ಗುರುವಾರ , ಡಿಸೆಂಬರ್ 12, 2019
16 °C
ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಜನಸ್ಪಂದನ ಸಭೆ

ಚಾಲನಾ ಪರವಾನಗಿಗೆ ವಿಳಂಬ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್‌ ಮಿಸ್ಕತ್‌, ಸಮಸ್ಯೆ ಆಲಿಸಿದರು.

ಮಂಗಳೂರು: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕಲಿಕಾ ಮತ್ತು ಚಾಲನಾ ಪರವಾನಗಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅನುಕೂಲ ಆಗುವಂತೆ ಸಾರಥಿ–4 ಸಾಫ್ಟ್‌ವೇರ್‌ ಅಳವಡಿಸಿದ ನಂತರ ವಿಳಂಬವಾಗುತ್ತಿದೆ ಎನ್ನುವ ದೂರು ಕೇಳಿ ಬಂದಿದ್ದು, ಈ ಬಗ್ಗೆ ಗಮನ ಹರಿಸುವ ಮೂಲಕ ಪರವಾನಗಿ ನೀಡುವುದನ್ನು ತ್ವರಿತಗೊಳಿಸಲಾಗುವುದು ಎಂದು ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್‌ ಮಿಸ್ಕತ್‌ ಹೇಳಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು. ಜೂನ್‌ 1 ರ ನಂತರ ಸಾರಥಿ –4 ಅಳವಡಿಕೆ ಮಾಡಲಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಪಡೆಯಲಾಗುತ್ತಿದೆ. ಆದರೆ, ಚಾಲನಾ ಪರವಾನಗಿ ಮಾತ್ರ ಹಿಂದಿಗಿಂತಲೂ ನಿಧಾನವಾಗಿ ನೀಡಲಾಗುತ್ತಿದೆ. 30 ಜನರು ಮಾತ್ರ ಒಂದು ದಿನದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ವಿಳಂಬವಾಗುತ್ತಿದೆ ಎಂದು ಜಿ.ಕೆ.ಭಟ್‌ ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಜಾನ್‌ ಮಿಸ್ಕತ್‌, ಶೀಘ್ರದಲ್ಲಿ ಅರ್ಜಿ ಸಲ್ಲಿಕೆ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದರು.

ನಗರದ ಲೇಡಿಹಿಲ್‌ನಿಂದ ಲೈಟ್‌ಹೌಸ್‌ವರೆಗೆ ಯಾವುದೇ ಬಸ್‌ ತಂಗುದಾಣದ ವ್ಯವಸ್ಥೆ ಇಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ಆರು ವಾರದಲ್ಲಿ ಬಸ್‌ ನಿಲುಗಡೆ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಆದೇಶ ನೀಡಲಾಗಿತ್ತು. ಆರು ತಿಂಗಳಾದರೂ ವ್ಯವಸ್ಥೆ ಆಗಿಲ್ಲ. ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಸಾರಿಗೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಬಿ.ಎ. ಹಸನಬ್ಬ ಅಮ್ಮೆಂಬಳ ಒತ್ತಾಯಿಸಿದರು.

ಖಾಸಗಿ ಬಸ್‌ಗಳ ಮಾಲೀಕರು ಬಸ್‌ಗಳಿಗೆ ಪರವಾನಗಿ ನೀಡಿದ ಮಾರ್ಗದಲ್ಲಿ ಸಂಚರಿಸದೇ ಅವರಿಗೆ ಬೇಕಾದ ಮಾರ್ಗದಲ್ಲಿ ಸಾಗುತ್ತಿದ್ದಾರೆ ಎಂದು ಸುಲ್ತಾನ್‌ ಬತ್ತೇರಿಯ ಮಾಧವ ದೂರಿದರು.

ಕೊಣಾಜೆ ಬಳಿ ಹೋಗುವ ಬಸ್‌ಗಳು ವಿಶ್ವವಿದ್ಯಾಲಯದ ಆವರಣದೊಳಗೆ ಬಂದು ಮುಡಿಪುಗೆ ಸಂಚರಿಸ ಬೇಕು ಎಂದು ಹಸನಬ್ಬ ಆಗ್ರಹಿಸಿದರು. ಸಭೆಯಲ್ಲಿ ಗಮನಕ್ಕೆ ತಂದ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಾನ್‌ ಮಿಸ್ಕಿತ್‌ ಭರವಸೆ ನೀಡಿದರು.

ಹಳೆಯ ವಾಹನಗಳ ಪರವಾನಗಿ ನವೀಕರಣದಲ್ಲೂ ವಿಳಂಬವಾಗುತ್ತಿದೆ ಎಂದು ಮಾರ್ಟಿನ್‌ ದೂರಿದರು. ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಮಿಸ್ಕಿತ್‌ ತಿಳಿಸಿದರು.

ಕಂಕನಾಡಿ ರೈಲ್ವೆ ನಿಲ್ದಾಣದಿಂದ ಬಸ್‌ ವ್ಯವಸ್ಥೆ ಮಾಡುವಂತೆ ದೂರು ನೀಡಿದರೂ, ಸಮಸ್ಯೆ ಪರಿಹಾರವಾಗಿಲ್ಲ. ಕಂಕನಾಡಿಯಿಂದ ಸ್ಟೇಟ್‌ ಬ್ಯಾಂಕ್‌ವರೆಗೆ 7 ಕಿ.ಮೀ. ದೂರ ಇದ್ದರೂ, ಬಸ್‌ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಹತ್ತಿರದ ಪ್ರದೇಶಗಳಿಗೆ ಸಂಚರಿಸುವ ಬಸ್‌ಗಳು, ಕಂಕನಾಡಿ ರೈಲ್ವೆ ನಿಲ್ದಾಣದ ಮಾರ್ಗವಾಗಿ ಸಂಚರಿಸುವಂತೆ ಮಾಡಿದರೆ, ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಜಿ.ಕೆ. ಭಟ್‌ ತಿಳಿಸಿದರು.

ಈ ಕುರಿತು ಸೂಚನೆ ನೀಡುವುದಾಗಿ ಸಾರಿಗೆ ಅಧಿಕಾರಿ ಮಿಸ್ಕಿತ್‌ ಭರವಸೆ ನೀಡಿದರು.

ಸದ್ಯ ಅಳವಡಿಸಿದ ಸಾಫ್ಟ್‌ವೇರ್‌ಗೆ ಕಚೇರಿಯ ಸಿಬ್ಬಂದಿ ಹೊಂದಿಕೊಳ್ಳುತ್ತಿದ್ದು, ನಿತ್ಯ 30 ಅರ್ಜಿಗೆ ಸೀಮಿತ ಮಾಡಲಾಗಿದೆ
ಜಾನ್‌ ಮಿಸ್ಕತ್‌, ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು