ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್ ಆರೋಗ್ಯ ವಿಚಾರಿಸಲು ಡಿಕೆಶಿ, ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ

Last Updated 22 ಜುಲೈ 2021, 16:47 IST
ಅಕ್ಷರ ಗಾತ್ರ

ಮಂಗಳೂರು: ನಗರದ ಯೇನೆಪೋಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಗುರುವಾರ ಸಂಜೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಸ್ಪತ್ರೆಗೆ ಭೇಟಿ ನೀಡಿದರು.

ನಂತರ ಆಸ್ಕರ್ ಪತ್ನಿ ಬ್ಲಾಸಂ ಫರ್ನಾಂಡಿಸ್ ಹಾಗೂ ವೈದ್ಯರ ಜೊತೆ, ಕಾಂಗ್ರೆಸ್ ನಾಯಕರು ಚರ್ಚಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಸ್ಕರ್ ಫರ್ನಾಂಡಿಸ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕುಟುಂಬಸ್ಥರಿಗೆ ಅವರ ಆರೋಗ್ಯ ಚೇತರಿಕೆಯಾಗುವ ವಿಶ್ವಾಸವಿದೆ. ಮಾಧ್ಯಮದಲ್ಲಿ ಬಿಂಬಿಸಿರುವಷ್ಟರ ಮಟ್ಟಿಗೆ ಅವರ ಆರೋಗ್ಯ ಹದಗೆಟ್ಟಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ಸರಳ, ಸಜ್ಜನ ರಾಜಕಾರಣಿಯಾಗಿರುವ ಆಸ್ಕರ್ ಅವರೊಡನೆ ನಾಲ್ಕು ದಶಕಗಳ ಒಡನಾಟವಿದೆ. ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ, ತಜ್ಞ ವೈದ್ಯರು ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ನಿರ್ಧರಿಸುತ್ತಾರೆ. ಮಂಗಳೂರಿನಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಇರುವ ಕಾರಣ, ಚಿಕಿತ್ಸೆಗೆ ಬೇರೆಡೆಗೆ ಕರೆದುಕೊಂಡು ಹೋಗಬೇಕಾದ ಸಂದರ್ಭ ಇಲ್ಲ. ಇಡೀ ಪಕ್ಷ ಅವರ ಆರೋಗ್ಯ ಸುಧಾರಣೆಗಾಗಿ ಪ್ರಾರ್ಥಿಸುತ್ತಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸಹ ಆಸ್ಕರ್ ಕುಟುಂಬಸ್ಥರೊಡನೆ ಸಂಪರ್ಕದಲ್ಲಿದ್ದಾರೆ’ ಎಂದು ಅವರು ತಿಳಿಸಿದರು.

‘ವಲಸೆ ಬಂದಿರುವವರಿಗೆ ನಮಗೆ ಸಂಬಂಧವಿಲ್ಲ’

‘ಬಿಜೆಪಿಗೆ ವಲಸೆ ಬಂದಿರುವ ಶಾಸಕರು ಮುಖ್ಯಮಂತ್ರಿ ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ‘ಅವರು ಈಗ ವಲಸೆ ಶಾಸಕರಲ್ಲ, ಅವರು ಬಿಜೆಪಿಯ ಸಚಿವರು ಮತ್ತು ಶಾಸಕರು. ಅವರು ಯಾರನ್ನು ಬೇಕಾದರೂ ಭೇಟಿ ಮಾಡಿರಬಹುದು, ನಮಗೆ ಅದಕ್ಕೆ ಸಂಬಂಧವಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಪಕ್ಷ ಅವೆಲ್ಲವನ್ನು ನೋಡಿಕೊಳ್ಳುತ್ತದೆ’ ಎಂದರು.

‘ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಕೇಂದ್ರ– ರಾಜ್ಯ ಸರ್ಕಾರಗಳು ಜನರ ವಿಶ್ವಾಸ ಕಳೆದುಕೊಂಡಿವೆ. ಕೋವಿಡ್ ಎರಡನೇ ಅಲೆಯ ವೇಳೆ ಸಾವಿರಾರು ಜನರು ಜೀವ ಕಳೆದುಕೊಂಡರು. ಸರ್ಕಾರದಿಂದ ಸಕಾಲಕ್ಕೆ ಹಾಸಿಗೆ ಒದಗಿಸಲು, ಆಮ್ಲಜನಕ ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆರೋಗ್ಯ ವಿಚಾರಣೆ: ಕಾಂಗ್ರೆಸ್‌ ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್, ಅಶೋಕ್ ಗೆಹ್ಲೋಟ್ ಅವರು ಆಸ್ಕರ್ ಫರ್ನಾಂಡಿಸ್‌ ಅವರ ಕುಟುಂಬದ ಸದಸ್ಯರ ಜೊತೆಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಆರೋಗ್ಯ ವಿಚಾರಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೂಡ ದೂರವಾಣಿಯಲ್ಲಿ ಆರೋಗ್ಯ ವಿಚಾರಿಸಿದ್ದರು.

ದೇಗುಲದಲ್ಲಿ ವಿಶೇಷ ಪೂಜೆ

ಆಸ್ಕರ್ ಫರ್ನಾಂಡಿಸ್ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ, ಮಾಜಿ ಶಾಸಕರಾದ ಜೆ. ಆರ್. ಲೋಬೊ, ಐವನ್ ಡಿಸೋಜ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಪಕ್ಷದ ನಾಯಕರಾದ ಮಿಥುನ್ ರೈ, ಶಾಲೆಟ್ ಪಿಂಟೊ, ಶಶಿಧರ ಹೆಗ್ಡೆ, ಬಿ.ಜಿ. ಸುವರ್ಣ, ರಾಜಶೇಖರ್ ಕೋಟ್ಯಾನ್, ಮೊಹಮ್ಮದ್ ಮೋನು, ಲುಕ್ಮಾನ್ ಬಂಟ್ವಾಳ, ಅಬ್ದುಲ್ ರವೂಫ್, ಅನಿಲ್ ಕುಮಾರ್, ಸದಾಶಿವ ಶೆಟ್ಟಿ ,ಟಿ.ಕೆ ಸುಧೀರ್, ಜಯಶೀಲಾ ಅಡ್ಯಂತಾಯ, ಶುಭೋದಯ ಆಳ್ವ, ನೀರಜ್ ಪಾಲ್, ಲಾವಣ್ಯ ಬಲ್ಲಾಳ್, ಪ್ರಕಾಶ್ ಸಾಲ್ಯಾನ್, ಬೇಬಿ ಪೂಜಾರಿ, ರಮಾನಂದ್ ಪೂಜಾರಿ, ಅಪ್ಪಿ, ಶಾಂತಲ ಗಟ್ಟಿ, ರಕ್ಷಿತ್ ಶಿವರಾಮ್, ಶಶಿಕಲಾ ಕದ್ರಿ, ಹೊನ್ನಯ್ಯ, ದುರ್ಗಾಪ್ರಸಾದ್, ನಿತ್ಯಾನಂದ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT