ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ದೀಪಾವಳಿಯ ‘ದೋಸೆ ಹಬ್ಬ’

ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಚಾಲನೆ
Last Updated 24 ಅಕ್ಟೋಬರ್ 2022, 11:08 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಬೆಳ್ತಂಗಡಿಯಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಆಗಿಲ್ಲವೋ ಅದನ್ನು ಶಾಸಕ ಹರೀಶ್ ಪೂಂಜ ಮಾಡುತ್ತಿದ್ದಾರೆ. ಈಗಾಗಲೇ ₹ 2,500 ಕೋಟಿಗೂ ಅಧಿಕ ಅನುದಾನವನ್ನು ತಾಲ್ಲೂಕಿಗೆ ತಂದು ಬೆಳ್ತಂಗಡಿಯಲ್ಲಿ ಅಭಿವೃದ್ಧಿಯ ದೀಪಾವಳಿ ನಡೆಯುತ್ತಿದೆ’ ಎಂದು ಇಂಧನ ಮತ್ತು ಕನ್ನಡ - ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ದೋಸೆ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಭಿವೃದ್ಧಿ ಜೊತೆಗೆ ಭಾರತೀಯ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ದಿ ಜೊತೆಗೆ ಭಾರತದ ಗತ ವೈಭವವನ್ನು ಮತ್ತೆ ಸ್ಥಾಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲೂ ಅಂಜನಾದ್ರಿ ಪರ್ವತಕ್ಕೆ ₹ 100 ಕೋಟಿ ನೀಡುವ ಮೂಲಕ ಪರಂಪರೆ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವಾಗುತ್ತಿದೆ’ ಎಂದರು.

ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೇಶದಲ್ಲೇ ದೀಪಾವಳಿ ಸಂದರ್ಭ ದೋಸೆ ಹಬ್ಬ ಆಚರಣೆ ಬೆಳ್ತಂಗಡಿಯಲ್ಲಿ ಮಾತ್ರ. ಕಳೆದ ವರ್ಷ 25 ಸಾವಿರ ಜನ ದೋಸೆಯನ್ನು ಸವಿದಿದ್ದು, ಈ ಬಾರಿ 50 ಸಾವಿರ ಮಂದಿಗೆ ದೋಸೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿದರು. 60 ವರ್ಷ ದಾಟಿದ ದೈವನರ್ತಕರಿಗೆ ಸರ್ಕಾರದಿಂದ ಮಾಸಾಶನ ಮಂಜೂರು ಮಾಡಿದಕ್ಕಾಗಿ ಡಾ.ರವೀಶ್ ಪರವನ್ ಪಡುಮಲೆ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಪರವನ್ ಸಂಘದ ವತಿಯಿಂದ ಸಚಿವ ಸುನಿಲ್ ಕುಮಾರ್ ಹಾಗೂ ಶಾಸಕ ಹರೀಶ್ ಪೂಂಜ ಅವರನ್ನು ಗೌರವಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಕೊರಗಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಜನಾರ್ದನ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಅಭಿಲಾಶ್, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಿವಾಸ್ ರಾವ್ ಧರ್ಮಸ್ಥಳ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ಪ್ರಮುಖರಾದ ಸೀತಾರಾಮ ಬೆಳಾಲು, ವಿನೀತ್ ಕೋಟ್ಯಾನ್, ಉಮೇಶ್ ಕುಲಾಲ್, ಜೋಯೆಲ್ ಮೆಂಡೋನ್ಸಾ, ಜಯಂತ ಗೌಡ, ಪ್ರಭಾಕರ ಸವಣಾಲು ಇದ್ದರು.

ಬಿಜೆಪಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ ಸ್ವಾಗತಿಸಿದರು. ಸ್ಮಿತೇಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಗಾನವೈಭವ ಕಾರ್ಯಕ್ರಮ, ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಬೀಟ್ ರಾಕರ್ಸ್ ಡ್ಯಾನ್ಸ್ ಅಕಾಡೆಮಿ ಬೆಳ್ತಂಗಡಿ ವತಿಯಿಂದ ವಿವಿಧ ನೃತ್ಯ ಕಾರ್ಯಕ್ರಮ, ಸುಡುಮದ್ದು ಪ್ರದರ್ಶನ, ಗೋಪೂಜೆ, ದೇವದಾಸ್ ಕಾಪಿಕಾಡ್ ತಂಡದಿಂದ ‘ನಾಯಿದ ಬೀಲ’ ನಾಟಕ ಪ್ರದರ್ಶನಗೊಂಡಿತು.

ಸುಸಜ್ಜಿತ ಬಸ್‌ ನಿಲ್ದಾಣಕ್ಕೆ ₹ 12 ಕೋಟಿ: ಪೂಂಜ

ಬೆಳ್ತಂಗಡಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣಕ್ಕೆ ಸುನಿಲ್ ಕುಮಾರ್ ಅವರ ವಿಶೇಷ ಮುತುವರ್ಜಿಯಿಂದ ಈಗಾಗಲೇ ₹ 12 ಕೋಟಿಗೆ ಅನುಮೋದನೆಯಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಈಗಾಗಲೇ ₹ 170 ಕೋಟಿ ಅನುದಾನ ಸರ್ಕಾರ ನೀಡಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT