ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಘಡ ಸಂಭವಿಸಿದರೆ ಕ್ರಿಮಿನಲ್ ಪ್ರಕರಣ

ಬಿ.ಸಿ.ರೋಡ್- ಅಡ್ಡಹೊಳೆ ಹೆದ್ದಾರಿ ಅವ್ಯವಸ್ಥೆ: ಜಿಲ್ಲಾಧಿಕಾರಿ ಅಸಮಾಧಾನ
Last Updated 6 ಅಕ್ಟೋಬರ್ 2020, 3:09 IST
ಅಕ್ಷರ ಗಾತ್ರ

ಮಂಗಳೂರು: ಬಿ.ಸಿ. ರೋಡ್‌ನಿಂದ ಅಡ್ಡಹೊಳೆವರೆಗಿನ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹೆದ್ದಾರಿಗಳಲ್ಲಿರುವ ಗುಂಡಿ- ಹೊಂಡಗಳನ್ನು ಮುಚ್ಚಿಸುವ ಕೆಲಸ ತಕ್ಷಣ ಮಾಡಬೇಕು. ಒಂದು ವೇಳೆ ಯಾವುದೇ ರೀತಿಯ ಅವಘಡ ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ ರಸ್ತೆ ತೀರಾ ಹದಗೆಟ್ಟಿದೆ. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ. ಈವರೆಗೆ ಕಾಮಗಾರಿಗೆ ಮಳೆ ಅಡ್ಡಿಯಾಗಿತ್ತು. ಇನ್ನು ಮುಂದೆ ಯಾವುದೇ ಕಾರಣ ಬೇಡ. 15 ದಿನಗಳಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ನಾಲ್ಕು ವಲಯಗಳ ಆಯ್ಕೆ:

ಪಚ್ಚನಾಡಿ ತ್ಯಾಜ್ಯ ಹರಿದು ಉಂಟಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ತ್ಯಾಜ್ಯದ ವಿಲೇವಾರಿ ನಡೆದಿಲ್ಲ. ಇದರಿಂದ ತೊಂದರೆಯಾಗುತ್ತಿದೆ. ನಗರ ವ್ಯಾಪ್ತಿಯ ಟನ್‌ಗಟ್ಟಲೆ ಕಸ ಅಲ್ಲಿಗೆ ಮತ್ತೆ ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ರಾಜೇಂದ್ರ, ಅಲ್ಲಿರುವ ತ್ಯಾಜ್ಯ ವಿಲೇವಾರಿಗೆ ಸರ್ಕಾರದ ಸೂಚನೆಗೆ ಕಾಯಲಾಗುತ್ತಿದೆ. ಇದರ ನಡುವೆಯೇ ನಾಲ್ಕು ವಲಯಗಳನ್ನು ಆಯ್ಕೆ ಮಾಡಿ, ಆಯಾ ಸ್ಥಳಗಳಲ್ಲಿ ಕಸ ವಿಲೇವಾರಿ ಮಾಡಲು ಜಾಗ ಗುರುತಿಸುವಂತೆ ಸೂಚನೆ ನೀಡಲಾಗಿದೆ. ಒಂದು ವಾರದೊಳಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಪಿಂಚಣಿ ಅದಾಲತ್‌ ಮಾಡಿ:

ಶಾಸಕ ಯು.ಟಿ. ಖಾದರ್ ಮಾತನಾಡಿ, ಪಿಂಚಣಿದಾರರಿಗೆ ಪಿಂಚಣಿ ವಿಳಂಬವಾಗುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಪಿಂಚಣಿ ಅದಾಲತ್ ನಡೆಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ,ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತಾಲ್ಲೂಕು ಮಟ್ಟದಲ್ಲಿ ಪಿಂಚಣಿ ಅದಾಲತ್ ಮಾಡಲಾಗುವುದು ಎಂದರು.

ಮಂಗಳೂರು ಅಂಚೆ ವಿಭಾಗದ ಅಧೀಕ್ಷಕ ಶ್ರೀಹರ್ಷ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಸಿದ್ಧಪಡಿಸಿರುವ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಹಿತಿ ಕೈಪಿಡಿಯನ್ನು ಸಂಸದ ನಳಿನ್‌ಕುಮಾರ್ ಕಟೀಲ್‌ ಬಿಡುಗಡೆ ಮಾಡಿದರು.

ಸಭೆಯಲ್ಲಿ ಶಾಸಕರಾದ ಹರೀಶ್ ಪೂಂಜ, ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸ್ಥಾಯಿ ಸಮಿತಿ ಅಧ್ಯಕ್ಷರಾದ ರವೀಂದ್ರ ಕಂಬಳಿ, ಮಮತಾ, ಧನಲಕ್ಷ್ಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿ ಪ್ರಸಾದ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ಅರುಣಾಂಗ್ಷು ಗಿರಿ ಉಪಸ್ಥಿತರಿದ್ದರು.

15 ದಿನಗಳಲ್ಲಿ ಹಕ್ಕು ಪತ್ರ ವಿತರಿಸಿ

ಮಂಗಳೂರು: ಸ್ಥಳೀಯವಾಗಿ ಲಭ್ಯವಿರುವ ನಿವೇಶನಗಳಲ್ಲಿ ಸಮಸ್ಯೆ ಇಲ್ಲವಾದಲ್ಲಿ ನಿವೇಶನ ರಹಿತ ಅರ್ಹರಿಗೆ 15 ದಿನಗಳಲ್ಲಿ ಹಕ್ಕುಪತ್ರ ನೀಡುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಮನೆ ನಿವೇಶನಕ್ಕೆ ಸಂಬಂಧಿಸಿದಂತೆ ಕಾಯ್ದಿರಿಸಲಾದ ಜಮೀನಿನ ಕುರಿತಾದ ಚರ್ಚೆಯ ವೇಳೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ನಗರ ಪ್ರದೇಶದಲ್ಲಿ 9ಸಾವಿರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 20ಸಾವಿರ ಮಂದಿಯಿಂದ ನಿವೇಶನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. 120 ಎಕರೆ ಜಮೀನನ್ನು ಮೀಸಲಿರಿಸಲಾಗಿದೆ. ಕುಮ್ಕಿ, ಸಂರಕ್ಷಿತ ಅರಣ್ಯ ಸೇರಿದಂತೆ ಯಾವುದೇ ಸಮಸ್ಯೆ ಇಲ್ಲದ ಲಭ್ಯ ಜಮೀನಿನಲ್ಲಿ ಮುಂದಿನ 15 ದಿನಗಳಲ್ಲಿ ಹಕ್ಕು ಪತ್ರ ವಿತರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು.

ಆಯುಷ್ಮಾನ್: 73 ಆಸ್ಪತ್ರೆ ನೋಂದಣಿ

ಜಿಲ್ಲೆಯಲ್ಲಿ ಈ ಹಿಂದೆ ಸರ್ಕಾರಿ ಸೇರಿದಂತೆ ಒಟ್ಟು 13 ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್‌–19 ಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಇದೀಗ ಮತ್ತೆ 60 ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಈ ಎಲ್ಲ ಆಸ್ಪತ್ರೆಗಳಲ್ಲಿ ಈ ಯೋಜನೆಯಡಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ನಿತ್ಯ 300 ರಿಂದ 400ರಷ್ಟು ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್‌–19 ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಸಂದರ್ಭದಲ್ಲಿ ಜಿಲ್ಲಾಡಳಿತವೇ ಆಂಬುಲೆನ್ಸ್ ಮೂಲಕ ಖಾಲಿ ಇರುವ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ 10 ದಿನಗಳಲ್ಲಿ ಕಾರ್ಯಗತವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT