ಡಾ.ಬಿ.ಎಂ. ಹೆಗ್ಡೆಗೆ ಜೀವನ ಸಾಧನೆ ಪ್ರಶಸ್ತಿ

7
ಉಳ್ಳಾಲ ಶ್ರೀನಿವಾಸ್ ಮಲ್ಯ ಸ್ಮಾರಕ ಪ್ರಶಸ್ತಿ ಪ್ರದಾನ ನಾಳೆ

ಡಾ.ಬಿ.ಎಂ. ಹೆಗ್ಡೆಗೆ ಜೀವನ ಸಾಧನೆ ಪ್ರಶಸ್ತಿ

Published:
Updated:
Prajavani

ಮಂಗಳೂರು: ಮಹಾನಗರ ಪಾಲಿಕೆಯ ವತಿಯಿಂದ ಕೊಡಮಾಡುವ 2018 ನೇ ಸಾಲಿನ ದಿ. ಉಳ್ಳಾಲ ಶ್ರೀನಿವಾಸ್ ಮಲ್ಯ ಸ್ಮಾರಕ ಜೀವನ ಸಾಧನೆ ಪ್ರಶಸ್ತಿಗೆ ಹಿರಿಯ ವೈದ್ಯ ಡಾ.ಬಿ.ಎಂ. ಹೆಗ್ಡೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೇಯರ್‌ ಭಾಸ್ಕರ್‌ ಕೆ. ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಶಸ್ತಿಯು ₹1 ಲಕ್ಷ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಇದೇ 12 ರಂದು ಮಧ್ಯಾಹ್ನ 2 ಗಂಟೆಗೆ ಪುರಭವನದಲ್ಲಿ ನಡೆಯುವ ಸಮಾರಂಭದಲ್ಲಿ ಸಂಸದ ವೀರಪ್ಪ ಮೊಯಿಲಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಸಮಾಜ ಸೇವಾ ಕ್ಷೇತ್ರದಲ್ಲಿ ರಾಮಕೃಷ್ಣ ಆಶ್ರಮ, ಪತ್ರಿಕೋದ್ಯಮದಲ್ಲಿ ಮನೋಹರ್‌ ಪ್ರಸಾದ್‌, ಸಮುದಾಯ ಶಿಕ್ಷಣ ಮತ್ತು ಸೇವೆಯಲ್ಲಿ ಡಾ. ಹನಿಬಾಲ್‌ ಆರ್‌. ಕಬ್ರಾಲ್‌, ಸಾಹಿತ್ಯ ಕ್ಷೇತ್ರದಲ್ಲಿ ಸಾರಾ ಅಬೂಬಕ್ಕರ್‌ ಅವರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಗಳು ತಲಾ ₹50 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಸಮಾರಂಭವನ್ನು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಸಂಸದ ನಳಿನ್‌ಕುಮಾರ್ ಕಟೀಲ್‌, ಶಾಸಕರಾದ ಡಿ.ವೇದವ್ಯಾಸ್‌ ಕಾಮತ್‌, ಡಾ.ವೈ. ಭರತ್‌ ಶೆಟ್ಟಿ, ಐವನ್‌ ಡಿಸೋಜ, ಹರೀಶ್‌ಕುಮಾರ್‌, ಬಿ.ಎಂ. ಫಾರೂಕ್‌, ಎಸ್‌.ಎಲ್‌. ಭೋಜೇಗೌಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮೇಯರ್ ಅಧ್ಯಕ್ಷತೆಯಲ್ಲಿ ನಿವೃತ್ತ ಪ್ರಾಂಶುಪಾಲ ಎನ್‌. ಇಸ್ಮಾಯಿಲ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಚಂದ್ರಕಲಾ ನಂದಾವರ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಉದಯಕುಮಾರ್ ಅವರನ್ನು ಒಳಗೊಂಡ ಸಮಿತಿಯು ಈ ಆಯ್ಕೆ ಮಾಡಿದೆ ಎಂದು ಉಪ ಮೇಯರ್‌ ಮುಹಮ್ಮದ್ ಕುಂಜತ್ತಬೈಲ್‌ ತಿಳಿಸಿದರು.

ಸಚೇತಕ ಎಂ.ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್‌ ಡಿಸೋಜ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !