ಅಮೆರಿಕದ ವೆಲ್‌ನೆಸ್ ವಿವಿಯ ಗೌರವ ಡಾಕ್ಟರೇಟ್ ಸ್ವೀಕರಿಸಿದ ವೀರೇಂದ್ರ ಹೆಗ್ಗಡೆ

ಉಜಿರೆ: ‘ನಾವೆಲ್ಲರೂ ಇಂದು ಸುಮಾನ ಮನಸ್ಕರಾಗಬೇಕು. ವಿಶ್ವ ಕಲ್ಯಾಣವೇ ನಮ್ಮ ಗುರಿ. ಸಮಸ್ತ ಮಾನವ ಕಲ್ಯಾಣ ಹಾಗೂ ಸಂತೋಷವೇ ಎಲ್ಲ ಸೇವೆಗಳ ಮುಖ್ಯ ಉದ್ದೇಶ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಜಾಗತಿಕ ಮಟ್ಟದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕ್ಷೇತ್ರದಲ್ಲಿ ಮಾಡಿದ ಸೇವೆ, ಸಾಧನೆ ಗುರುತಿಸಿ ಅಮೆರಿಕದ ವೆಲ್‌ನೆಸ್ ವಿಶ್ವವಿದ್ಯಾಲಯವು ನೀಡಿದ ಆಚಾರ್ಯ ಪದವಿ ಹಾಗೂ ಗೌರವ ಡಾಕ್ಟರೇಟ್ ಪದವಿಯನ್ನು ಶನಿವಾರ ಸ್ವೀಕರಿಸಿ ಅವರು ಮಾತನಾಡಿದರು.
ವೈದ್ಯಕೀಯ ಚಿಕಿತ್ಸೆಯಲ್ಲಿ ವಿವಿಧ ಪದ್ಧತಿಗಳ ನಡುವೆ ಸ್ಪರ್ಧೆ ಸಲ್ಲದು. ಪರಸ್ಪರ ಪೂರಕವಾಗಿ ಚಿಕಿತ್ಸೆ ನೀಡಿ ರೋಗಿಯ ಯೋಗ ಕ್ಷೇಮದೊಂದಿಗೆ ಆರೋಗ್ಯ ಭಾಗ್ಯ ರಕ್ಷಣೆಯೇ ವೈದ್ಯರ ಗುರಿಯಾಗಬೇಕು. ವಿಶ್ವದಲ್ಲೇ ಪ್ರಥಮವಾಗಿ ಧರ್ಮಸ್ಥಳದಲ್ಲಿ ಮತ್ತು ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಿರುವುದಾಗಿ ಹೇಳಿದರು.
ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಮತ್ತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಆನ್‌ಲೈನ್ ಮೂಲಕ ಹೆಗ್ಗಡೆ ಅವರನ್ನು ಅಭಿನಂದಿಸಿದರು.
ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಬಿ.ಎನ್. ಸತ್ಯನಾರಾಯಣ ಮಾತನಾಡಿ, ‘ನಮ್ಮ ಯೋಚನೆಗಳಂತೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಧರ್ಮಸ್ಥಳದಲ್ಲಿ ಸತ್ಯ, ನ್ಯಾಯ, ಧರ್ಮ ಮತ್ತು ಸಮಾನತೆ ನಿತ್ಯವೂ ಜೀವಂತವಾಗಿದ್ದು, ಹೆಗ್ಗಡೆ ಅವರು ಸಮಾಜದ ಕಣ್ಮಣಿಯಾಗಿದ್ದಾರೆ. ಹೆಗ್ಗಡೆ ಅವರಂತೆ ನಿಷ್ಕಲ್ಮಶ ಮನದಿಂದ ಸಮಾಜ ಸೇವೆ ಮಾಡುವವರೇ ನಿಜವಾದ ವಿಜ್ಞಾನಿಗಳು. ಜನ ಸಾಮಾನ್ಯರೂ ಕೂಡ ಸ್ವಸಹಾಯ ಸಂಘಗಳ ಮೂಲಕ ಸ್ವಾಭಿಮಾನ ಮತ್ತು ಗೌರವಯುತ ಜೀವನ ಮಾಡುವಂತೆ ಕಲಿಸಿದ್ದಾರೆ’ ಎಂದು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಆರ್. ವೇಣು ಗೋಪಾಲ್ ಮಾತನಾಡಿ, ‘ಯೋಗ, ಧ್ಯಾನ, ಪ್ರಾಣಾಯಾಮ, ವಾಕಿಂಗ್, ಸರಳ, ಸಾತ್ವಿಕ ಆಹಾರ ಸೇವನೆ, ಸರಿಯಾದ ನಿದ್ರೆ ಮತ್ತು ಸದಾಚಾರದೊಂದಿಗೆ ವ್ಯಸನ ಮುಕ್ತರಾಗಿ ಸರಳ ಜೀವನ ನಡೆಸಿದಲ್ಲಿ ಆರೋಗ್ಯ ಪೂರ್ಣ ಜೀವನ ಮಾಡಬಹುದು’ ಎಂದು ಹೇಳಿದರು.
ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಕುಲಪತಿ ಎಂ.ಡಿ.ವೆಂಕಟೇಶ್, ಸುರತ್ಕಲ್ ಎನ್‌ಐಟಿಕೆಯ ಪ್ರೊ. ಶ್ರೀಪತಿ ಆಚಾರ್ಯ ಶುಭ ಹಾರೈಸಿದರು. ಪತ್ರಿಜಿ, ಸುಬಾ ಕೋಟಾ ಮತ್ತು ರ‍್ಯಾಂಬತ್ ಜನಾರ್ದನ್ ಅವರಿಗೂ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ನಾಟ್ಯ ಸಂಪದ ತಂಡದವರ ಭರತನಾಟ್ಯ, ಡಾ. ನಾಗೇಂದ್ರ ಶಾಸ್ತ್ರೀಯ ಮತ್ತು ತಂಡದ ಕರ್ನಾಟಕ ಸಂಗೀತ, ಡಾ.ಕೆ.ಸುರೇಶ್ ಮತ್ತು ಆದಿತ್ಯ ರಂಗನ್ ಅವರ ವೇದ ಮಂತ್ರ ಪಠಣ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು.
ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯರಾದ ಕೆ. ಪ್ರತಾಪಸಿಂಹ ನಾಯಕ್ ಮತ್ತು ಕೆ. ಹರೀಶ್ ಕುಮಾರ್ ಇದ್ದರು. ಅಮೆರಿಕ ವೇದಿಕ್ ವೆಲ್‌ನೆಸ್ ವಿಶ್ವವಿದ್ಯಾಲಯದ ಅಧ್ಯಕ್ಷ ಕೃಷ್ಣಮೂರ್ತಿ ಸ್ವಾಗತಿಸಿದರು. ಉಪಾಧ್ಯಕ್ಷ ರಶ್ಮಿ ಕೃಷ್ಣಮೂರ್ತಿ ವಂದಿಸಿದರು.
‘ಆರೋಗ್ಯ ಭಾಗ್ಯ ಮುಖ್ಯ’
‘ಧಾರವಾಡದಲ್ಲಿರುವ ಅಲೋಪತಿ ಆಸ್ಪತ್ರೆಯಲ್ಲಿ ಕೂಡ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗಗಳನ್ನು ಪ್ರಾರಂಭಿಸಲಾಗಿದೆ.
ನಮ್ಮ ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಕಡೆಗಣಿಸಬಾರದು. ಧರ್ಮಸ್ಥಳದಲ್ಲಿ ಜನರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಭಾಗ್ಯ ರಕ್ಷಣೆಗೆ ನಿರಂತರ ಮಾರ್ಗದರ್ಶನದೊಂದಿಗೆ ಅಭಯದಾನ ನೀಡಲಾಗುತ್ತದೆ. ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಲೋಕ ಕಲ್ಯಾಣವಾಗುವಂತೆ ನಾವೆಲ್ಲರೂ ಶ್ರಮಿಸೋಣ’ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.