ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜರಂಗದಳದ ಐವರು ಕಾರ್ಯಕರ್ತರಿಗೆ ಗಡೀಪಾರು ನೋಟೀಸ್

Published 17 ನವೆಂಬರ್ 2023, 6:59 IST
Last Updated 17 ನವೆಂಬರ್ 2023, 6:59 IST
ಅಕ್ಷರ ಗಾತ್ರ

ಪುತ್ತೂರು: ‘ಮತೀಯ ಗೂಂಡಾಗಿರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಿಮ್ಮನ್ನು ಏಕೆ ಗಡೀಪಾರು ಮಾಡಬಾರದು’ ಎಂದು ಕಾರಣ ಕೇಳಿ ಬಜರಂಗದಳದ ಐವರು ಕಾರ್ಯಕರ್ತರಿಗೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಅವರಿಗೆ 1953ರ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್‌ 55ರಡಿ ಗಡೀಪಾರು ನೋಟೀಸ್ ಜಾರಿ ಮಾಡಲಾಗಿದ್ದು, ಪುತ್ತೂರು ಉಪವಿಭಾಗಾಧಿಕಾರಿ ಎದುರು ನ. 22ರಂದು ಹಾಜರಾಗಲು ಸೂಚನೆ ನೀಡಲಾಗಿದೆ.

ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ ಲತೇಶ್ ಗುಂಡ್ಯ, ಸಂಘಟನೆಯ ಪುತ್ತೂರು ತಾಲ್ಲೂಕು ಜವಾಬ್ದಾರಿ ಹೊಂದಿರುವ ತಿಂಗಳಾಡಿಯ ದಿನೇಶ್, ಬಜರಂಗದಳದ ಕಾರ್ಯಕರ್ತರಾದ ಸಂಪ್ಯದ ಪ್ರಜ್ವಲ್, ತಿಂಗಳಾಡಿಯ ನಿಶಾಂತ್, ಅಜಲಡ್ಕದ ಪ್ರದೀಪ್ ಅವರಿಗೆ ನೋಟೀಸು ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ನೋಟಿಸ್‌ ಜಾರಿಗೊಳಿಸಲಾದ ಐವರಲ್ಲಿ  ಲತೇಶ್ ಹೊರತುಪಡಿಸಿ ಉಳಿದ ನಾಲ್ವರ ಮೇಲೆ ತಲಾ ಒಂದು ಪ್ರಕರಣಗಳು ದಾಖಲಾಗಿದೆ. ಲತೇಶ್ ಗುಂಡ್ಯ ಎಂಬುವರನ್ನು ಬಳ್ಳಾರಿ ಜಿಲ್ಲೆಗೆ ಮತ್ತು ಉಳಿದ ನಾಲ್ವರನ್ನು ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂಬುದು ಮೂಲಗಳ ಮಾಹಿತಿ.

ಸುಳ್ಳು ಪ್ರಕರಣ ದಾಖಲಿಸಿ ಗಡಿಪಾರು– ನಳಿನ್‌:

’ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರನ್ನು ಗುರಿಯಾಗಿಸಿ ಬಜರಂಗ ದಳದ ಕಾರ್ಯಕರ್ತರಿಗೆ ಗಡಿಪಾರಿನ ಆದೇಶ ಹೊರಡಿಸಲಾಗಿದೆ. ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದವರ ಮೇಲೂ ಸುಳ್ಳು ಪ್ರಕರಣ ದಾಖಲಿಸಿ ಗಡಿಪಾರು ಮಾಡಲಾಗುತ್ತಿದೆ’ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಆರೋಪಿಸಿದರು. 

ಇಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ‘ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ರಾಜ್ಯದಲ್ಲಿ ಗೋಹತ್ಯೆ, ರೈತರ ಆತ್ಮಹತ್ಯೆ, ಗೂಂಡಾಗಳ ಹಾವಳಿ ಹೆಚ್ಚಾಗಿದೆ.  ಇಂದು ಕರ್ನಾಟಕ ಗೂಂಡಾ ರಾಜ್ಯವಾಗಿ ಬದಲಾಗಿದೆ’ ಎಂದು ಟೀಕಿಸಿದರು.   

ಗಡಿಪಾರು ಒಪ್ಪಲಾಗದು: ಪೇಜಾವರ ಶ್ರೀ

ಹಿಂದುತ್ವ ಸಂಘಟನೆಗಳ ಕಾರ್ಯಕರ್ತರನ್ನು ಗಡಿಪಾರು ಮಾಡುವ ಕ್ರಮ ಒಪ್ಪತಕ್ಕದ್ದಲ್ಲ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಹಿಂದುತ್ವವಾದಿ ಸಮಘಟನೆಯ ಕಾರ್ಯಕರ್ತರನ್ನು ಗಡಿಪಾರು ಮಾಡುವ ವಿದ್ಯಮಾನ ನಡೆಯಬಾರದು. ಸರ್ಕಾರ ಇದಕ್ಕೆ ಸಮರ್ಥವಾದ ಉತ್ತರ ನೀಡಬೇಕು. ಸರ್ಕಾರ ಎಲ್ಲರಿಗೂ ಸಂಬಂಧಪಟ್ಟದ್ದು, ಹೀಗಾಗಿ ಎಲ್ಲರನ್ನೂ ಏಕರೂಪವಾಗಿ ನೋಡಬೇಕು. ಒಂದು ಗುಂಪನ್ನು ಗುರಿ ಮಾಡುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT