ಈ ವರ್ಷದಿಂದಲೇ ನೂತನ ಶಿಕ್ಷಣ ನೀತಿ ಜಾರಿ

ಮಂಗಳೂರು: ಶಿಕ್ಷಣ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಈ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೆಂಟರ್ ಆಫ್ ಎಕ್ಸ್ಲೆನ್ಸ್, ರಿಸರ್ಚ್ ಡಿಸೈನ್ ಲ್ಯಾಬ್ ಮತ್ತು ಇಂಡಸ್ಟ್ರೀ ಹಬ್ ಉದ್ಘಾಟಿಸಿ ಅವರು ಮಾತನಾಡಿದರು.
ಪಠ್ಯವೂ ಪರಿಷ್ಕೃತ:
ವೃತ್ತಿಪರ ನೈಪುಣ್ಯತೆ ಹಾಗೂ ನಾವಿನ್ಯತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಡಿಪ್ಲೊಮಾ ತರಗತಿಗಳ ಪಠ್ಯವನ್ನು ಆಮೂಲಾಗ್ರವಾಗಿ ಬದಲಾವಣೆ ಅಥವಾ ಪರಿಷ್ಕರಣೆ ಮಾಡಲಾಗುತ್ತಿದೆ. ಈಗಾಗಲೇ ಈ ಕೆಲಸ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಜಾರಿಗೆ ತರಲಾಗುವುದು ಎಂದರು.
ಉದ್ಯೋಗ ಮಾರುಕಟ್ಟೆ, ಜಾಗತಿಕ ಔದ್ಯೋಗಿಕ ಅಗತ್ಯಗಳನ್ನು ಮನದಲ್ಲಿ ಇಟ್ಟುಕೊಂಡು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಸುಧಾರಣೆಗಳನ್ನು ತರಲಾಗುತ್ತಿದೆ. ಅದಕ್ಕಾಗಿ ಡಿಪ್ಲೊಮಾ ಹಾಗೂ ಎಂಜಿಯರಿಂಗ್ ಕಾಲೇಜುಗಳೂ ಸೇರಿದಂತೆ ಉನ್ನತ ಶಿಕ್ಷಣದ ಎಲ್ಲ ಸಂಸ್ಥೆಗಳಿಗೂ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಪೈಕಿ ಕೈಗಾರಿಕೆಗಳಲ್ಲಿಯೇ ಇಂಟರ್ನ್್ಶಿಪ್ಗೆ ಅವಕಾಶ ಕಲ್ಪಿಸುವ ಉದ್ದೇಶವಿದೆ. ಇದೇ ದಿಸೆಯಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
‘ಸಹ್ಯಾದ್ರಿ ಎಂಜಿಯರಿಂಗ್ ಕಾಲೇಜು ಉತ್ತಮ ವ್ಯವಸ್ಥೆ ಇದೆ. ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಈ ಕಾಲೇಜಿದೆ. ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವೂ ಉನ್ನತ ಮಟ್ಟದಲ್ಲಿದೆ ಎಂಬ ನಂಬಿಕೆ ನನ್ನದು’ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಆಡಳಿತದಲ್ಲಿ ಸೋಲುತ್ತಿವೆ. ಹಾಗೆ ಆಗಬಾರದು. ಪಕ್ಕಾ ಯೋಜನೆ ರೂಪಿಸಿಕೊಂಡು ಸಂಸ್ಥೆಯನ್ನು ಮುನ್ನಡೆಸಬೇಕು. ಆಗ ಉತ್ತಮ ಆಡಳಿತದ ಜತೆಗೆ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವೂ ಸಿಗುತ್ತದೆ. ಸಹ್ಯಾದ್ರಿ ಕಾಲೇಜಿನಲ್ಲಿ ಈ ಕೊರತೆ ಕಾಣುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.