡುಬಂದವರಿಗೆ ಈ ವಾರ್ಡ್‌ಗಳಲ್ಲೇ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಾ.ನವೀನಚಂದ್ರ ಕುಲಾಲ್‌, ‘ಜಿಲ್ಲೆಯಲ್ಲಿ ಇದುವರೆಗೆ ಎಲ್ಲೂ ನಿಪಾ ವೈರಾಣು ಸೊಂಕು ಪತ್ತೆಯಾಗಿಲ್ಲ. ಈ ಕಾಯಿಲೆ ಬಗ್ಗೆ ಜನ ಗಾಬರಿಪಡಬೇಕಿಲ್ಲ. ರೋಗ ಪೀಡಿತರ ಸಾವಿನ ಪ್ರಮಾಣ ಶೇ 60ರಷ್ಟು ಇರುವುದರಿಂದ ಹಾಗೂ ಇದು ಬಾವಲಿಗಳು, ಹಕ್ಕಿಗಳು ಹಾಗೂ ಪ್ರಾಣಿಗಳ ಮೂಲಕವೂ ಹರಡುವ ಸಾಧ್ಯತೆ ಇರುವುದರಿಂದ ರೊಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಕ್ಕಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಸೋಂಕು ಪತ್ತೆಯಾದ ಪ್ರದೇಶದಲ್ಲಿ ಬಾವಲಿಗಳ ಮೂಲಕ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸೇಂದಿಯನ್ನು ಸೇವಿಸುವುದು ಕೂಡ ಅಪಾಯಕಾರಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT