ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಲಿಂಗ್‌: ನಿಷೇಧಕ್ಕೂ ನಿಲುಕದ ಸಮಸ್ಯೆಗಳ ‘ಆಳ’

ಅತಿಯಾದ ಟ್ರಾಲಿಂಗ್‌ನಿಂದಾಗಿ ಮೀನಿನ ಸಂತತಿ ನಾಶವಾಗುವ ಆತಂಕ; ಹೊಸ ಯೋಜನೆ ಬಳಕೆಗೆ ಆಗ್ರಹ
Last Updated 13 ಜೂನ್ 2022, 3:23 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19ರ ಹೊಡೆತ ಮತ್ತು ಚಂಡಮಾರುತಗಳ ಪ್ರಚಂಡ ನರ್ತನದ ನಂತರ ದಕ್ಷಿಣ ಕನ್ನಡದ ಕರಾವಳಿಯಲ್ಲಿ ಈ ಬಾರಿ ಮೀನುಗಾರಿಕೆಯಲ್ಲಿ ಬಂಪರ್ ಸಾಧನೆಯಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಋತುವಿನಲ್ಲಿ ಲಭಿಸಿದ ಮೀನುಗಳ ಪ್ರಮಾಣದಲ್ಲಿ ಸಾವಿರಾರು ಟನ್‌ಗಳ ಏರಿಕೆ ಕಂಡುಬಂದಿದೆ. ಅಂಕಿ ಅಂಶಗಳು ಮೀನುಗಾರಿಕೆ ಇಲಾಖೆ ಮತ್ತು ಬೋಟುಗಳ ಮಾಲೀಕರ ಸಂಭ್ರಮಕ್ಕೆ ಕಾರಣವಾಗಿದ್ದರೂ ಸಮುದ್ರವನ್ನು ದೇವತೆಯಂತೆ ಕಾಣುವ ಮತ್ತು ಸಾಗರೋತ್ಪನ್ನಗಳ ಜೊತೆ ಅನ್ನದ ಋಣ ಇರಿಸಿಕೊಂಡಿರುವ ಅನೇಕರಲ್ಲಿ ಆತಂಕದ ಛಾಯೆ ಮೂಡಿದೆ.

ಆಳಸಮುದ್ರದ ಮೀನುಗಾರಿಕೆಯ ನೆಪದಲ್ಲಿ ಸಮುದ್ರದ ಒಡಲನ್ನು ಬಗೆಯಲಾಗುತ್ತಿದೆ ಎಂಬ ವಾಸ್ತವದ ಅರಿವು ಈ ಆತಂಕಕ್ಕೆ ಕಾರಣ. ಮೀನುಗಳ ಸಂತಾನ ಉಳಿಸಲು ಮತ್ತು ಹೆಚ್ಚಿಸಲು ಆಳಸಮುದ್ರದ ಮೀನುಗಾರಿಕೆ ನಿಷೇಧದ ‘ವಾಡಿಕೆ’ ಈ ಬಾರಿ ಆರಂಭಗೊಂಡು 12 ದಿನಗಳಾಗಿವೆ. ಎರಡು ತಿಂಗಳ ನಿಷೇಧದ ನಂತರ ಆಗಸ್ಟ್‌ನಲ್ಲಿ ಟ್ರಾಲಿಂಗ್ ಚಟುವಟಿಕೆ ಪುನರಾರಂಭಗೊಳ್ಳಲಿದೆ. ಆದರೆ ಉದ್ಯೋಗ, ವಾಣಿಜ್ಯ ಅಭಿವೃದ್ಧಿಯ ‘ಗುರಿ’ ಮುಟ್ಟುವ ಆಸೆಗೆ ಕೆಲವರ ಸಂಪತ್ತಿನ ದಾಹವೂ ಸೇರಿ ಸಮುದ್ರದ ಸಂಪತ್ತು ನಾಶವಾಗುತ್ತಿರುವುದರ ಬಗ್ಗೆ ಮೀನುಗಾರರಲ್ಲೇ ಬೇಸರವಿದೆ. ನಿಯಮಗಳ ಪಾಲನೆಗೆ ನೆರೆ ರಾಜ್ಯಗಳಲ್ಲಿ ಇರುವಂಥ ಕಠಿಣ ಕ್ರಮಗಳ ಅಗತ್ಯವಿದೆ ಎಂಬ ಬೇಡಿಕೆಯ ಧ್ವನಿಯೂ ಜೋರಾಗಿದೆ.

ಮೀನುಗಳ ಸಂತಾನೋತ್ಪತ್ತಿ ಸಮಯವಾಗಿರುವುದರಿಂದ ಜೂನ್ ಮತ್ತು ಜುಲೈ ತಿಂಗಳಲ್ಲಿ ಆಳಸಮುದ್ರದಲ್ಲಿ ಟ್ರಾಲಿಂಗ್ ನಿಷೇಧ ಜಾರಿಯಲ್ಲಿರುತ್ತದೆ. ಮೂರು ತಿಂಗಳ ನಿಷೇಧವನ್ನು ವಾಣಿಜ್ಯ ಅಭಿವೃದ್ಧಿಯ ದೃಷ್ಟಿಯಿಂದ ಈಚೆಗೆ ಎರಡು ವರ್ಷಗಳಿಗೆ ಸೀಮಿತ ಗೊಳಿಸಲಾಗಿದೆ. ಮೀನಸಂತತಿಯ ಮೇಲೆ ಮಾಡಿದ ಮೊದಲ ಪ್ರಹಾರ ಆಗಿತ್ತು ಇದು. ಸಾಂಪ್ರದಾಯಿಕ ಮೀನುಗಾರಿಕೆ ಮೇಲೆ ಕರಿನೆರಳು ಬೀಳಿಸಿದ ಆಳಸಮುದ್ರದ ಟ್ರಾಲಿಂಗ್ ಮತ್ತು ಅದರ ಜೊತೆಯಲ್ಲಿ ಬಂದ ಶಕ್ತಿಶಾಲಿ ಯಂತ್ರಗಳನ್ನು ಅಳವಡಿಸಿದ ಬೋಟ್‌ಗಳು ಕರಾವಳಿಯ ಆರ್ಥಿಕ ಬೆಳವಣಿಗೆ ಮೇಲೆ ಪೂರಕ ಪರಿಣಾಮ ಬೀರಿದ್ದರೂ ಇದು ಇನ್ನೆಷ್ಟು ಕಾಲ ಎಂಬ ಪ್ರಶ್ನೆ ಪ್ರಜ್ಞಾವಂತ ಮೀನುಗಾರರನ್ನು ಕಾಡತೊಡಗಿದೆ.

ಆಳಸಮುದ್ರದಲ್ಲಿ ಟ್ರಾಲಿಂಗ್ ಮಾಡುವ ಬೋಟ್‌ಗಳ ಬದಲಿಗೆ ಗಿಲ್‌ ನೆಟ್‌ ಮತ್ತು ಲಾಂಗ್ ಲೈನ್ಸ್ ಬೋಟ್‌ಗಳನ್ನು ಬಳಸುವ ಕೇಂದ್ರ ಸರ್ಕಾರದ ಯೋಜನೆ ಜಾರಿಯಲ್ಲಿದೆ. ಬೋಟ್‌ಗಳನ್ನು ಬದಲಿಸಲು ಸಬ್ಸಿಡಿ ನೀಡುತ್ತಿದ್ದರೂ ಲಾಭದ ಲಾಬಿಯಿಂದಾಗಿ ಕರ್ನಾಟಕದ ಕರಾವಳಿಯಲ್ಲಿ ಆ ಯೋಜನೆಯ ‘ಲಾಭ’ ಪಡೆದುಕೊಳ್ಳಲು ಹೆಚ್ಚಿನವರಿಗೆ ಆಸಕ್ತಿ ಇಲ್ಲ.

‘ವಿದೇಶದಿಂದ ಆಮದಾಗುವ ಶಕ್ತಿಶಾಲಿ ಯಂತ್ರಗಳನ್ನು ಬಳಸುವು ದರಿಂದ ಸಾಗರದ ಜೀವಜಾಲ ಆಪತ್ತಿನಲ್ಲಿದೆ. ಮೀನುಗಳ ಆವಾಸ ಕೇಂದ್ರಗಳ ಮೇಲೆ ಬುಲ್ ಟ್ರಾಲ್‌ಗಳು ಅಕ್ಷರಶಃ ಆಕ್ರಮಣ ಮಾಡುತ್ತಿವೆ. ಹೀಗಾಗಿ ಆಳಸಮುದ್ರದ ಜೀವ ವೈವಿಧ್ಯ ಛಿದ್ರಗೊಳ್ಳುತ್ತಿವೆ. ಇದರಿಂದ ಮೀನು ಗಳ ಆಹಾರಕ್ಕೂ ಕುತ್ತು ಬಂದಿದೆ. ತೇಡೆ, ಬೂತಾಯಿ, ಅಂಜಲ್, ಟ್ಯೂನಾ ಮುಂತಾದ ಮೀನುಗಳು ವಿನಾಶದ ಹಾದಿಯಲ್ಲಿವೆ’ ಎಂದು ಬೋಟ್ ಮಾಲೀಕರೊಬ್ಬರು ‘ಪ್ರಜಾವಾಣಿ’ ಮುಂದೆ ಆತಂಕ ವ್ಯಕ್ತಪಡಿಸಿದರು.

ಟ್ರಾಲಿಂಗ್ ನಿಷೇಧ– ಜೀವದ ಕಾಳಜಿಯೂ ಇದೆ: ಆಳಸಮುದ್ರದ ಟ್ರಾಲಿಂಗ್‌ ನಿಷೇಧ ಮೀನ ಸಂತತಿ ಉಳಿಸುವುದಕ್ಕಷ್ಟೇ ಸೀಮಿತವಲ್ಲ. ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಹವಾಮಾನ ವೈಪರೀತ್ಯ ವಾಗುತ್ತದೆ. ಹೀಗಾಗಿ ಮೀನುಗಾರರಿಗೆ ಪ್ರಾಣಾಪಾಯ ಆಗುವ ಸಾಧ್ಯತೆ ಇರು ತ್ತದೆ. ಇದರಿಂದ ರಕ್ಷಿಸಲು ಟ್ರಾಲಿಂಗ್ ನಿಷೇಧ ನೆರವಾಗುತ್ತದೆ. ಒಡಿಶಾ, ತಮಿಳುನಾಡು, ಕೇರಳ ಮತ್ತು ಆಂಧ್ರದ ಕಾರ್ಮಿಕರು ಆಳಸಮುದ್ರಕ್ಕೆ ತೆರಳಲು ಸಜ್ಜಾಗಿ ಬರುತ್ತಾರೆ. ಒಂದು ಬಾರಿ ಸಮುದ್ರಕ್ಕೆ ಇಳಿದರೆ 10ರಿಂದ 12 ದಿನಗಳ ನಂತರವಷ್ಟೇ ವಾಪಸ್ ಬರುತ್ತಾರೆ. ಸ್ಥಳೀಯರು ಅಷ್ಟು ದಿನ ಕುಟುಂಬವನ್ನು ಬಿಟ್ಟು ಇರಲು ಮುಂದಾಗುವುದಿಲ್ಲ. ಆದ್ದರಿಂದ ಅವರು ಪರ್ಸಿನ್ ಬೋಟ್‌ಗಳ ಕೆಲಸಕ್ಕೆ ಆದ್ಯತೆ ನೀಡುತ್ತಾರೆ.

ಟ್ರಾಲಿಂಗ್‌ ನಿಷೇಧದ ಕಾಲವೆಂದರೆ ಮೀನುಗಾರರಿಗೆ ರಜೆಯ ಸಮಯವೂ ಹೌದು. ಊರುಗಳಿಗೆ ತೆರಳುವ ಅವರು ಆಗಸ್ಟ್ ವೇಳೆಗೆ ವಾಪಸಾಗುತ್ತಾರೆ. ನಿಷೇಧ ಇಲ್ಲದೇ ಇರುವಾಗ ಒಂದು ತಂಡ ಆಳಸಮುದ್ರಕ್ಕೆ ಹೋಗುವ ವೇಳೆ ಮತ್ತೊಂದು ತಂಡಕ್ಕೆ ವಿಶ್ರಾಂತಿ ಸಿಗುತ್ತದೆ.

ಮೀನುಗಾರರನ್ನು ಸೆಳೆಯಲು ಕಸರತ್ತು

ಪ್ರತಿ ಬಾರಿಯೂ ಟ್ರಾಲಿಂಗ್ ಮುಗಿದ ನಂತರ ಪರಿಣಿತ ಮೀನುಗಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಬೋಟ್ ಮಾಲೀಕರು ಕಸರತ್ತು ನಡೆಸುತ್ತಾರೆ. ಉತ್ತಮ ಮೀನುಗಾರರಿಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸಲು ಸಿದ್ಧರಿರುತ್ತಾರೆ. ಅವರೊಂದಿಗೆ ಗುತ್ತಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಇದನ್ನು ಕೆಲವರು ಐಪಿಎಲ್ ಹರಾಜಿಗೆ ಹೋಲಿಸುತ್ತಾರೆ.

‘ಮೀನು ಬೇಟೆ ವಿಶಿಷ್ಟ ಕಲೆ. ವಾತಾವರಣದಲ್ಲಿ ಆಗುವ ಬದಲಾವಣೆಯನ್ನು ತಿಳಿದುಕೊಳ್ಳುವ ಸಾಮರ್ಥ್ಯ, ಸಾಗರದ ಬಗ್ಗೆ ಆಳವಾದ ಅರಿವು, ಬಲೆಯನ್ನು ಬಳಸುವ ವಿಧಾನ ಇತ್ಯಾದಿಗಳಲ್ಲಿ ಪಳಗಿದವರ ಮೇಲೆ ಎಲ್ಲ ಬೋಟ್ ಮಾಲೀಕರು ಕಣ್ಣಿಟ್ಟಿರುತ್ತಾರೆ. ಬೇಡಿಕೆ ಹೆಚ್ಚಿದಂತೆ ಮೀನುಗಾರರು ತಮ್ಮ ಗುತ್ತಿಗೆ ಮೊತ್ತವನ್ನೂ ಹೆಚ್ಚಿಸುತ್ತಾರೆ. ಇದರ ಹಿಂದೆ ಲಕ್ಷಗಟ್ಟಲೆ ವ್ಯವಹಾರ ನಡೆಯುತ್ತದೆ’ ಎಂದು ಅನುಭವಿ ಮೀನುಗಾರರೊಬ್ಬರು ತಿಳಿಸಿದರು.

ಜೀವ ಉಳಿಸಲು ಬಯೊ ಟಾಯ್ಲೆಟ್‌

ಆಳಸಮುದ್ರಕ್ಕೆ ತೆರಳುವ ಬೋಟ್‌ಗಳ ಕಾರ್ಮಿಕರಿಗಾಗಿ ಬಯೊ ಟಾಯ್ಲೆಟ್ ನಿರ್ಮಿಸಲು ಮೀನುಗಾರಿಕಾ ಇಲಾಖೆ ಸಜ್ಜಾಗಿದೆ. ‘ಇತ್ತೀಚೆಗೆ ಬರುತ್ತಿರುವ ಹೊಸ ಬೋಟ್‌ಗಳಲ್ಲಿ ಟಾಯ್ಲೆಟ್ ವ್ಯವಸ್ಥೆ ಇರುತ್ತದೆ. ಇಲ್ಲದೇ ಇರುವ ಬೋಟ್‌ಗಳಲ್ಲಿ ಬಯೊ ಟಾಯ್ಲೆಟ್ ಅಳವಡಿಸಲು ಸಬ್ಸಿಡಿ ಕೊಡಲಾಗುತ್ತದೆ. ಟಾಯ್ಲೆಟ್ ಇಲ್ಲದ ಬೋಟ್‌ಗಳಲ್ಲಿ ತೆರಳುವವರು ಮಲವಿಸರ್ಜನೆಗಾಗಿ ಬೋಟ್‌ನ ಅಂಚಿನಲ್ಲಿ ಕುಳಿತುಕೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬೀಳುವ ಅಪಾಯವಿದೆ. ಅದನ್ನು ತಪ್ಪಿಸಲು ಟಾಯ್ಲೆಟ್‌ ಹೊಂದಿರುವುದು ಕಡ್ಡಾಯ ಮಾಡಲಾಗಿದೆ. ಬಯೊ ಟಾಯ್ಲೆಟ್‌ಗಳು ಸಾಗರದ ಮಾಲಿನ್ಯ ನಿಯಂತ್ರಣಕ್ಕೂ ನೆರವಾಗಲಿವೆ’ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT