ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕವಸ್ತು ವಿರೋಧಿ ದಿನ | ದಕ್ಷಿಣ ಕನ್ನಡ: ವ್ಯಸನ ಮುಕ್ತಿಯ ‘ಅನಾಮಿಕ’ ಪ್ರಯತ್ನ

ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನ
Last Updated 25 ಜೂನ್ 2020, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಸದಾ ನಶೆಗಾಗಿ ದುಂಧುವೆಚ್ಚ ಮಾಡಿದೆ, ಸುಳ್ಳು ಹೇಳಿದೆ, ಸಾಲ–ಬಾಕಿದಾರನಾದೆ, ಮನೆಯಲ್ಲೂ ಕದ್ದೆ, ಮಾತು ಕೊಟ್ಟು ವಂಚಿಸಿದೆ, ಏನೇನೋ ದಾರಿ ಹಿಡಿದಿದ್ದೆ. ಯಾರಿಗೂ ಬೇಡವಾಗಿದ್ದೆ...’

–ಮಾದಕದ್ರವ್ಯ ವ್ಯಸನ ಮುಕ್ತರಾದ ‘ಅನಾಮಿಕ’ (ಹೆಸರು ಬಹಿರಂಗ ಪಡಿಸಲು ಇಚ್ಛಿಸದ)ರೊಬ್ಬರು ತಾವು ಬದುಕಿದ್ದ ಕೆಟ್ಟ ಕ್ಷಣಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

ಮಂಗಳೂರಿನ ಪಂಪ್‌ವೆಲ್‌ನ ‘ಅನಾಮಿಕ’, 2000ದಲ್ಲಿ ನಗರದ ಪ್ರತಿಷ್ಠಿತ ಕಾಲೇಜೊಂದರ ಸುಸಂಸ್ಕೃತ ವಿದ್ಯಾರ್ಥಿ. ಭವಿಷ್ಯದ ಬಗ್ಗೆ ಮನೆಯವರದ್ದೂ ಸುಂದರ ಕನಸುಗಳಿತ್ತು.

ಆಗೊಮ್ಮೆ, ‘ಕೆಲವು ಹಿರಿಯ ವಿದ್ಯಾರ್ಥಿಗಳ ಮೂಲಕ ಗಾಂಜಾ ಸೇವನೆಗೆ ಆಕರ್ಷಿತನಾದೆ. ಅಮಲಿನಲ್ಲಿ ತೇಲಿದೆ. ಇನ್ನಷ್ಟು ಬಯಸಿದೆ. ಬೇರೆ ಬೇರೆ ಮಾದಕ ದ್ರವ್ಯಗಳ ಮೊರೆ ಹೋದೆ. ಬಳಗವೂ ದೊಡ್ಡದಾಯಿತು. ನನಗೆ ಅರಿವಿಲ್ಲದೇ ನನ್ನನ್ನು ನಾನೇ ಕಳೆದುಕೊಳ್ಳುತ್ತಿದ್ದೆ’ ಎಂದು ಕಾಲೇಜು ದಿನಗಳನ್ನು ತೆರೆದಿಟ್ಟರು.

‘ಇದು ಯೌವನ. ಜಾಲಿ ಮಾಡಬೇಕು. ಕೆಲಸ ಸಿಕ್ಕಿದ ಮೇಲೆ ವ್ಯಸನ ಬಿಟ್ಟರಾಯಿತು’ ಎಂದುಕೊಂಡೆ. ಕೆಲಸ ಸಿಕ್ಕ ಬಳಿಕ ಆದಾಯದ ಜೊತೆ ವ್ಯಸನವೂ ಹೆಚ್ಚಾಯಿತು. ಖರ್ಚು ಸರಿದೂಗಿಸಿಲು ಅಡ್ಡದಾರಿಗಳೂ ಶುರುವಾದವು. ಕೆಲವೊಮ್ಮೆ ಬಿಡಬೇಕು ಎಂದು ಚಿಂತಿಸಿದೆ. ಅಮ್ಮನಿಗೆ ಮಾತೂ ಕೊಟ್ಟೆ. ಆದರೆ, ಮತ್ತದೇ ಚಾಳಿ...’ ಎಂದು ಮೆಲುಕು ಹಾಕಿದರು.

ವ್ಯಸನ ಅವರನ್ನು ಮಾತ್ರವಲ್ಲ, ಮನೆಯ ವಾತಾವರಣವನ್ನೂ ಕೆಡಿಸಿತ್ತು. ಪ್ರತಿನಿತ್ಯ ದುಃಖ–ಆತಂಕ. ಬಂಧುಗಳು–ಗೆಳೆಯರೂ ದೂರವಾಗಿದ್ದರು. ಅಕ್ಕಪಕ್ಕದವರೂ ಅಸಡ್ಡೆಯಿಂದ ಕಂಡಿದ್ದರು. ಕೆಲಸವನ್ನೂ ಕಳೆದುಕೊಂಡಿದ್ದರು. ಗಲ್ಫ್‌ನಲ್ಲಿ ಸಿಕ್ಕಿದ ಎರಡು ಕೆಲಸಗಳೂ ವ್ಯಸನದಿಂದಾಗಿಯೇ ಹೋಗಿತ್ತು. ಆಗಲೇ ಸುಳ್ಳು, ಕಳವು, ಕೆಟ್ಟ ಚಾಳಿಗಳು ಹತ್ತಿಕೊಂಡಿತು.

ನೊಂದ ಮನೆಯವರು ವ್ಯಸನಮುಕ್ತಿ ಕೇಂದ್ರ, ಆಸ್ಪತ್ರೆ, ಧಾರ್ಮಿಕ ಕೇಂದ್ರ ಸೇರಿದಂತೆ ವಿವಿಧೆಡೆ ಸೇರಿಸಿದರೂ, ಸ್ವಲ್ಪ ಕಾಲ ಮಾತ್ರ. ಮತ್ತದೇ ಚಾಳಿ ಮುಂದುವರಿಯಿತು.

‘2016ರ ಒಂದು ದಿನ ಮಾದಕದ್ರವ್ಯ ಅನಾಮಿಕರು (Narcotics Anonymous) ಸಂಸ್ಥೆಯ ವ್ಯಕ್ತಿಯೊಬ್ಬರು ಬಂದು ಭರವಸೆ ತುಂಬಿದರು. ಅವರು ಈ ಸಂಸ್ಥೆಯಿಂದ ವ್ಯಸನ ಮುಕ್ತರಾದವರು. ಅವರು ನೀಡಿದ 12 ಹೆಜ್ಜೆಗಳು, ಭರವಸೆಗಳು ನನ್ನ ಬದುಕನ್ನೇ ಬದಲಾಯಿಸಿತು’ ಎಂದು ಹೇಳುವಾಗ ನಿರುಮ್ಮಳರಾದರು.

‘ಬಹುತೇಕರು ಭಾವನೆಗಳಿಂದ ಅಮಲಿಗೆ ಬಲಿಯಾಗುತ್ತಾರೆ. ನ್ಯೂನತೆ ನಿಯಂತ್ರಿಸಲಾಗದೇ ದಾಸರಾಗುತ್ತಾರೆ. ಆದರೆ, ನಾನು ನನ್ನ ತಪ್ಪನ್ನು ಹೇಳಿಕೊಳ್ಳಲು, ಪಶ್ಚಾತ್ತಾಪ ಪಡಲು, ಇತರರನ್ನು ಕ್ಷಮಿಸಲು ಹಾಗೂ ಕ್ಷಮೆ ಕೇಳಲು ಸಂಸ್ಥೆ ಮೂಲಕ ವೇದಿಕೆ ಸಿಕ್ಕಿತು. ಅದು ನನ್ನನ್ನೇ ಬದಲಾಯಿಸಿತು’ ಎಂದರು.

‘ಕೋವಿಡ್–19 ಗೊಂದಲ ಮುಗಿಯಲಿ. ಮುಂದಿನ ವರ್ಷ ಮದುವೆಯಾಗಬೇಕು ಅಂದುಕೊಂಡಿದ್ದೇನೆ. ಬದುಕಿನ ಕನಸು ಮತ್ತೆ ಚಿಗುರೊಡೆದಿದೆ’ ಎನ್ನುವಾಗ ಲವಲವಿಕೆಯಿಂದ ಮಗುಳ್ನಗೆ ಮೂಡಿತ್ತು.

ಮಾದಕವಸ್ತು ವಿರೋಧಿ ದಿನ

ವಿಶ್ವ ಆರೋಗ್ಯ ಸಂಸ್ಥೆಯು 1989ರಲ್ಲಿ ಜೂನ್ 26 ಅನ್ನು ‘ಮಾದಕವಸ್ತು ಮತ್ತು ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನ’ವಾಗಿ ಘೋಷಿಸಿದೆ.

ಮಾದಕದ್ರವ್ಯ ಅನಾಮಿಕರು ಸಂಸ್ಥೆಯು ಮಾದಕ ವ್ಯಸನ ಮುಕ್ತಿಗಾಗಿ ಕೆಲಸ ಮಾಡುತ್ತಿದೆ. ಮಂಗಳೂರಿನಲ್ಲಿ ಸುಮಾರು 16 ಮಂದಿ ವ್ಯಸನ ಮುಕ್ತರಾದವರೇ ಸಂಸ್ಥೆಯಲ್ಲಿದ್ದು, ಜಾಗೃತಿ ನಡೆಸುತ್ತಿದ್ದಾರೆ. (ಹೆಚ್ಚಿನ ಮಾಹಿತಿಗೆ 7349617155 ಅಥವಾ 7899204739 ಸಂಪರ್ಕಿಸಬಹುದು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT