ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಇಂಡಿಯಾ: ಸೋರಿಕೆಗೆ ತಡೆ

ಜಿಲ್ಲಾ ಮಟ್ಟದ ವಿಎಲ್‍ಇ ಕಾರ್ಯಾಗಾರ: ಸಂಸದ ನಳಿನ್
Last Updated 19 ಮೇ 2022, 2:35 IST
ಅಕ್ಷರ ಗಾತ್ರ

ಮಂಗಳೂರು: ಡಿಜಿಟಲ್ ಇಂಡಿಯಾ ಜಾರಿಗೊಳಿಸಿದ ಮೇಲೆ ಫಲಾನುಭವಿಗಳಿಗೆ ಸರ್ಕಾರದ ನೆರವು ಪಾವತಿಯಾಗುವಲ್ಲಿ ಸೋರಿಕೆ ತಡೆ ಸಾಧ್ಯವಾಗಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನದಡಿ ನಗರದ ಕೆಪಿಟಿ ಕಾಲೇಜು ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಎಲ್‍ಇ (ಹಳ್ಳಿ ಮಟ್ಟದ ಉದ್ಯಮಿ) ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಡಿಜಿಟಲ್ ವಹಿವಾಟಿಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಬದುಕು ಕಟ್ಟಿಕೊಳ್ಳುವ ಕೆಲಸಕ್ಕೆ ಉತ್ತೇಜನ ನೀಡಲಾಗುತ್ತಿದೆ. ಸಾಧ್ಯವಾದಷ್ಟು ಮೊಬೈಲ್ ಮೂಲಕವೇ ಆರ್ಥಿಕ ವಹಿವಾಟು ನಡೆಸಲು ಉತ್ತೇಜನ ನೀಡಲಾಗುತ್ತಿದೆ ಎಂದರು.

ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆಯನ್ನು ಬೆಳೆಸುವುದೇ ಪ್ರಧಾನ ಮಂತ್ರಿ ಜಾರಿಗೆ ತಂದಿರುವ ಸ್ಕಿಲ್ ಇಂಡಿಯಾ ಯೋಜನೆಯ ಉದ್ದೇಶವಾಗಿದೆ. ಜನರ ಬಳಿಗೆ ಸೇವಾ ಕೇಂದ್ರಗಳು ತೆರಳಬೇಕು. ಸೇವಾ ಕೇಂದ್ರಗಳನ್ನು ನಡೆಸಲು ಅಗತ್ಯ ತರಬೇತಿ ಆಗಬೇಕು. ಹಳ್ಳಿಯ ಪ್ರತಿಯೊಬ್ಬರೂ ಡಿಜಿಟಲ್ ಸಾಕ್ಷರರಾಗಬೇಕು ಎಂಬುದು ಕೇಂದ್ರ ಸರ್ಕಾರದ ಆಶಯ ಎಂದರು.

ಮೇಕ್‌ ಇನ್ ಇಂಡಿಯಾ, ಸ್ಟಾರ್ಟ್ ಅಪ್‌, ಸ್ಟ್ಯಾಂಡ್‌ಅಪ್, ಆತ್ಮನಿರ್ಭರ ಭಾರತ, ವೋಕಲ್ ಫಾರ್ ಲೋಕಲ್, ಸ್ಕಿಲ್ ಇಂಡಿಯಾ, ದೀನ್‍ದಯಾಳ್ ಕೌಶಲಾಭಿವೃದ್ಧಿ ಕೇಂದ್ರ, ಪ್ರಧಾನ ಮಂತ್ರಿ ಕೌಶಲಾಭಿವೃದ್ಧಿ, ಮುದ್ರಾ ಸಾಲ ವಿತರಣೆ ಹೀಗೆ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು.

ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ‘ಡಿಜಿಟಲ್ ಪಾವತಿ ಮೂಲಕ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ’ ಎಂದರು. ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇ-ಗವರ್ನನ್ಸ್ ಸರ್ವಿಸಸ್ ಇಂಡಿಯಾ ಲಿಮಿಟೆಡ್‍ನ ಜಿಲ್ಲಾ ವ್ಯವಸ್ಥಾಪಕ ನಿದಿನ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT