ಬೆಳ್ತಂಗಡಿ: ‘ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯ ಕೊಲೆ ಆರೋಪಿಗಳನ್ನು ಪತ್ತೆ ಮಾಡಲು ಸಿಬಿಐ ಕೂಡ ವಿಫಲವಾಗಿದೆ. ಈ ಕಾರಣದಿಂದ ಈ ಪ್ರಕರಣವನ್ನು ಮುಖ್ಯಮಂತ್ರಿ ಉನ್ನತ ಮಟ್ಟದ ತನಿಖೆಗೊಳಪಡಿಸಿ ನ್ಯಾಯ ಕೊಡಿಸಬೇಕು’ ಎಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗೌರವಾಧ್ಯಕ್ಷ ಎಚ್.ಪದ್ಮಗೌಡ ಬೆಳಾಲು ಆಗ್ರಹಿಸಿದರು.
ಬೆಳ್ತಂಗಡಿ ಹಳೆಕೋಟೆ ವಾಣಿ ಪಿಯು ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣದ ಬಗ್ಗೆ ಸೌಜನ್ಯ ಪೋಷಕರು, ಸಮಾಜದವರು ಅಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿಯ ಸಾವು ಸಮಾಜಕ್ಕೆ ನೋವು ತಂದಿದೆ. ನೈಜ ಅಪರಾಧಿಗಳನ್ನು ಕಾನೂನಿನಡಿ ತಂದು ಶಿಕ್ಷೆ ನೀಡಲು ವಿಫಲವಾಗಿರುವುದು ಬೇಸರದ ಸಂಗತಿ. ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘದಿಂದ ಸಮಾಜದ ಹಿರಿಯರ, ಸಮಿತಿಗಳ ಸಭೆ ಕರೆಯಲಾಗಿದ್ದು, ಶೀಘ್ರವೇ ತಹಶೀಲ್ದಾರ್ ಮೂಲಕ ಹಾಗೂ ಖುದ್ದಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ, ಉಪಾಧ್ಯಕ್ಷರಾದ ನಾರಾಯಣ ಗೌಡ, ಕೃಷ್ಣಪ್ಪ ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಜತೆ ಕಾರ್ಯದರ್ಶಿ ಕೆ.ಎಂ.ಶ್ರೀನಾಥ್, ಸಂಘಟನಾ ಕಾರ್ಯದರ್ಶಿ ಜಯಾನಂದ ಗೌಡ, ನಿರ್ದೇಶಕರಾದ ಧರ್ಣಪ್ಪ ಗೌಡ, ವಿಜಯ ಕುಮಾರ್, ಉಷಾದೇವಿ, ಭವಾನಿ ಕೆ.ಗೌಡ, ಗೋಪಾಲಕೃಷ್ಣ ಗೌಡ, ಯುವರಾಜ್ ಅನಾರ್, ಹರೀಶ್ ಗೌಡ, ರವೀಂದ್ರನಾಥ್, ಯುವ ವೇದಿಕೆ ಅಧ್ಯಕ್ಷ ಯಶವಂತ ಬಿ., ವಾಣಿ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ನಿರ್ದೇಶಕ ಮಾಧವ ಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.