ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಕದಡಿಸಲು ಪೊಲೀಸ್ ಹುನ್ನಾರ: ಸುನ್ನಿ ಕೋ-ಆರ್ಡಿನೇಶನ್ ಕರ್ನಾಟಕ ಘಟಕ ಆರೋಪ

Last Updated 26 ಡಿಸೆಂಬರ್ 2019, 16:23 IST
ಅಕ್ಷರ ಗಾತ್ರ

ಮಂಗಳೂರು: ‘ಮುಸ್ಲಿಮರನ್ನು ಗಲಭೆಕೋರರು ಎಂದು ಬಿಂಬಿಸುವ ಮೂಲಕ ಶಾಂತಿ ಕದಡಿಸಲು ಪೊಲೀಸರೇ ಹುನ್ನಾರ ನಡೆಸುತ್ತಿದ್ದಾರೆ. ಅದಕ್ಕಾಗಿ ಮಂಗಳೂರು ಗೋಲಿಬಾರ್‌ನ ಏಕಪಕ್ಷೀಯ ವಿಡಿಯೊ ತುಣುಕುಗಳನ್ನು ವೈರಲ್ ಮಾಡಿಸುತ್ತಿದ್ದಾರೆ. ಇದು ಸಮುದಾಯವನ್ನು ಉಗ್ರರಂತೆ ಬಿಂಬಿಸುವಂತಿದೆ’ ಎಂದು ಎಂದು ಸುನ್ನಿ ಕೋ-ಆರ್ಡಿನೇಶನ್ ರಾಜ್ಯ ಘಟಕವು ಗಂಭೀರವಾಗಿ ಆರೋಪಿಸಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಘಟಕದ ಮುಖಂಡರು, ‘ನಗರದಲ್ಲಿ ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಚದುರಿಸುವ ನೆಪದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಗುಂಡೇಟಿಗೆ ಬಲಿಯಾದವರ ಕುಟುಂಬಕ್ಕೆ ಮುಖ್ಯಮಂತ್ರಿ ಘೋಷಿಸಿದ ಪರಿಹಾರ ಧನವನ್ನು ನೀಡಬೇಕು’ ಎಂದು ಆಗ್ರಹಿಸಿದರು.

ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್‌ ಮಾತನಾಡಿ, ‘ಪೊಲೀಸರೇ ಹಿಂಸೆಗೆ ಪ್ರಚೋದನೆ ನೀಡಿದ್ದು, ಮುಸ್ಲಿಮರನ್ನು ಗುರಿಯಾಗಿಸಿದರು. ಇಬ್ಬರು ಅಮಾಯಕರನ್ನು ಗುಂಡು ಹಾಕಿ ಕೊಂದರು. ಹಲವರನ್ನು ಗಾಯಗೊಳಿಸಿದರು. ಪೊಲೀಸ್‌ ಕ್ರೌರ್ಯದ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ ಮಾತನಾಡಿ, ‘ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಜಿಲ್ಲೆಯಲ್ಲಿ ಪ್ರತಿಭಟನೆಗೆ ಅನುಮತಿ ನಿರಾಕರಿಸುವ ಮೂಲಕ ಪೊಲೀಸ್ ಅಧಿಕಾರಿಗಳು ಧ್ವನಿಯನ್ನೇ ಹತ್ತಿಕ್ಕುವ ಪ್ರಯತ್ನ ಮಾಡಿರುವುದು ಖಂಡನೀಯ’ ಎಂದರು.

‘ಪೊಲೀಸರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ, ಬಸ್ ನಿಲ್ದಾಣ, ಮೀನು ಮಾರುಕಟ್ಟೆಯ ಸುತ್ತಮುತ್ತ ಹಾಗೂ ಆಸ್ಪತ್ರೆಗೆ ನುಗ್ಗಿ ಲಾಠಿಪ್ರಹಾರ ಮಾಡಿದ್ದಕ್ಕೆ ವಿಡಿಯೋ ಸಾಕ್ಷಿಗಳಿವೆ. ಆದರೆ, ಕೆಲವು ಮಾಧ್ಯಮಗಳನ್ನು ಬಳಸಿಕೊಂಡು ಅದನ್ನೆಲ್ಲ ಮರೆ ಮಾಚುತ್ತಿರುವುದು ವಿಷಾದನೀಯ’ ಎಂದರು.

ಘಟಕದ ಅಧ್ಯಕ್ಷ ಎಸ್‌ಪಿ ಹಂಝ ಸಖಾಫಿ ಮಾತನಾಡಿ, ‘ಒಂದು ಸಮುದಾಯವನ್ನು ಗುರಿಯಾಗಿಸಿ ನಿಂದನೆ ಮಾಡಿರುವ ವಿಡಿಯೊ ತುಣುಕುಗಳಿವೆ. ಕೊಲ್ಲುವ ಉದ್ದೇಶದಿಂದಲೇ ಬಂದೂಕು ಹಿಡಿದಿರುವುದು ಪೊಲೀಸರ ಸಂಭಾಷಣೆಗಳಿಂದ ಸ್ಪಷ್ಟವಾಗಿದೆ. ಪ್ರತಿಭಟನಾಕಾರರನ್ನು ಹಿಂಸೆಗೆ ಪ್ರಚೋದಿಸಿ, ಅವರು ತಿರುಗಿಬಿದ್ದಾಗ ಗುಂಡು ಹಾಕಲಾಗಿದೆ’ ಎಂದು ದೂರಿದರು.

‘ಗೋಲಿಬಾರ್‌ಗೆ ಬಲಿಯಾದ ಕುಟುಂಬದವರಿಗೆ ಪರಿಹಾರ ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿ, ಬಳಿಕ ತನ್ನ ಹೇಳಿಕೆಗೆ ಬದ್ಧರಾಗದಿರುವುದು ವಿಪರ್ಯಾಸ. ಗಲಭೆಗೆ ಪ್ರಚೋದನೆ ನೀಡಿದ್ದು ಯಾರು? ಎಂಬುದನ್ನು ಬಂದರು ಠಾಣೆ ಸಹಿತ ನಗರದ ವಿವಿಧ ಕಡೆಯಿರುವ ಸಿ.ಸಿ. ಕ್ಯಾಮರಾವನ್ನು ಪರಿಶೀಲಿಸಲಿ’ ಎಂದುಕರ್ನಾಟಕ ಮುಸ್ಲಿಂ ಜಮಾಅತ್‌ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ ಸವಾಲೆಸೆದರು.

‘ಮಂಗಳೂರು ಶಾಂತವಾಗಿದ್ದರೂ, ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶ ಪೊಲೀಸರಿಗೆ ಇದ್ದಂತಿಲ್ಲ. ಅವರೇ ಶಾಂತಿ ಸಾಮರಸ್ಯ ಕದಡುತ್ತಿದ್ದಾರೆ’ ಎಂದು ಎಸ್‌ವೈಎಸ್ ಮುಖಂಡ ಅಶ್ರಫ್ ಕಿನಾರ ಆರೋಪಿಸಿದರು.

ಎಸ್‌ಜೆಯು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ತೋಕೆ ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ, ಎಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು, ಎಸ್ಸೆಸ್ಸೆಫ್ ಮುಖಂಡರಾದ ಅಬ್ದುಲ್ ಹಮೀದ್ ಬಜ್ಪೆ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT