ಶನಿವಾರ, ಅಕ್ಟೋಬರ್ 24, 2020
23 °C
ಡಾ.ಪದ್ಮಾನಾಭ ಕಾಮತ್‌ರಿಗೆ ಸೇನಾಧಿಕಾರಿ ‘ಧನ್ಯವಾದ’

ಮಂಗಳೂರಿನಿಂದಲೇ ದ್ರಾಸ್‌ನಲ್ಲಿದ್ದ ಸೈನಿಕರ ಜೀವ ಉಳಿಸಿದರು: ಥ್ಯಾಂಕ್ಸ್ ಎಂದ ಸೇನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದೂರದ ಈಶಾನ್ಯ ರಾಜ್ಯಗಳ ಗಡಿಯಲ್ಲಿರುವ ಸೈನಿಕರ ಜೀವ ರಕ್ಷಿಸುವಲ್ಲಿ ಸಹಕಾರಿಯಾದ ಮಂಗಳೂರಿನ ವೈದ್ಯರಿಗೆ ನಿವೃತ್ತ ಸೇನಾಧಿಕಾರಿಯೊಬ್ಬರು ‘ಧನ್ಯವಾದ’ ತಿಳಿಸಿದ್ದಾರೆ. ನಗರದ ಡಾ.ಪದ್ಮನಾಭ ಕಾಮತ್‌ ಅವರ ‘ಕಾರ್ಡಿಯಾಲಜಿ ಆಟ್‌ ಡೋರ್‌ಸ್ಟೆಪ್‌ ಜೈ ಜವಾನ್‌’ ವಾಟ್ಸ್‌ಆ್ಯಪ್‌ ಗ್ರೂಪ್‌, ಗಡಿಯಲ್ಲಿ ದೇಶ ಕಾಯುವ ಸೈನಿಕರಿಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸಿದೆ.

‘ದ್ರಾಸ್‌ನಂತಹ ದೂರದ ಪ್ರದೇಶಗಳ ಎಲ್ಲ ಆಸ್ಪತ್ರೆಗಳಲ್ಲಿ ಹೃದ್ರೋಗ ತಜ್ಞರು ಇರುವುದಿಲ್ಲ. ಹೀಗಾಗಿ ಹಲವು ಜನರಿಗೆ ಇಸಿಜಿಯ ಬಗ್ಗೆ ಹೃದ್ರೋಗ ತಜ್ಞರ ಅಭಿಪ್ರಾಯ ಲಭ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಂಬಿಬಿಎಸ್‌ ವೈದ್ಯರ ಸಹಾಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ವಾಟ್ಸ್‌ಆ್ಯಪ್‌ ಗ್ರೂಪ್‌ ನೆರವಿಗೆ ಬರುತ್ತದೆ’ ಎನ್ನುತ್ತಾರೆ ಡಾ.ಪದ್ಮನಾಭ ಕಾಮತ್‌.

‘ಇಸಿಜಿಯ ವರದಿಯನ್ನು ಗ್ರೂಪ್‌ನಲ್ಲಿ ಹಾಕಲಾಗುತ್ತದೆ. ಅದನ್ನು ಪರಿಶೀಲಿಸುವ ತಜ್ಞ ವೈದ್ಯರು, ಅದರ ವಿಶ್ಲೇಷಣೆಯನ್ನು ಹಾಕುವ ಮೂಲಕ ಅಗತ್ಯವಿರುವ ಚಿಕಿತ್ಸೆಯನ್ನೂ  ಸೂಚಿಸುತ್ತಾರೆ. ಇದರಿಂದ ಸಕಾಲದಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ಸೇನಾ ಆಸ್ಪತ್ರೆಗಳ ಸುಮಾರು 250 ವೈದ್ಯರು ಇರುವ ಈ ಗ್ರೂಪ್‌ನಿಂದ ಮಧ್ಯರಾತ್ರಿಯಲ್ಲೂ ಸಲಹೆ, ಸೂಚನೆಗಳು ಸಿಗುತ್ತವೆ’ ಎನ್ನುವುದು ಅವರ ಹೇಳುವ ಮಾತು.

ವಾಟ್ಸ್‌ಆ್ಯಪ್‌ ಆಧರಿತ ಸಹಾಯ ವಾಣಿಯಲ್ಲಿ ದೇಶದ ನಾನಾ ಭಾಗ ಗಳಿಂದ ನೂರಾರು ವೈದ್ಯರು, ಸಲಹೆ, ಸೂಚನೆಗಳಿಗಾಗಿ ಲಭ್ಯರಿರುತ್ತಾರೆ. ಈ ಗ್ರೂಪ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ಇಸಿಜಿ ವರದಿಗಳು, 2,500 ಹೃದಯಾಘಾತದ ವರದಿಯಾಗಿದ್ದು, 10 ಸಾವಿರಕ್ಕೂ ಹೆಚ್ಚು ಜನರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸುವ ಮೂಲಕ ಜೀವ ರಕ್ಷಣೆ ಮಾಡಲಾಗಿದೆ.

ದಾನಿಗಳ ನೆರವಿನಿಂದ ಸಿಎಡಿ ಮೂಲಕ ಈಗಾಗಲೇ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ, ಖಾಸಗಿ ಕ್ಲಿನಿಕ್‌ಗಳಿಗೆ ಸುಮಾರು 275 ಇಸಿಜಿ ಯಂತ್ರಗಳನ್ನು ನೀಡಿರುವ ಡಾ.ಪದ್ಮನಾಭ ಕಾಮತ್, ಇದೀಗ ಮಹಾರಾಷ್ಟ್ರ, ಆಸ್ಸಾಂ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲೂ ಇಸಿಜಿ ಯಂತ್ರಗಳನ್ನು ಒದಗಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಲಾಕ್‌ಡೌನ್‌ನಲ್ಲೂ ನಿರಂತರ ಸೇವೆ: ಲಾಕ್‌ಡೌನ್‌ ಆರಂಭದಲ್ಲಿ ಜನರ ಓಡಾಟಕ್ಕೆ ನಿಯಂತ್ರಣ ಹೇರಿದ್ದರಿಂದ ಆಸ್ಪತ್ರೆಗಳಿಗೆ ಬರಲು ಜನರು ತೊಂದರೆ ಅನುಭವಿಸುವಂತಾಗಿತ್ತು. ಈ ಅವಧಿಯಲ್ಲಿ ವಾಟ್ಸ್ಆ್ಯಪ್‌ ಗ್ರೂಪ್‌ಗೆ ಹೃದ್ರೋಗಕ್ಕೆ ಸಂಬಂಧಿಸಿದ 210 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 204 ಜನರಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸುವ ಮೂಲಕ ಜೀವ ರಕ್ಷಿಸಲಾಗಿದೆ ಎಂದು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು