ಶನಿವಾರ, ಡಿಸೆಂಬರ್ 14, 2019
24 °C
ಸಹಕಾರ ಸಪ್ತಾಹ ಉದ್ಘಾಟಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಗ್ರಾಮೀಣರಿಗೆ ಬದುಕು ಕೊಟ್ಟ ಹೈನುಗಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ರಾಜ್ಯದಲ್ಲಿ ನೆರೆ ಬಂದು ಸಾವಿರಾರು ಜಾನುವಾರುಗಳು ಕೊಚ್ಚಿಹೋಗಿವೆ. ರೈತರ ಜಮೀನು, ಬೆಳೆ ನೀರು ಪಾಲಾಗಿವೆ. ಪ್ರವಾಹದ ಮರುದಿನವೇ ಗ್ರಾಮೀಣ ಜನರು ಬದುಕು ಸಾಗಿಸಲು ಸಾಧ್ಯವಾಗಿದ್ದರೆ ಅದು ಹೈನುಗಾರಿಕೆ ಯಿಂದ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಕುಲಶೇಖರ ಕೋರ್ಡೆಲ್‌ ಚರ್ಚ್‌ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ 66ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿಯ ಹಾಲು ಕುಡಿದ ನಾವು, ಬಳಿಕ ಗೋವಿನ ಹಾಲು ಕುಡಿದು ಬೆಳೆಯುತ್ತೇವೆ. ಗೋವಿಗೆ ಇಂದಿಗೂ ಮಹತ್ವದ ಸ್ಥಾನ ನೀಡಲಾಗುತ್ತಿದೆ. ಗೋವಿನಿಂದಲೇ ನಿತ್ಯ ಹಾಲು ಪಡೆಯುವ ಗ್ರಾಮೀಣ ಜನರು, ಸಂಘಗಳಿಗೆ ಹಾಲು ಹಾಕಿ, ಜೀವನ ನಡೆಸುತ್ತಿದ್ದಾರೆ. ಈ ಕಾರ್ಯದಲ್ಲಿ ಹಾಲು ಒಕ್ಕೂಟಗಳು ಹಾಗೂ ಪ್ರೋತ್ಸಾಹಧನ ನೀಡುವ ಸರ್ಕಾರಗಳು ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಮುಕ್ತ ವ್ಯಾಪಾರ ಒಪ್ಪಂದದಿಂದ ಹಿಂದೆ ಸರಿಯುವ ಮೂಲಕ ವಿದೇಶದಿಂದ ಹಾಲು ಆಮದು ಆಗುವುದನ್ನು ತಡೆದಿರುವ ಕೇಂದ್ರ ಸರ್ಕಾರ ಹೈನುಗಾರರಿಗೆ ಬಹುದೊಡ್ಡ ಉಪಕಾರ ಮಾಡಿದೆ ಎಂದರು.

ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸೇಲಂನಿಂದ ಹಾಲು ಬರುತ್ತಿತ್ತು. ಇದೀಗ ಒಕ್ಕೂಟದಿಂದಾಗಿ ಹಾಲಿನ ಉತ್ಪಾದನೆಯಲ್ಲಿ ಜಿಲ್ಲೆ ಸ್ವಾವಲಂಬನೆ ಸಾಧಿಸಿದೆ. ದಿನದಿಂದ ದಿನಕ್ಕೆ ಉತ್ಪಾದನೆ ಹೆಚ್ಚಾಗುತ್ತಿದ್ದು, ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಒಕ್ಕೂಟವು ರೈತರಿಗೆ ಆದಾಯ ಹೆಚ್ಚಿಸುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಕೊಡುಗೆ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್ ಮಾತನಾಡಿ, ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನವಾಗಿ ₹620 ಕೋಟಿ ದಕ್ಷಿಣ ಕನ್ನಡ ಜಿಲ್ಲೆಗೆ ದೊರೆಯುತ್ತಿದ್ದು, ಇದು ಜಿಲ್ಲೆಯ ಆರ್ಥಿಕ ಚಲಾವಣೆಗೆ ಬಹುದೊಡ್ಡ ಕೊಡುಗೆಯಾಗಿದೆ ಎಂದರು.

ಇಸ್ರೇಲ್‌ನಲ್ಲಿ 1,200 ಗೋವುಗಳ ನಿರ್ವಹಣೆಗೆ 11 ರಿಂದ 12 ಜನರು ಬಳಕೆಯಾಗುತ್ತಿದ್ದು, ಎಲ್ಲವನ್ನೂ ಯಂತ್ರಗಳಿಂದ ಸರಾಸರಿ ಪ್ರತಿ ಹಸುವಿನಿಂದ 40 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ನಮ್ಮಲ್ಲಿ 8–10 ಲೀಟರ್‌ ಹಾಲು ದೊರೆಯುತ್ತದೆ. ಹೀಗಾಗಿ ಇಸ್ರೇಲ್‌ನಲ್ಲಿ ಹೈನುಗಾರಿಕೆ ಲಾಭದಾಯಕವಾಗಿದೆ ಎಂದು ತಿಳಿಸಿದರು.

ಕಾಲಕ್ಕೆ ತಕ್ಕಂತೆ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಹೀಗಾಗಿ ಹಾಲಿನ ಮೌಲ್ಯವರ್ಧಿತ ಉತ್ಪಾದನೆಗಳನ್ನು ಹೊರತರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೊ ಅಧ್ಯಕ್ಷ ಎಸ್‌.ಆರ್. ಸತೀಶ್ಚಂದ್ರ, ಸಹಕಾರ ಯೂನಿಯನ್‌ನ ಅಧ್ಯಕ್ಷ ಪ್ರಸಾದ ಕೌಶಲ ಶೆಟ್ಟಿ, ಹಾಲು ಒಕ್ಕೂಟದ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ ವೇದಿಕೆಯಲ್ಲಿದ್ದರು. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಬಿ. ಹೆಗ್ಡೆ ಸ್ವಾಗತಿಸಿದರು. ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತಿಕ್ರಿಯಿಸಿ (+)