ದಕ್ಷಿಣ ಕನ್ನಡ: ₹ 213 ಕೋಟಿ ಪರಿಹಾರ ಕೋರಿದ ಜಿಲ್ಲಾಡಳಿತ

7
ಮಳೆಹಾನಿ ಕುರಿತು ಕೇಂದ್ರ ತಂಡದಿಂದ ಅಧ್ಯಯನ

ದಕ್ಷಿಣ ಕನ್ನಡ: ₹ 213 ಕೋಟಿ ಪರಿಹಾರ ಕೋರಿದ ಜಿಲ್ಲಾಡಳಿತ

Published:
Updated:
Deccan Herald

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ₹ 281.67 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಮತ್ತು ₹ 295.48 ಕೋಟಿ ಮೌಲ್ಯದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂದು ಕೇಂದ್ರ ಅಧ್ಯಯನ ತಂಡಕ್ಕೆ ವರದಿ ಸಲ್ಲಿಸಿರುವ ಜಿಲ್ಲಾಡಳಿತ, ₹ 213 ಕೋಟಿ ಪರಿಹಾರ ನೀಡುವಂತೆ ಕೋರಿದೆ.

ಜಿಲ್ಲೆಯಲ್ಲಿ ಮಳೆಹಾನಿ ಕುರಿತು ಅಧ್ಯಯನ ನಡೆಸುತ್ತಿರುವ ಕೇಂದ್ರ ಸರ್ಕಾರದ ಆರ್ಥಿಕ ಸಚಿವಾಲಯದ ವೆಚ್ಚ ವಿಭಾಗದ ಉಪ ಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಕಂದಾಯ ಇಲಾಖೆ ಉಪ ಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್‌ ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರನ್ನೊಳಗೊಂಡ ತಂಡ, ಬುಧವಾರ ಸಂಜೆ ಮೂಲ್ಕಿ ಹೋಬಳಿಯ ಪಂಜ, ಕಿಲಿಂಜಾರು, ಆದ್ಯಪಾಡಿ ಮತ್ತು ಮಳವೂರು ಗ್ರಾಮಗಳಿಗೆ ಭೇಟಿನೀಡಿ ಬೆಳೆನಷ್ಟದ ಬಗ್ಗೆ ಮಾಹಿತಿ ಪಡೆಯಿತು. ಈ ತಂಡ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರೊಂದಿಗೂ ಚರ್ಚಿಸಿತ್ತು.

ಆ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಳೆಹಾನಿಗೆ ಸಂಬಂಧಿಸಿದ ವಿಸ್ತೃತ ವರದಿಯನ್ನು ತಂಡಕ್ಕೆ ಸಲ್ಲಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌, ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ ತ್ವರಿತವಾಗಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು. ಗುರುವಾರ ತುಂಬೆ ಅಣೆಕಟ್ಟೆ, ಮೂಲರಪಟ್ಣ, ಕಲ್ಲಾಜೆ, ಸುಬ್ರಹ್ಮಣ್ಯ ಮತ್ತು ಶಿರಾಡಿ ಘಾಟಿಗೆ ಅಧ್ಯಯನ ತಂಡ ಭೇಟಿ ನೀಡಲಿದೆ.

ರಸ್ತೆಗಳು, ಸೇತುವೆಗಳು, ಸರ್ಕಾರಿ ಕಟ್ಟಡಗಳು, ನೀರಾವರಿ ಇಲಾಖೆಯ ಆಸ್ತಿಗಳು, ವಿದ್ಯುತ್‌ ಮಾರ್ಗ ಮತ್ತು ಪರಿವರ್ತಕಗಳು ಸೇರಿದಂತೆ ಸಾರ್ವಜನಿಕ ಆಸ್ತಿಗಳಿಗೆ ಆಗಿರುವ ಹಾನಿಯಿಂದ ₹ 281.67 ಕೋಟಿ ನಷ್ಟವಾಗಿದೆ. 232.34 ಹೆಕ್ಟೇರ್‌ ವಿಸ್ತೀರ್ಣದ ಕೃಷಿ ಬೆಳೆ ನಷ್ಟವಾಗಿದೆ. 20,985 ಹೆಕ್ಟೇರ್‌ ವಿಸ್ತೀರ್ಣದಲ್ಲಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ ಎಂಬ ಅಂಶ ವರದಿಯಲ್ಲಿದೆ.

ವಾಡಿಕೆ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ 3,472 ಮಿಲಿ ಮೀಟರ್ ಮಳೆ ಬೀಳಬೇಕಿತ್ತು. ಆದರೆ, 3,967 ಮಿಲಿ ಮೀಟರ್‌ ಮಳೆ ಬಿದ್ದಿದೆ. ವಾಡಿಕೆಗೆ ಹೋಲಿಸಿದರೆ ಶೇಕಡ 14ರಷ್ಟು ಹೆಚ್ಚು ಮಳೆಬಿದ್ದಿದೆ. 11 ಜನರು ಮಳೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. 1,770 ಮನೆಗಳಿಗೆ ಹಾನಿಯಾಗಿದ್ದು, ₹ 16.83 ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರವಾಹ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ 14 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ತಗ್ಗು ಪ್ರದೇಶಗಳು ಹಾಗೂ ಭೂಕುಸಿತದಿಂದ ತೊಂದರೆಗೆ ಸಿಲುಕಿದ್ದ 1,442 ಕುಟುಂಬಗಳಿಗೆ ಈ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !