ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯದಿಂದ ಸುಸ್ಥಿರ ಸಮಾಜ ನಿರ್ಮಾಣ -ಸಚಿವ ಸುಧಾಕರ್

ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 89 ನೇ ಅಧಿವೇಶನ
Last Updated 4 ಡಿಸೆಂಬರ್ 2021, 4:43 IST
ಅಕ್ಷರ ಗಾತ್ರ

ಉಜಿರೆ: ದೀಪ ಬೆಳಕಿನ ಸಂಕೇತ. ಲಕ್ಷದೀಪೋತ್ಸವ ಕೇವಲ ಉತ್ಸವ ಅಲ್ಲ. ಶಿಕ್ಷಣ, ಮಾಹಿತಿ ಮತ್ತು ಜಾಗೃತಿಯೊಂದಿಗೆ ಭಕ್ತಿ ಮತ್ತು ಶರಣಾಗತಿ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸುವ ಉತ್ಸವವಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಶುಕ್ರವಾರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ 89 ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇವರಿಗೆ ದೀಪ ಹಚ್ಚುವುದು ಭಾರತೀಯ ಸಂಸ್ಕೃತಿಯ ಲಕ್ಷಣ. ಲಕ್ಷದೀಪೋತ್ಸವ ಸಂಸ್ಕೃತಿ ಉಳಿಸುವ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಸುಗಂಧವನ್ನು ಪಸರಿಸುವ ಮತ್ತು ಸಾಹಿತ್ಯವನ್ನು ಪೋಷಿಸುವ ಉತ್ಸವವಾಗಿದೆ. ಜ್ಞಾನ, ಭಕ್ತಿ ಮತ್ತು ಆಧ್ಯಾತ್ಮದ ಬೆಳಕಿನಲ್ಲಿ ಸಕಲ ಸಂಕಷ್ಟಗಳ ನಿವಾರಣೆಯಾಗಲಿ ಎಂದು ಹಾರೈಸುವ ಉತ್ಸವವಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಸೊಗಡನ್ನು ಶ್ಲಾಘಿಸಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ಮಹಾಕವಿ ರತ್ನಾಕರವರ್ಣಿ, ಮಂಜೇಶ್ವರ ಗೋವಿಂದ ಪೈ, ಕೆ. ಶಿವರಾಮ ಕಾರಂತ ಮೊದಲಾದವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಯಕ್ಷಗಾನ, ಭೂತದ ಕೋಲ, ಕಂಬಳ ಮೊದಲಾದ ಜಾನಪದ ಕ್ರೀಡೆಗಳು ಹಾಗೂ ಕಲೆಗಳ ಸೊಗಡನ್ನು ಅವರು ಶ್ಲಾಘಿಸಿದರು.

‘ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಸರ್ಕಾರ ಮೂರನೇ ಅಲೆಯನ್ನು ಸಮರ್ಪಕವಾಗಿ ಎದುರಿಸಿ ರೋಗ ನಿಯಂತ್ರಣಕ್ಕೆ ಬದ್ಧವಾಗಿದೆ ಹಾಗೂ ಸಿದ್ಧವಾಗಿದೆ. ಯಾವುದೇ ಸಾವು - ನೋವು ಉಂಟಾಗದಿರಲಿ ಎಂದು ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದೇನೆ’ ಎಂದು ಹೇಳಿದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ‘ಧರ್ಮ ಮತ್ತು ಸಾಹಿತ್ಯ ಸಮಸ್ತ ಮಾನವ ಸಮಾಜದ ಏಳಿಗೆಗೆ ಪೂರಕ ಮತ್ತು ಪ್ರೇರಕವಾಗಿವೆ. ವ್ಯಕ್ತಿ ಮತ್ತು ಸಮಾಜಕ್ಕೆ ಹಿತವನ್ನು ಉಂಟು ಮಾಡುವುದೇ ಸಾಹಿತ್ಯ’ ಎಂದರು.

‘ಸಾರ್ಥಕ ಉದ್ದೇಶವನ್ನು ಹೊಂದಿರುವ ಸಾಹಿತ್ಯ ಕೃತಿಗಳು ಆರೋಗ್ಯಪೂರ್ಣ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉತ್ತಮ ಸಾಹಿತ್ಯವನ್ನು ರಚಿಸುವ ಲೇಖಕರನ್ನು, ಪ್ರಕಾಶಕರನ್ನು ಹಾಗೂ ಓದುಗರನ್ನು ಕೃತಜ್ಞತೆಯೊಂದಿಗೆ ಸ್ಮರಿಸಬೇಕಾಗಿದೆ. ಕನ್ನಡ ನಾಡಿಯಲ್ಲಿ ಎಂಟು ಮಂದಿ ಜ್ಞಾನಪೀಠ ಪುರಸ್ಕೃತರ ಸಾಹಿತ್ಯ ಸೇವೆ ಇತರರಿಗೆ ಮಾರ್ಗದರ್ಶಿಯಾಗಿದೆ’ ಎಂದು ಹೇಳಿದರು.

ಪತ್ರಿಕೆಗಳು ಕೂಡಾ ಸಾಹಿತ್ಯ ಸೇವೆಯಲ್ಲಿ ತೊಡಗಿವೆ. ಸುದ್ದಿ, ಸಮಾಚಾರಗಳ ಪ್ರಕಟಣೆಯ ಜೊತೆಗೆ ಮೌಲಿಕ ಲೇಖನಗಳು, ಚಿಂತನೆಗಳು, ವಿಮರ್ಶಾತ್ಮಕ ಲೇಖನಗಳನ್ನೂ ಪ್ರಕಟಿಸುತ್ತಿವೆ. ರೆಡಿಯೊ ಮತ್ತು ಟಿವಿ ವಾಹಿನಿಗಳಲ್ಲಿ ಯೋಗ, ಆರೋಗ್ಯ, ಆಹಾರ ಸೇವನೆ ಇತ್ಯಾದಿ ಸಮಾಜಮುಖಿ ಕಾರ್ಯಕ್ರಮಗಳ ಪ್ರಸಾರ ಮೂಲಕ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿವೆ.

ಅಧ್ಯಕ್ಷತೆ ವಹಿಸಿದ್ದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಸಾಹಿತ್ಯದಿಂದ ಅಂತರಂಗದ ಶುದ್ಧೀಕರಣವಾಗುತ್ತದೆ. ಸಾಹಿತ್ಯ ರಚನೆಯಲ್ಲಿ ತತ್ವದ ಧಾತು ಇರಬೇಕು. ಆಧ್ಯಾತ್ಮ ಸಾಹಿತ್ಯ ಮತ್ತು ರಂಜನೀಯ ಸಾಹಿತ್ಯದ ಮಧ್ಯೆ ಸಮನ್ವಯ ಅಗತ್ಯ. ಅಂತಃಕರಣದ ಶುದ್ಧೀಕರಣದಿಂದ ಲೋಕದ ಶುದ್ಧೀಕರಣವೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಗರದ ಡಾ. ಗಜಾನನ ಶರ್ಮಾ ‘ಐತಿಹಾಸಿಕ ಸಾಹಿತ್ಯ ಸೃಷ್ಟಿಯಲ್ಲಿ ಎದುರಾಗುವ ಸವಾಲುಗಳು’ ವಿಷಯದ ಬಗ್ಗೆ, ಚಿತ್ರದುರ್ಗದ ಡಾ.ಪಿ.ಚಂದ್ರಿಕಾ ‘ಸಾಹಿತ್ಯ ಸಂವೇದನೆ ಮತ್ತು ಮಹಿಳಾ ಅಭಿವ್ಯಕ್ತಿ’ ವಿಷಯದಲ್ಲಿ ಹಾಗೂ ಬೆಂಗಳೂರಿನ ಡಾ.ಕೆ.ಪಿ.ಪುತ್ತೂರಾಯ ‘ಶಿಕ್ಷಣ ಮತ್ತು ಸಂಸ್ಕೃತಿಯ ರಕ್ಷಣೆಯಲ್ಲಿ ಸಾಹಿತ್ಯದ ಪಾತ್ರ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ. ಸುರೇಶ್ ವಂದಿಸಿದರು. ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಸಂಪತ್‌ಕುಮಾರ್ ನಿರೂಪಿಸಿದರು. ಬಳಿಕ ನಡೆದ ಲಕ್ಷದೀಪೋತ್ಸವ (ಗೌರಿಮಾರು ಕಟ್ಟೆ ಉತ್ಸವ)ವನ್ನು ಭಕ್ತರು ವೀಕ್ಷಿಸಿ ಧನ್ಯತೆ
ಹೊಂದಿದರು.

37,194 ವಿದ್ಯಾರ್ಥಿಗಳಿಗೆ ಶಿಷ್ಯವೇತನ

ಎಸ್‌ಡಿಎಂ ಪ್ರಸ್ತಕ ಪ್ರಕಾಶನ ಮಾಲೆಯ ಮೂಲಕ ಅನೇಕ ಕೃತಿಗಳನ್ನು ಪ್ರಕಟಿಸಿ ಓದುವ ಹವ್ಯಾಸ ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಿಂದ ‘ಮಂಜುವಾಣಿ’ ಮತ್ತು ‘ನಿರಂತರ’ ಎಂಬ ಎರಡು ಮಾಸಪತ್ರಿಕೆಗಳನ್ನು ಪ್ರಕಟಿಸಿ ಜ್ಞಾನ ದಾಸೋಹ ನೀಡಲಾಗುತ್ತದೆ ಎಂದರು.

‘ಸುಜ್ಞಾನ ನಿಧಿ’ ಯೋಜನೆಯಡಿಯಲ್ಲಿ 37,194 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಲಾಗುತ್ತದೆ. ವಿವಿಧ ಕಾರ್ಯಕ್ರಮಗಳ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾಹಿತ್ಯ ಪ್ರಸಾರಕ್ಕೂ ಒತ್ತು ನೀಡಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT