ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿಗೆ ತಡೆ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ

ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್
Last Updated 8 ಜುಲೈ 2022, 14:23 IST
ಅಕ್ಷರ ಗಾತ್ರ

ಮಂಗಳೂರು: ರಸ್ತೆಯ ಮೇಲೆ ಬಿದ್ದ ಮಳೆನೀರು ಬದಿಯ ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗಬೇಕು. ಈ ಪ್ರಕ್ರಿಯೆಗೆ ತಡೆಯಾಗುವಂತಿದ್ದರೆ ಅಂತಹ ಅಡೆ–ತಡೆಗಳನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು. ಅಗತ್ಯವಿದ್ದಲ್ಲಿ ಪೊಲೀಸರ ನೆರವು ಪಡೆಯಬೇಕು ಎಂದು ನಳಿನ್ ಕುಮಾರ್ ಕಟೀಲ್ ನಿರ್ದೇಶನ ನೀಡಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಮಳೆ ನೀರು ಹರಿದು ಹೋಗದಂತೆ ಎಲ್ಲೆಲ್ಲಿ ಚರಂಡಿಗಳಿಗೆ ತಡೆಗಳನ್ನು ಹಾಕಲಾಗಿದೆಯೋ ಅಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ತೆರವು ಮಾಡಬೇಕು. ಬೇಕಿದ್ದರೆ ಯಂತ್ರಗಳನ್ನು ಸಹ ಬಳಸಿಕೊಳ್ಳಬಹುದು ಎಂದರು.

ಮಳೆಗಾಲದಲ್ಲಿ ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು. ವಿದ್ಯುತ್ ಸೇರಿದಂತೆ ಇತರ ಸಮಸ್ಯೆಗಳು ಕಂಡುಬಂದರೆ ಕೂಡಲೇ ಅವುಗಳನ್ನು ನಿಭಾಯಿಸಲು ಅನುಕೂಲವಾಗುವಂತೆ ಸಿಬ್ಬಂದಿ ದೂರವಾಣಿ, ಮೊಬೈಲ್ ನಂಬರ್‌ಗಳನ್ನು ಪ್ರಕಟಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

ನಗರದಲ್ಲಿ ಮಳೆ ಹಾಗೂ ಪ್ರವಾಹ ಸ್ಥಿತಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ನಿಯೋಜಿಸಿರುವ ಮೂವರು ಎಂಜಿನಿಯರ್‌ಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮಳೆಗಾಲವಾದ ಕಾರಣ ಯಾವುದೇ ರಸ್ತೆಗಳನ್ನು ತುಂಡರಿಸಬಾರದು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ‘ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ ₹ 15 ಕೋಟಿ ಅನುದಾನವಿದೆ. ಪ್ರತಿ ತಾಲ್ಲೂಕಿನ ತಹಶೀಲ್ದಾರರ ಖಾತೆಯಲ್ಲಿ ₹ 45 ಲಕ್ಷ ಹಣವಿದ್ದು, ಮಳೆ, ನೆರೆಯಿಂದಾಗಿ ಮನೆ ಹಾನಿಯಾದಲ್ಲಿ ಕೂಡಲೇ ಚೆಕ್ ಮೂಲಕ ಪರಿಹಾರ ನೀಡುವಂತೆ ಸೂಚಿಸಲಾಗಿದೆ’ ಎಂದರು.
ಎಸ್‍ಡಿಆರ್‌ಎಫ್‍ನಲ್ಲಿ 67, ಎನ್‍ಡಿಆರ್‌ಎಫ್‍ನಲ್ಲಿ 20 ಸಿಬ್ಬಂದಿ ಇದ್ದು, ಪ್ರಾಕೃತಿಕ ಅವಘಡಗಳ ಸಂದರ್ಭದಲ್ಲಿ ನೆರವು ನೀಡುತ್ತಿದ್ದಾರೆ. ಜಿಲ್ಲಾಧಿಕಾರಿ, ಲೋಕೋಪಯೋಗಿ, ಸಣ್ಣ ನೀರಾವರಿ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಅವಲೋಕಿಸುವಂತೆ ತಿಳಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳುವಂತೆ ಸೂಚನೆ ನೀಡಿದರು.

ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್‌ ಭಗವಾನ್ ಸೋನಾವಣೆ, ಮಹಾನಗರ ಪಾಲಿಕೆಯ ಪ್ರಭಾರ ಆಯುಕ್ತ ಪ್ರಶಾಂತ್ ಮಿಶ್ರಾ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT