ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿತ ಶಾಲೆಯ ಮರೆಯಬೇಡಿ: ಸುದೀಪ್

‘ಭ್ರಮರ ಇಂಚರ’ ನುಡಿಹಬ್ಬದಲ್ಲಿ ಮಕ್ಕಳಿಗೆ ಮಕ್ಕಳಂತೆ ಉತ್ತರಿಸಿದ ‘ಕಿಚ್ಚ’
Last Updated 5 ಡಿಸೆಂಬರ್ 2022, 5:20 IST
ಅಕ್ಷರ ಗಾತ್ರ

ಕಟೀಲು (ಮೂಲ್ಕಿ): ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕುವುದು ಮುಖ್ಯವಲ್ಲ. ಕಟ್ಟಡ, ಶಾಲೆಯನ್ನು ಯಾರೂ ಬೇಕಾದರೂ ಕಟ್ಟಬಹುದು. ಆದರೆ, ಅದಕ್ಕೆ ಜೀವ ತುಂಬುವವರು ವಿದ್ಯಾರ್ಥಿಗಳು. ಶಾಲೆಯನ್ನು ಉತ್ತುಂಗಕ್ಕೆ ಏರಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ಚಿತ್ರನಟ ಕಿಚ್ಚ ಸುದೀಪ್ ಹೇಳಿದರು.

ಕಟೀಲು ದೇಗುಲದ ಶಿಕ್ಷಣ ಸಂಸ್ಥೆ ಸಂಯೋಜನೆಯಲ್ಲಿ ಭಾನುವಾರ ನಡೆದ ‘ಭ್ರಮರ ಇಂಚರ’ ನುಡಿಹಬ್ಬದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನವನ್ನು ಮಕ್ಕಳು ಚೆನ್ನಾಗಿ ಅನುಭವಿಸಬೇಕು. ಈ ಜೀವನ ಮತ್ತೆ ಬರಲ್ಲ. ಸಮಯ ಅನ್ನೋದು ಮತ್ತೆ ಸಿಗಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡೆಯಬೇಕು. ಕಲಿತ ಶಾಲೆಯನ್ನು ಮರೆಯಬಾರದು’ ಎಂದರು.

ತಾಯಿನಾಡು ತುಳುನಾಡು, ತುಳು ಭಾಷೆ ನಾಡಿನ ಬಗ್ಗೆ ವಿದ್ಯಾರ್ಥಿನಿ ಗಾಯತ್ರಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತುಳುನಾಡು ನನ್ನ ತಾಯಿನಾಡು ಅಂತ ನೀವೇ ಹೇಳಿದ್ದೀರಿ. ತಾಯಿ ಬಗ್ಗೆ ಅಭಿಪ್ರಾಯ ಹೇಳಬಾರದು. ಪ್ರೀತಿ ಇರಬೇಕು’ ಎಂದರು.

ವಿದ್ಯಾರ್ಥಿ ಜೀವನದ ಸವಿ ನೆನಪು ಬಗ್ಗೆ ವಿದ್ಯಾರ್ಥಿ ಆಕಾಶ್ ಪ್ರಶ್ನೆಗೆ ಉತ್ತರಿಸಿದ ಸುದೀಪ್, ‘ನಾನು ಪಾಸಾಗಿದ್ದೇನೆ ಸಾರ್, ಫೈಲಾಗಿಲ್ಲ’ ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದರು.

ವಿದ್ಯಾರ್ಥಿಗಳಿಗೆ ತಮ್ಮ ಸಂದೇಶವೇನು ಎಂಬ ಹೃತಿಕ್ ಅವರ ಪ್ರಶ್ನೆಗೆ, ‘ಬೆಳೆಯುದಕ್ಕೆ ಆತುರ ಬೇಡ, ಅರಾಮವಾಗಿ ಬೆಳೆಯಿರಿ, ಪ್ರೀತಿಯಿಂದ ಬೆಳೆಯಿರಿ. ಈ ಸಮಯ ಮುಂದೆ ಸಿಗಲ್ಲ’ ಎಂದು ಕಿವಿಮಾತು ಹೇಳಿದರು.

ಕಿಚ್ಚ ಸುದೀಪ್‌ ಅವರ ಚಿತ್ರವನ್ನು ವಿದ್ಯಾರ್ಥಿಗಳು ರಚಿಸಿ, ತಮ್ಮ ನೆಚ್ಚಿನ ನಾಯಕನಿಗೆ ಹಸ್ತಾಂತರಿಸಿ ಹಸ್ತಾಕ್ಷರ ಪಡೆದರು.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥನೆ ನಡೆಸಿ, ಪ್ರಸಾದವನ್ನು ಸ್ವೀಕರಿಸಿದರು. ಪತ್ನಿ ಪ್ರಿಯಾ, ಸಹೋದರಿ ಸುಜಾತಾ, ಸಂಬಂಧಿ ಸಂದೀಪ್ ಸಂಜೀವ್ ಜತೆಯಲ್ಲಿದ್ದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಪ್ರದ್ಯುಮ್ನ ರಾವ್ ಶಿಬರೂರು, ಸನತ್ ಶೆಟ್ಟಿ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ವಾಸುದೇವ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಅನಂತ ಆಸ್ರಣ್ಣ, ಸದಾನಂದ ಆಸ್ರಣ್ಣ ವಿನಿತ್ ರಾಜ್ ಶೆಟ್ಟಿ, ಮೋಹನ್ ರಾವ್ ಇದ್ದರು. ಶಿಕ್ಷಕ ಸಾಯಿನಾಥ ಶೆಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT