ಬುಧವಾರ, ಆಗಸ್ಟ್ 10, 2022
23 °C
ತಜ್ಞರೊಂದಿಗೆ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ

ಮಿಂಚಿಪದವು ‘ಎಂಡೋ’ ಪ್ರಕರಣಕ್ಕೆ ಮರುಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಮಿಂಚಿಪದವು ‘ಎಂಡೋ’ ಪ್ರಕರಣ ಮರುಜೀವ ಪಡೆದುಕೊಂಡಿದೆ. ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಸುರತ್ಕಲ್ ಎನ್ಐಟಿಕೆ ಸಂಸ್ಥೆಯ ಜಿಯಾಲಜಿಸ್ಟ್ ವಿಭಾಗದ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.

ಕರ್ನಾಟಕ, ಕೇರಳ ಗಡಿಪ್ರದೇಶದಲ್ಲಿರುವ ಕೇರಳದ ಮಿಂಚಿಪದವು ಎಂಬಲ್ಲಿದ್ದ ಪಾಳು ಬಾವಿಯೊಂದರಲ್ಲಿ ಕೇರಳ ಸರ್ಕಾರ 30 ವರ್ಷಗಳ ಹಿಂದೆ ಟನ್‌ಗಟ್ಟಲೆ ನಿಷೇಧಿತ ಎಂಡೋಸಲ್ಫಾನ್ ರಾಸಾಯನಿಕಗಳನ್ನು ಹೂತು ಹಾಕಿದೆ. ಇದರ ಪರಿಣಾಮವಾಗಿ ಈ ಗಡಿಪ್ರದೇಶದಲ್ಲಿ ಎಂಡೋ ಪೀಡಿತರಾಗಿರುವ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕೆಲವು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಈ ವಿಷಯವು ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ನಿರ್ಣಯಿಸಲಾಗಿತ್ತು.

ಈ ಕಾರಣ ಭೇಟಿ ನೀಡಿದ ಜಿಲ್ಲಾಧಿಕಾರಿ, ಪರಿಸರ ಎಂಡೋ ಪೀಡಿತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಕರ್ನೂರು, ಗಾಳಿಮುಖ, ಮೈರೋಳು, ಮಿಂಚಿಪದವಿನಲ್ಲಿ ಸಾಕಷ್ಟು ಮಂದಿ ಅಂಗವಿಕಲರು, ಎಂಡೋ ಪೀಡಿತರು ಇದ್ದಾರೆ.

ಎಸ್ಪಿ ಹೃಷಿಕೇಶ್ ಸೋನಾವಣೆ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ಕಂದಾಯ ನಿರೀಕ್ಷಕ ಮಹೇಶ್, ಎಎಸ್ಐ ತಿಮ್ಮಯ್ಯ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸದಸ್ಯರಾದ ಶ್ರೀರಾಮ ಪಕ್ಕಳ ಕರ್ನೂರು, ಪ್ರದೀಪ್ ರೈ ಕರ್ನೂರು, ಉಮಾನಾಥ ಪೂಜಾರಿ, ಮಾಜಿ ಸದಸ್ಯರಾದ ಖಾದರ್ ಎನ್.ಕರ್ನೂರು, ಎಂ.ಬಿ.ಇಬ್ರಾಹಿಂ ಇದ್ದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2013ರಲ್ಲಿ ಇಲ್ಲಿನ 2 ಬಾವಿಗಳಿಂದ ನೀರಿನ ಮಾದರಿ ಸಂಗ್ರಹಿಸಿ ವಿಷಕಾರಿಯಾಗಿಲ್ಲ ಎಂದು ವರದಿ ನೀಡಿತ್ತು. ಈ ಬಗ್ಗೆ ಗ್ರಾಮಸ್ಥರಿಗೆ ತೃಪ್ತಿ ಇರಲಿಲ್ಲ.

ಮಾನವ ಹಕ್ಕುಗಳ ಹೋರಾಟಗಾರ ಡಾ. ರವೀಂದ್ರನಾಥ ಶ್ಯಾನುಭಾಗ ನೇತೃತ್ವದ ತಜ್ಞರ ತಂಡ 2015ರಲ್ಲಿ ಭೇಟಿ ನೀಡಿ ಅಧ್ಯಯನ ನಡೆಸಿತ್ತು.

ಆಗ ಪುತ್ತೂರು ಉಪವಿಭಾಗಾಧಿಕಾರಿ ಆಗಿದ್ದ ಡಾ. ಕೆ.ವಿ.ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು