ವಿಶ್ವಾಸದ್ರೋಹದ ಜನ ಬೇಡ : ಶಕುಂತಳಾ ಶೆಟ್ಟಿ

5
ಪುತ್ತೂರು: ಕಾಂಗ್ರೆಸ್ ಕಾರ್ಯಕರ್ತರ ಸಭೆ

ವಿಶ್ವಾಸದ್ರೋಹದ ಜನ ಬೇಡ : ಶಕುಂತಳಾ ಶೆಟ್ಟಿ

Published:
Updated:
ಪುತ್ತೂರು ನಗರಸಭೆಯ ಸಂಭಾವ್ಯ ಚುನಾವಣೆ ಪ್ರಯುಕ್ತ ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ  ಮಾತನಾಡಿದರು.

ಪುತ್ತೂರು : ‘ಪ್ರಾಮಾಣಿಕವಾಗಿ ದುಡಿಯುವ ಹತ್ತು ಮಂದಿ ಸಾಕು. ಸೋತರೂ ಚಿಂತೆ ಇಲ್ಲ. ಆದರೆ ಹಿಂದಿನಿಂದ ಚೂರಿ ಹಾಕುವ ಕಾರ್ಯಕರ್ತರು ಬೇಡ. ಎಲ್ಲರಿಗೂ ಸ್ಥಾನಮಾನ ನೀಡಿದ್ದೇನೆ. ಆದರೂ ಯಾರೂ ಸರಿಯಾದಂತೆ ಕಾಣುತ್ತಿಲ್ಲ’ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ  ಮಾತಿನ ಚಾಟಿ ಬೀಸಿದರು.

ಮುಂಬರುವ ಪುತ್ತೂರು ನಗರಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ವಿನಯ್ ಕುಮಾರ್ ಸೊರಕೆ, ಸುಧಾಕರ್ ಶೆಟ್ಟಿ, ಬೊಂಡಾಲ ಜಗನ್ನಾಥ ಶೆಟ್ಟಿ ಅವರನ್ನು ಸೋಲಿಸುವಾಗ ಯಾರೂ ಮಾತನಾಡಲಿಲ್ಲ. ಒಂದು ವೇಳೆ ಮಾತನಾಡುತ್ತಿದ್ದರೆ, ಇಂದು ಪುತ್ತೂರು ಕಾಂಗ್ರೆಸ್‌ಗೆ ಈ ಗತಿ ಬರುತ್ತಿರಲಿಲ್ಲ ಎಂದ ಅವರು ಜತೆಯಲ್ಲಿ ಇರುವವರನ್ನು ನಂಬಿ ನಾವು ಬದುಕು ಕಟ್ಟಿಕೊಳ್ಳುತ್ತೇವೆ. ಆದರೆ ಜತೆಗಿರುವವರೇ ಹಿಂದಿನಿಂದ ಚೂರಿ ಹಾಕಿದರೆ ಹೇಗಾದೀತು ಎಂದು ಪ್ರಶ್ನಿಸಿದರು.

ಪ್ರಾಮಾಣಿಕ ಕಾರ್ಯಕರ್ತನಿಗೆ ಶಕುಂತಳಾ ಶೆಟ್ಟಿ, ಮಹಮ್ಮದ್ ಬಡಗನ್ನೂರು, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯೇ ಅಭ್ಯರ್ಥಿ ಆಗಬೇಕು ಎಂಬ ಭಾವನೆ ಇರುವುದಿಲ್ಲ.  ಅವರಿಗೆ ಪಕ್ಷದ ಗೆಲುವಷ್ಟೇ ಮುಖ್ಯ ಆಗಿರುತ್ತದೆ. ಅಂತಹ ವ್ಯಕ್ತಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಾರೆ. ಇಂತಹ ಕಾರ್ಯಕರ್ತರು ತೋರಿಸಿದ ವ್ಯಕ್ತಿಯನ್ನೇ ಈ ಬಾರಿಯ ನಗರಸಭೆ ಚುನಾವಣೆಗೆ ನಿಲ್ಲಿಸಲಾಗುವುದು, ನಗರಸಭೆಯ ಎಲ್ಲಾ 31 ವಾರ್ಡ್‌ಗಳಿಗೂ ನಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅವರು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಅವರು ಮಾತನಾಡಿ, ಮುಂಬರುವ ನಗರಸಭೆಯ ಚುನಾವಣೆಯಲ್ಲಿ ನಾವು ಆಯ್ಕೆ ಮಾಡುವ ಅಭ್ಯರ್ಥಿಗಳಿಗೇ ಬಿ ಫಾರ್ಮ್‌ ನೀಡಲಾಗುತ್ತದೆ. ಮೌನ, ಸಮಾಧಾನ ದೌರ್ಬಲ್ಯ ಅಲ್ಲ. ಪಕ್ಷದ ಘನತೆ- ಗೌರವಕ್ಕೆ ತಕ್ಕಂತೆ ಮುಂದಡಿ ಇಡುತ್ತೇವೆ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅವರು ಮಾತನಾಡಿ, ಕಾರ್ಯಕರ್ತರಿಗೆ ನಂಬಿಕೆ ಮಾಸಿ ಹೋಗಿದೆ. ಮಾಜಿ ಶಾಸಕಿ, ಬ್ಲಾಕ್ ಅಧ್ಯಕ್ಷರು ಮತ್ತು ನಗರ ಅಧ್ಯಕ್ಷರಿಗೆ ಪೂರ್ಣ ಅಧಿಕಾರ ನೀಡಿ. ನಾಯಕರು ಆಡುತ್ತಿರುವ ಚೆಲ್ಲಾಟಕ್ಕೆ ಕಡಿವಾಣ ಹಾಕಬೇಕಿದೆ. ಈಗಿನ ಪರಿಸ್ಥಿತಿಯನ್ನು ಸುಧಾರಿಸಿದರೆ ಮಾತ್ರ ಚುನಾವಣೆಯನ್ನು ಎದುರಿಸಲು ಮುಂದಾಗುವ ಎಂದರು.

ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಪಕ್ಷದ ಮುಖಂಡ ಎಂ.ಬಿ. ವಿಶ್ವನಾಥ ರೈ, ದಿನೇಶ್ ಕಾಮತ್ ಮತ್ತಿತರರು ಮಾತನಾಡಿದರು.

ಆಕ್ಷೇಪ: ಕಾಂಗ್ರೆಸ್ ನಗರ ಮಹಿಳಾ ಘಟಕದ ಅಧ್ಯಕ್ಷೆ ವಿಲ್ಮಾ ಗೋನ್ಸಾಲ್ವಿಸ್ ಅವರು ಮಾತನಾಡಿ, ಕಾಂಗ್ರೆಸ್ನಲ್ಲಿ 2 ಪಕ್ಷ ಇರುವಂತೆ ಭಾಸವಾಗುತ್ತಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹಿಂದೇಯೇ ಹೇಳಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಮಾತನಾಡಿ ಬ್ಲಾಕ್ ಅಧ್ಯಕ್ಷರು ಖಡಾಖಂಡಿತ ನಿರ್ಣಯ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿದರು. ಪಕ್ಷ ಉಳಿಸುವ ಬಗ್ಗೆ ಮಾತನಾಡುವವರು ಬೇರೆಯೇ ಸಭೆ ಯಾಕೆ ನಡೆಸಬೇಕು ಎಂದು ಅವರು ಪ್ರಶ್ನಿಸಿ ಆ ರೀತಿ ಸಭೆ ನಡೆಸುವುದಕ್ಕೆ ಆಕ್ಷೇಪಿಸಿದರು. ಪ್ರತ್ಯೇಕ ಸಭೆ ನಡೆಸುವವರನ್ನು ಪಕ್ಷದಿಂದ ದೂರ ಇಡಬೇಕೆಂದು ವೇಣುಗೋಪಾಲ್, ಬಾಲಕೃಷ್ಣ ಮತ್ತಿತರರು ಒತ್ತಾಯಿಸಿದರು.

ಪುತ್ತೂರು ತಾಲ್ಲೂಕು ಯುವಕ ಕಾಂಗ್ರೆಸ್ ಘಟಕದ ಅಧ್ಯಕ್ಷ ತೌಸೀಫ್ ಅವರು ಕೂಡ ಪ್ರತ್ಯೇಕ ಸಭೆಯಲ್ಲಿ ಭಾಗವಹಿಸಿದ್ದರು. ಎರಡೂ ಕಡೆಯೂ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಹಿಂದಿನ ಸಭೆಯಲ್ಲೇ ತಿಳಿಸಿದ್ದೆವು. ಮತ್ತೆ ಕೂಡ ಅದೇ ವರ್ತನೆಯನ್ನು ಮುಂದುವರಿಸಿದ್ದಾರೆ ಎಂದು ಕಾರ್ಯಕರ್ತರು ಆಕ್ಷೇಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !