ಶುಕ್ರವಾರ, ಜನವರಿ 24, 2020
28 °C
ಡಾ. ಪೆರ್ಲರ ಸಾಹಿತ್ಯಾವಲೋಕನದಲ್ಲಿ ಡಾ.ವಿವೇಕ ರೈ ಅಭಿಮತ

ಸೃಜನಶೀಲತೆಗೆ ಹಲವು ಮುಖಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಾಹಿತ್ಯ, ಸಂಘಟನೆ, ಮಾಧ್ಯಮ, ರಂಗಭೂಮಿ, ಸಮಾಜಸೇವೆ ಇವೆಲ್ಲ ಸೃಜನಶೀಲತೆಯ ವಿವಿಧ ಮುಖಗಳಾಗಿದ್ದು, ಕರ್ತೃತ್ವ ಶಕ್ತಿಯ ಮೂಲಕ ಶಕ್ತರಾದ ವ್ಯಕ್ತಿಗಳಲ್ಲಿ ಅಭಿವ್ಯಕ್ತವಾಗುತ್ತ ಹೋಗುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ ಹೇಳಿದರು.

ನಗರದ ಶಕ್ತಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಜರುಗಿದ ಡಾ. ಪೆರ್ಲ ಸಾಹಿತ್ಯಾವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಕಟ್ಟುವುದೆಂದರೆ ಎಲ್ಲ ರಂಗಗಳಲ್ಲಿರುವವರು ತಮ್ಮ ತಮ್ಮ ಕೆಲಸಗಳನ್ನು ಸಮರ್ಥವಾಗಿ ಮಾಡುವುದಾಗಿದೆ. ಅಂತಹ ಮಾದರಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಡಾ.ವಸಂತಕುಮಾರ ಪೆರ್ಲ ಅವರು ಸಾರ್ಥಕ ಬೆಳೆ ತೆಗೆದ ಸಾಧಕರಾಗಿದ್ದಾರೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಭಾಗವಹಿಸಿದ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ ಎಸ್. ಮಹಾಬಲೇಶ್ವರ ಮಾತನಾಡಿ, ‘ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳು ಒಂದು ನಾಡಿನ ಸಂಪನ್ನತೆಯನ್ನು ತೋರಿಸಿ ಕೊಡುತ್ತವೆ. ಯಾವುದೇ ಕ್ಷೇತ್ರದಲ್ಲಿ ನಾವು ಕೆಲಸ ಮಾಡುತ್ತಿದ್ದರೂ, ಕಲೆ, ಸಾಹಿತ್ಯದ ಚಟುವಟಿಕೆಗಳು ಮನಸ್ಸಿನ ಒತ್ತಡ ನಿವಾರಿಸಿ ತಂಪನ್ನು ನೀಡುತ್ತವೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಶಕ್ತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಸಿ. ನಾಯ್ಕ್ ಮಾತನಾಡಿ, ‘ಬಹುಮುಖಿ ಆಯಾಮದ ವ್ಯಕ್ತಿತ್ವ ಇರುವ ಡಾ. ಪೆರ್ಲರ ಸಾಹಿತ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದು ಸಂಸ್ಥೆಗೆ ಹೆಮ್ಮೆಯ ವಿಷಯ’ ಎಂದು ಹೇಳಿದರು.

ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಮಾತನಾಡಿ, ‘ಸಾಹಿತಿಗಿಂತಲೂ ಸಾಹಿತ್ಯವನ್ನು ಗುರುತಿಸುವ ಗುಣಗೌರವ ಸಮಾಜದಲ್ಲಿ ಮೂಡಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಎಸ್.ಜಿ., ಶಕ್ತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಮಾತಾಡಿದರು. ಪ್ರಾಧ್ಯಾಪಕಿ ಶಶಿಕಲಾ ಸ್ವಾಗತಿಸಿದರು. ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ನಿರೂಪಿಸಿದರು. ಪ್ರಾಧ್ಯಾಪಕ ಶ್ರೀನಿಧಿ ಅಭ್ಯಂಕರ್ ವಂದಿಸಿದರು.

ದಿನವಿಡೀ ನಡೆದ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣಗಳು, ಕವಿಗೋಷ್ಠಿ, ಭಾವಗೀತೆಗಳ ಪ್ರಸ್ತುತಿ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು