ಗುರುವಾರ , ಏಪ್ರಿಲ್ 15, 2021
30 °C
ಪರಿಶಿಷ್ಟ ಜಾತಿ/ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ದೂರು

ಕೊರಗಜ್ಜನ ಗುಡಿ ಅಕ್ರಮ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ಕಂಕನಾಡಿಯಲ್ಲಿ ಮೇಲ್ವರ್ಗದ ವ್ಯಕ್ತಿಯಯೊಬ್ಬರು ಪರಿಶಿಷ್ಟ ವ್ಯಕ್ತಿಯನ್ನು ಬಳಸಿಕೊಂಡು ಸರ್ಕಾರಿ ಜಾಗದಲ್ಲಿ ಕೊರಗಜ್ಜನ ಗುಡಿ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದು, ಅವಕಾಶ ನೀಡಬಾರದು’ ಎಂದು ಪರಿಶಿಷ್ಟ ಸಂಘಟನೆಗಳ ಮುಖಂಡರು ಭಾನುವಾರ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು.

ಮಂಗಳೂರ ನಗರ ಪೊಲೀಸ್ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಮುಖಂಡ ಅನಿಲ್ ಈ ವಿಷಯವನ್ನು ಪ್ರಸ್ತಾಪಿಸಿದರು.

ಪರಿಶಿಷ್ಟರು ಆರಾಧಿಸುವ ಕೊರಗಜ್ಜನ ಗುಡಿಯನ್ನು ಮೇಲ್ವರ್ಗದ ವ್ಯಕ್ತಿಯೊಬ್ಬರು ಆರ್ಥಿಕ ಲಾಭಕ್ಕಾಗಿ ನಿರ್ಮಿಸುತ್ತಿದ್ದಾರೆ. ಕಾಮಗಾರಿ ನಡೆಸದಂತೆ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಇನ್‌ಸ್ಪೆಕ್ಟರ್ ಸವಿತ್ರ ತೇಜ ಪ್ರತಿಕ್ರಿಯಿಸಿ, ಅನುಮತಿ ಪಡೆಯದೆ ಕಾಮಗಾರಿ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ. ಪಾಲಿಕೆ ತೆರವು ಮಾಡಿದರೆ, ಭದ್ರತೆ ಒದಗಿಸಲಾಗುವುದು ಎಂದರು.

ಜ್ಯೋತಿ ವೃತ್ತಕ್ಕೆ ಅಂಬೇಡ್ಕರ್ ಹೆಸರನ್ನು ಇಟ್ಟರೂ, ಬಳಕೆಗೆ ಬಂದಿಲ್ಲ. ಇಲ್ಲಿ ಅಂಬೇಡ್ಕರ್‌ ವೃತ್ತವನ್ನು ನಿರ್ಮಾಣ ಮಾಡಬೇಕು ಎಂದು ಮುಖಂಡ ವಿಶ್ವನಾಥ್ ಹೇಳಿದರು. ಇದು ಪೊಲೀಸ್ ಇಲಾಖೆಗೆ ಬರುವುದಿಲ್ಲ. ಸಂಬಂಧಿತ ಇಲಾಖೆಗೆ ಮಾಹಿತಿ ನೀಡುತ್ತೇವೆ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದರು.

ಅಂಬೇಡ್ಕರ್ ನಿಗಮದಲ್ಲಿ ಸ್ವಯಂ ಉದ್ಯೋಗದ ಯೋಜನೆಗಳನ್ನು ಶಾಸಕರ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಮೂಲಕ ಆಯ್ಕೆ ನಡೆಯಬೇಕು ಎಂದು ಮುಖಂಡ ಎಸ್.ಪಿ.ಆನಂದ ಒತ್ತಾಯಿಸಿದರು.

6 ಮಂದಿಯ ಕೆಲಸ ಇಬ್ಬರಿಂದ

ಬಂಟ್ವಾಳ ತಾಲ್ಲೂಕು ಕುರ್ನಾಡು ಗ್ರಾಮ ಪಂಚಾಯಿತಿಯಲ್ಲಿ ಆರು ಮಂದಿ ಮಾಡಬೇಕಾದ ಶುಚಿತ್ವದ ಕೆಲಸವನ್ನು ಬಾಬು ಮತ್ತು ಕುಸುಮಾ ದಂಪತಿ ಕಡಿಮೆ ವೇತನದಲ್ಲಿ 12 ವರ್ಷಗಳಿಂದ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಕಾರ್ಮಿಕ ಸೌಲಭ್ಯಗಳೂ ಸಿಗುತ್ತಿಲ್ಲ. ಅವರ ಕಷ್ಟಕ್ಕೆ ಸ್ಪಂದಿಸಿ, ನ್ಯಾಯ ಒದಗಸಿಕೊಡಬೇಕು ಎಂದು ಮುಖಂಡರು ಒತ್ತಾಯಿಸಿದರು. ಪರಿಶೀಲಿಸುವುದಾಗಿ ಎಂದು ಡಿಸಿಪಿ ಪ್ರತಿಕ್ರಿಯಿಸಿದರು.

ದೈವಸ್ಥಾನಗಳ ಕಾಣಿಕೆ ಹುಂಡಿ ಅಪವಿತ್ರಗೊಳಿಸಿದ ಪ್ರಕರಣವು ಕ್ಲಿಷ್ಟಕರವಾಗಿದ್ದು, ಬಹುತೇಕ ದೈವಸ್ಥಾನಗಳಲ್ಲಿ ಸಿ.ಸಿಟಿವಿ ಕ್ಯಾಮೆರಾಗಳಿಲ್ಲ. ಅಲ್ಲದೇ ಕಾಣಿಕೆ ಹುಂಡಿಗಳನ್ನು ತಿಂಗಳಿಗೊಮ್ಮೆ ತೆರೆಯುವುದರಿಂದ ಘಟನೆ ಬೆಳಕಿಗೆ ಬರುವಾಗ ವಿಳಂಬವಾಗಿರುತ್ತದೆ. ತನಿಖೆ ಮುಂದುವರಿದಿದೆ ಎಂದು ಎಂದು ಹರಿರಾಂ ಶಂಕರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೆಸ್ಕಾಂನಲ್ಲಿ ಪರಿಶಿಷ್ಟ ನೌಕರರ ವಿರುದ್ಧ ಮೂಕರ್ಜಿಗಳು ಬರುತ್ತಿವೆ. ಇದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಮೆಸ್ಕಾಂ ಮುಖ್ಯಸ್ಥರಿಗೆ ಪತ್ರ ವ್ಯವಹಾರ ನಡೆಸಬೇಕು ಎಂದು ಶ್ರೀನಿವಾಸ ಒತ್ತಾಯಿಸಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ ಗಾಂವ್ಕರ್ ಹಾಗೂ ಪೊಲೀಸ್‌ ಇಲಾಖೆ ವಿವಿಧ ಅಧಿಕಾರಿಗಳು ಇದ್ದರು.

ಸಿಆರ್‌ಸಿಎಲ್ ಸ್ಪಂದನೆ ನೀಡುತ್ತಿಲ್ಲ ಪರಿಶಿಷ್ಟರ ಕುಂದು ಕೊರತೆಗಳಿಗೆ ಸ್ಪಂದಿಸಬೇಕಾಗಿದ್ದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ಸ್ಪಂದನೆ ನೀಡುತ್ತಿಲ್ಲ. ದೂರು ನೀಡಿದರೆ ಹಿಂಬರಹ ನೀಡುವುದಿಲ್ಲ. ದೂರು ನೀಡಿದರೆ, ಎದುರಿನವರನ್ನು ಕರೆಯಿಸಿಕೊಂಡು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.