ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಸಂಸ್ಕೃತಿ, ಸಂಸ್ಕಾರ ಮೈಗೂಡಿಸಿ: ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ
Last Updated 25 ಫೆಬ್ರುವರಿ 2023, 12:31 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಹಿಂದೂ ಧರ್ಮದ ಮೌಲ್ಯ ಬಲಯುತವಾದ ಕಾರಣ ಭಾರತದ ಮೇಲೆ ಅದೆಷ್ಟೋ ಬಾರಿ ದಾಳಿ ನಡೆದರೂ ಭಾರತ ಶಕ್ತಿಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಭಾರತದ ಶಕ್ತಿ ಇನ್ನಷ್ಟು ಬಲಯುತವಾಗಲು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಸನಾತನ ಸಂಸ್ಕೃತಿ, ಭಾರತೀಯ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟ ಬಂದ ಬ್ರಹ್ಮಕಲಶೋತ್ಸವದ ಶುಕ್ರವಾರದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

‘ಜಾತಿ ನೆಲೆಯಲ್ಲಿ ಹಿಂದೂ ಧರ್ಮವನ್ನು ಕಾಣಬಾರದು. ಜಾತಿ ಮನೆಯೊಳಗೆ ಸೀಮಿತವಾಗಬೇಕು. ಅದು ಬೀದಿಗೆ ಬಂದಾಗ ಹಿಂದೂ ಧರ್ಮದ ಮೌಲ್ಯ ಕಳೆದುಕೊಳ್ಳುತ್ತೇವೆ. ಹಿಂದೂ ಧರ್ಮ ಶಕ್ತಿಯುತವಾಗಿದೆ. ಅದರ ಮೌಲ್ಯ ಏನು ಎಂಬುದನ್ನು ವೇಣೂರು ಬ್ರಹ್ಮಕಲಶೋತ್ಸವದ ನಗರ ಅಲಂಕಾರ ಮತ್ತು ಸ್ವಯಂ ಸೇವಕರ ತಂಡವನ್ನು ನೋಡಿದಾಗ ಅರಿಯಬಹುದು. ಇಂತಹ ಕಾರ್ಯ ಪ್ರತೀ ಬ್ರಹ್ಮಕಲಶೋತ್ಸವದಲ್ಲಿ ನಡೆಯಬೇಕು’ ಎಂದರು.

‘ಇಂದು ಇಂಗ್ಲಿಷ್‌ ವ್ಯಾಮೋಹದಿಂದ ತಂದೆ– ತಾಯಿಯ ಮೌಲ್ಯ ಕಡಿಮೆಯಾಗುತ್ತಿದೆ. ಶಾಲೆ, ದೇವಸ್ಥಾನ ಸಂಸ್ಕಾರದ ಕೊರತೆ ಕಾಣುತ್ತಿದೆ. ಪ್ರತಿ ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ತಾಯಂದಿರಿಂದ ಆಗಬೇಕು’ ಎಂದರು.

ಉಡುಪಿ ಏಕಜಾತಿ ಧರ್ಮಪೀಠ ದ್ವಾರಕಾಮಯಿ ಶಂಕರಪುರದ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡುತ್ತಾ, ‘ಭಗವಂತನಲ್ಲಿ ಶರಣಾಗತರಾದಾಗ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯ. ಪ್ರತಿಯೊಬ್ಬರು ಭಗವಂತ ನೀಡಿದ ಸಂಪತ್ತಿನಲ್ಲಿ ನೊಂದವರ ಸೇವೆಯಲ್ಲಿ ತೊಡಗಬೇಕು. ನಮ್ಮ ಮಠದಲ್ಲಿ ನೊಂದವರ ಸೇವೆ ಮತ್ತು ಹೆಣ್ಣು ಮಕ್ಕಳ ಜೀವನಕ್ಕೆ ಶಕ್ತಿತುಂಬುವ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ದಾನಿಗಳ ನೆರವಿನಿಂದ ಬೆಳ್ತಂಗಡಿಗೂ ವಿಸ್ತರಿಸುವ ಚಿಂತನೆ ಇದೆ’ ಎಂದರು.

ಅಳದಂಗಡಿ ಸತ್ಯದೇವತಾ ದೈವಸ್ಥಾನದ ಅಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಮಾಜಿ ಸಚಿವ ಕೆ. ಗಂಗಾದರ ಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಬಂಟ್ವಾಳ ಬೆಳ್ಳೂರು ರಾಜ್ಯಗುತ್ತಿನ ಕೃಷ್ಣಪ್ರಸಾದ್ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಿ.ಎನ್ ಪುರುಷೋತ್ತಮ ರಾವ್, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಸುಂದರ ಹೆಗ್ಡೆ, ಪಿ. ಧರಣೇಂದ್ರ ಕುಮಾರ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಜ್ಞನಾರಾಯಣ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯ ಸತೀಶ ಕೇರಿಯಾರ್, ಸಮಿತಿಯ ಸಂಚಾಲಕರಾದ ಯೋಗೀಶ್ ಬಿಕ್ರೊಟ್ಟು, ವಿಜಯ ಗೌಡ, ರಾಜೇಶ್ ಮೂಡುಕೋಡಿ, ಪ್ರಶಾಂತ್ ಹೆಗ್ಡೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಇದ್ದರು.

‘ಸೀಮೆಯ ಒಡೆಯ ಮಹಾಲಿಂಗೇಶ್ವರ’ ಭಕ್ತಿ ಗೀತೆ ಧ್ವನಿಸುರುಳಿ ಬಿಡುಗಡೆಗೊಳಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT