ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈತರ ಖಾತೆ ಸೇರಿದೆ ₹ 400 ಕೋಟಿ: ನಳಿನ್‌

Last Updated 17 ಅಕ್ಟೋಬರ್ 2022, 15:48 IST
ಅಕ್ಷರ ಗಾತ್ರ

ಮಂಗಳೂರು: ‘ಕೇಂದ್ರ ಸರ್ಕಾರ ಆರಂಭಿಸಿದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯ ರೈತರ ಖಾತೆಗಳಿಗೆ ಇದುವರೆಗೆ ₹ 400 ಕೋಟಿಗೂ ಅಧಿಕ ಮೊತ್ತ ಪಾವತಿ ಆಗಿದೆ’ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದರು.

ನವದೆಹಲಿಯಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಸಮ್ಮೇಳನದ ನೇರ ಪ್ರಸಾರವನ್ನು ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಫಸಲ್‌ ಭಿಮಾ ಯೋಜನೆಯಲ್ಲೂ ಜಿಲ್ಲೆಯ ಕೆಲವು ರೈತರಿಗೆ ₹ 1 ಲಕ್ಷಕ್ಕೂ ಅಧಿಕ ಬೆಳೆ ನಷ್ಟ ಪರಿಹಾರ ಸಿಕ್ಕಿದೆ. ಈ ಯೋಜನೆಯಡಿ ಶೇ 50ರಷ್ಟು ಬೆಳೆ ಹಾನಿ ಆದರೆ ಮಾತ್ರ ನಷ್ಟ ಪರಿಹಾರ ಪಡೆಯಲು ಸಾಧ್ಯವಾಗುತ್ತಿತ್ತು. ಆ ಮಿತಿಯನ್ನು ಈಗ ಶೇ 30ಕ್ಕೆ ಇಳಿಸಲಾಗಿದ್ದು, ಇದರಿಂದ ಹೆಚ್ಚಿನ ರೈತರಿಗೆ ಪ್ರಯೋಜನವಾಗಿದೆ’ ಎಂದರು.

‘ರೈತರು ಆತ್ಮಹತ್ಯೆ ಮಾಡಿಕೊಳ್ಳದ ಜಿಲ್ಲೆ ಇದ್ದರೆ ಅದು ದಕ್ಷಿಣ ಕನ್ನಡ. ಈ ಜಿಲ್ಲೆಯ ರೈತರು ಪ್ರಯೋಗಶೀಲರು. ಭತ್ತದ ಬೇಸಾಯ ಕೈಹಿಡಿಯುವುದಿಲ್ಲ ಎಂದು ಗೊತ್ತಾದಾಗ ಅಡಿಕೆ ಬೆಳೆದರು. ಅಡಿಕೆಯಿಂದ ಅಸಲಾಗುವುದಿಲ್ಲ ಎಂದು ಗೊತ್ತಾದಾಗ ಕೊಕ್ಕೊ, ವೆನಿಲ್ಲಾ, ರಬ್ಬರ್‌ ಬೆಳೆಗಳ ಮೊರೆ ಹೋದರು’ ಎಂದರು.

‘ಒಂದು ಕಾಲದಲ್ಲಿ ಭತ್ತದ ಕೃಷಿ ಜಿಲ್ಲೆಯಲ್ಲಿ ಕಡಿಮೆ ಆಗಿತ್ತು. ಆದರೆ ಈ ವರ್ಷ ಮೂರು ತಾಲ್ಲೂಕುಗಳ ಭತ್ತದ ಕೃಷಿ ಪ್ರಮಾಣ ಹೆಚ್ಚಳವಾಗಿದೆ. ಇಲ್ಲಿನ ರೈತ ಉತ್ಪಾದಕ ಸಂಸ್ಥೆಗಳು 211 ಹೆಕ್ಟೇರ್‌ ಹಡಿಲು ಭೂಮಿಯಲ್ಲಿ ಭತ್ತ ಬೆಳೆದಿವೆ. ಯಾಂತ್ರೀಕೃತ ಬೇಸಾಯ ವಿಧಾನಗಳನ್ನು ಅಳವಡಿಸಿಕೊಂಡರೆ ಭತ್ತದ ಕೃಷಿಯೂ ಕೈ ಹಿಡಿಯುತ್ತದೆ. ಯಂತ್ರೋಪಕರಣ ಖರೀದಿಗೆ ಸರ್ಕಾರವೂ ಉತ್ತೇಜನ ನೀಡುತ್ತಿದೆ. ಯಂತ್ರೋಪಕರಣಗಳ ಖರೀದಿಗಾಗಿ ಕಳೆದ ಸಾಲಿನಲ್ಲಿ ಜಿಲ್ಲೆಗೆ ₹ 6 ಕೋಟಿ ಅನುದಾನ ಒದಗಿಸಲಾಗಿದೆ’ ಎಂದರು.

‘ಆದಾಯ ದ್ವಿಗುಣಗೊಂಡ ರೈತರನ್ನು ನವದೆಹಲಿಯಲ್ಲಿ ಸೋಮವಾರ ನಡೆದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು. ನಮ್ಮ ಜಿಲ್ಲೆಯಿಂ‌ದ ಪ್ರಗತಿಪರ ಕೃಷಿಕ ಭವಾನಿ ಶಂಕರ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’ ಎಂದು ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಜೆ.ರಮೇಶ್‌ ತಿಳಿಸಿದರು.

ಶಾಸಕ ಡಿ.ವೇದವ್ಯಾಸ ಕಾಮತ್‌, ಉಪಮೇಯರ್‌ ಪೂರ್ಣಿಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ಪ್ರಗತಿಪರ ಕೃಷಿಕರಾದ ಜಾಸ್ಮಿನ್‌ ಅರ್‍ಹಾನ, ದಯಾನಂದ ಕುಲಾಲ್‌ ಹಾಗೂ ಇತರರು ಇದ್ದರು.

–0–

‘ಕುಚ್ಚಲಕ್ಕಿಗೆ ಹೆಚ್ಚಲಿದೆ ಬೇಡಿಕೆ’

’ಕುಚ್ಚಲಕ್ಕಿಯ ಭತ್ತ ಬೆಳೆಯುವವರ ಸಂಖ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆ ಇದೆ. ಕುಚ್ಚಲಕ್ಕಿ ತಯಾರಿಸಲು ತೀರ್ಥಹಳ್ಳಿ ಸಾಗರದ ಕಡೆಗಳಿಂದ ಭತ್ತ ತರಿಸಬೇಕಾದ ಸ್ಥಿತಿ ಇದೆ. ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೂ ಕುಚ್ಚಲಕ್ಕಿ ನೀಡಲು ಸರ್ಕಾರ ತೀರ್ಮಾನಿಸಿದ್ದು, ಇದರಿಂದ ಈ ಅಕ್ಕಿಗೆ ಬೇಡಿಕೆ ಹೆಚ್ಚಲಿದೆ. ರೈತರು ಇದರ ಪ್ರಯೋಜನ ಪಡೆಯಬೇಕು’ ಎಂದು ನಳಿನ್‌ ಕುಮಾರ್‌ ತಿಳಿಸಿದರು.

–0–

‘ಹಳದಿ ರೋಗ ಪ್ರಯೋಗಾಲಯಕ್ಕೆ ₹ 1 ಕೋಟಿ’

‘ಜಿಲ್ಲೆಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ (ಸಿಪಿಸಿಆರ್‌ಐ) ಅಡಿಕೆಯ ಹಳದಿ ರೋಗದ ಪ್ರಯೋಗಾಲಯ ಸ್ಥಾಪನೆಗೆ ₹ 1 ಕೋಟಿ ಮಂಜೂರಾಗಿದೆ. ಅಡಿಕೆಯ ಎಲೆ ಚುಕ್ಕಿ ರೋಗದ ಸಂಶೋಧನೆಗೂ ಅನುದಾನ ಒದಗಿಸಲಾಗುತ್ತದೆ’ ಎಂದು ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದರು.

–0–

ಅಂಕಿ ಅಂಶ

1,55,542

ದಕ್ಷಿಣ ಕನ್ನಡ ಜಿಲ್ಲೆಯ ಪಿ.ಎಂ.ಕಿಸಾನ್‌ ಯೋಜನೆ ಫಲಾನುಭವಿಗಳು (ಕೇಂದ್ರದ ಅನುದಾನ)

₹ 277.12 ಕೋಟಿ

ಪಿ.ಎಂ.ಕಿಸಾನ್‌ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ರೈತರಿಗೆ ಪಾವತಿಯಾದ ಮೊತ್ತ (11 ಕಂತು)

1,31,575

ಜಿಲ್ಲೆಯ ಪಿ.ಎಂ.ಕಿಸಾನ್‌ ಯೋಜನೆ ಫಲಾನುಭವಿಗಳು (ರಾಜ್ಯದ ಅನುದಾನ)

₹128.28 ಕೋಟಿ

ಪಿ.ಎಂ.ಕಿಸಾನ್‌ ಯೋಜನೆಯಡಿ ರಾಜ್ಯ ಸರ್ಕಾರದಿಂದ ಜಿಲ್ಲೆಯ ರೈತರಿಗೆ ಪಾವತಿಯಾದ ಮೊತ್ತ (5 ಕಂತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT