ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ಚುನಾವಣಾ ಕಾವು; ಅಬ್ಬರದ ಪ್ರಚಾರ

ರಂಗೇರಿದ ಚುನಾವಣಾ ಕಣ: ಪುಟ್ಟರಂಗಶೆಟ್ಟಿ ಪುತ್ರ, ವಾಟಾಳ್ ನಾಗರಾಜ್ ಪುತ್ರಿ ಮತಯಾಚನೆ
Last Updated 6 ಮೇ 2018, 8:35 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಚುನಾವಣೆಯ ಕಾವು ಏರುತ್ತಿದೆ. ಎಲ್ಲಿ ನೋಡಿದರಲ್ಲಿ ವಿವಿಧ ಪಕ್ಷದವರ ಪ್ರಚಾರ ಭರಾಟೆಯೇ ಕಂಡು ಬರುತ್ತಿದೆ. ಆಟೊಗಳಲ್ಲಿ ಧ್ವನಿವರ್ಧಕ ಬಳಸಿ ಮಾಡುವ ಪ್ರಚಾರವೂ ಹೆಚ್ಚುತ್ತಿದೆ.

ತಾಲ್ಲೂಕಿನ ದೊಡ್ಡಮೋಳೆ ಗ್ರಾಮದಲ್ಲಿನ 200ಕ್ಕೂ ಹೆಚ್ಚಿನ ಗ್ರಾಮಸ್ಥರು ಶಾಸಕ ಸಿ.ಪುಟ್ಟರಂಗಶೆಟ್ಟಿ ಪುತ್ರ ಕುಸುಮ್‍ರಾಜ್ ನೇತೃತ್ವದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ನಂತರ ಮಾತನಾಡಿದ ಕುಸುಮ್‍ರಾಜ್, ‘ಜಿಲ್ಲೆಯಾದ್ಯಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ಜನಪರ ಕೆಲಸ ಮಾಡಿದ್ದಾರೆ. ಇದನ್ನು ಸಹಿಸದ ಇತರೆ ಪಕ್ಷದವರು ಕಾಂಗ್ರೆಸ್ ಪಕ್ಷದಿಂದ ಯಾವುದೇ ಕೆಲಸವಾಗಿಲ್ಲ ಎಂದು ಹೇಳುತ್ತಿದ್ದಾರೆ. ಇವೆಲ್ಲವನ್ನು ಕಿವಿಗೆ ಹಾಕಿಕೊಳ್ಳದೇ ಅಭಿವೃದ್ಧಿಯನ್ನು ಮನಗಂಡ ಜನತೆ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಎರಡು ಬಾರಿ ಶಾಸಕರಾಗಿ ಎಲ್ಲಾ ಜನರಿಗೂ ನ್ಯಾಯ ಸಮ್ಮತವಾಗಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಅನುದಾನಗಳನ್ನು ತಂದು ಈ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿದಿದ್ದಾರೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೇ ನಿಮ್ಮೆಲ್ಲರ ಸೇವೆ ಮಾಡಲು ನಮ್ಮ ತಂದೆ ಸಿ.ಪುಟ್ಟರಂಗಶೆಟ್ಟಿ ಅವರನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ಎಚ್.ಎಂ.ಮಹದೇವಶೆಟ್ಟಿ, ಪುಟ್ಟಸ್ವಾಮಿ, ಮುಖಂಡರಾದ ದೊರೆಸ್ವಾಮಿ, ಕೋಡಿಮೋಳೆ ಗೋವಿಂದಶೆಟ್ಟಿ, ಪ್ರಕಾಶ್, ಕುಮಾರ್, ನಾಗರಾಜು, ಕೂಡ್ಲೂರು ಗಿರೀಶ್, ಮರಿಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

ಮಲ್ಲಿಕಾರ್ಜುನಪ್ಪ ಪರ ಕಾಗಲವಾಡಿ ಶಿವಣ್ಣ ಪ್ರಚಾರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಲೆ ಎದ್ದಿರುವುದರಿಂದ ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರ ಗೆಲುವು ಖಚಿತ ಎಂದು ಮುಖಂಡ ಕಾಗಲವಾಡಿ ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಶನಿವಾರ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ಪರವಾಗಿ ತಾಲ್ಲೂಕಿನ ಕಾಗಲವಾಡಿ, ಆಲೂರು, ಮಲ್ಲುಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಷೋ ಮೂಲಕ ಬಿರುಸಿನ ಪ್ರಚಾರ ನಡೆಸಿ, ಮತಯಾಚನೆ ಮಾಡಿ ಬಳಿಕ ಮಾತನಾಡಿದರು.

ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅದರಲ್ಲೂ ಚಾಮರಾಜನಗರ ಜಿಲ್ಲೆಯ 21 ಕೆರೆಗಳಿಗೆ ಕಬಿನಿ ನೀರಿನಿಂದ ನೀರು ತುಂಬಿಸುವ ಮೂಲಕ ರೈತರ ಸಮಸ್ಯೆಯನ್ನು ಶಾಶ್ವತವಾಗಿ ಹೋಗಲಾಡಿಸಿದ್ದಾರೆ ಎಂದು ಹೇಳಿದರು. ಈಗಿನ ಜಿಲ್ಲಾ ಕೇಂದ್ರ ಸ್ಥಿತಿ ನೋಡಿದರೆ ಹಾಲಿ ಶಾಸಕರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಸಿ.ಗುರುಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗಶ್ರೀಪ್ರತಾಪ್, ಎಸ್.ಮಹದೇವಯ್ಯ. ಆಲೂರು ನಟರಾಜ್, ರೈತ ಮುಖಂಡ ಮಲ್ಲೇಶ್, ತಾ.ಪಂ.ಉಪಾಧ್ಯಕ್ಷ ದಯಾನಿಧಿ, ನಿವೃತ್ತ ಸಬ್ ಇನ್‌ಸ್ಪೆಕ್ಟರ್ ಶಿವಸ್ವಾಮಿ, ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾ.ಪಂ ಮಾಜಿ ಸದಸ್ಯ ಶಿವಸ್ವಾಮಿ, ದಲಿತ ಮುಖಂಡ ವೆಂಕಟರಮಣಸ್ವಾಮಿ, ಆಲೂರು ಬಾಬು, ಕಾಗಲವಾಡಿ ಕಾರ್ತಿಕ್, ಕಾಡಹಳ್ಳಿ ಕುಮಾರ್, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

‘ಕ್ಷೇತ್ರದ ಬದಲಾವಣೆಗೆ ಎಸ್‍ಜೆಪಿ ಬೆಂಬಲಿಸಿ’: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬದಲಾವಣೆಗಾಗಿ ತಮ್ಮನ್ನು ಬೆಂಬಲಿಸಬೇಕು ಎಂದು ಸಾಮಾನ್ಯ ಜನತಾ ಪಕ್ಷ (ಎಸ್‍ಜೆಪಿ) ಅಭ್ಯರ್ಥಿ ಜೆ.ನಾರಾಯಣಸ್ವಾಮಿ ಜನತೆಯಲ್ಲಿ ಮನವಿ ಮಾಡಿದರು.

ನಗರದ ಹೌಸಿಂಗ್‍ಬೋರ್ಡ್‌ನಲ್ಲಿ ತಮ್ಮ ಬೆಂಬಲಿಗರ ಜತೆ ಶನಿವಾರ ಪಾದಯಾತ್ರೆಯ ಮೂಲಕ ಮನೆಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು.

ಈಗಾಗಲೇ ಕ್ಷೇತ್ರದಲ್ಲಿ ಕಳೆದ 3 ದಿನಗಳಿಂದ ಚುನಾವಣಾ ಪ್ರಚಾರ ನಡೆಸಲಾಗುತ್ತಿದ್ದು, ತಮ್ಮ ಪರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕ್ಷೇತ್ರದಲ್ಲಿ ಇಲ್ಲಿಯ ತನಕ ಶಾಸಕರಾಗಿದ್ದವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಬೇಕಿದೆ. ತಮ್ಮನ್ನು ಗೆಲ್ಲಿಸಿದರೆ ಚಾಮರಾಜನಗರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್‍ ಹನೀಫ್, ಪ್ರಧಾನ ಕಾರ್ಯದರ್ಶಿ ಮುನಾವರ್‌ಪಾಷಾ, ಯುವ ಮೋರ್ಚಾದ ಅಧ್ಯಕ್ಷ ಅರುಣ್‍ಕುಮಾರ್, ಉಪಾಧ್ಯಕ್ಷ ಬಿ. ಸಂತೋಷ್, ಪವನ್‍ರಾಜು, ಮಂಜುನಾಥ್, ಕುಮಾರ್, ಮನೋಜ್ ಇತರರು ಹಾಜರಿದ್ದರು.

ಉತ್ತುವಳ್ಳಿಯಲ್ಲಿ ಪಕ್ಷೇತರ ಅಭ್ಯರ್ಥಿ ಮತಯಾಚನೆ: ತಾಲ್ಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ.ಪ್ರಸನ್ನಕುಮಾರ್ ಮತಯಾಚಿಸಿದರು.‌

ಇದೇ ವೇಳೆ ಅವರು ‘ನನ್ನನ್ನು ಗೆಲ್ಲಿಸಿದರೆ ಕಬಿನಿ 2ನೇ ಹಂತದ ನೀರಾವರಿ ಯೋಜನೆ ಜಾರಿಗೆ ಹೋರಾಟ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಕೀಲರಾದ ಉತ್ತುವಳ್ಳಿಕುಮಾರ್, ಶಂಕರ್, ಮಹದೇವಸ್ವಾಮಿ, ಮಹದೇವಯ್ಯ, ನಂಜುಂಡಸ್ವಾಮಿ ಇತರರು ಹಾಜರಿದ್ದರು.

ವಾಟಾಳ್ ಪುತ್ರಿ ಮತಯಾಚನೆ

ಚಾಮರಾಜನಗರ: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಅವರ ಪರವಾಗಿ ಅವರ ಪುತ್ರಿ ಅನುಪಮಾ ಅವರು ಚಾಮರಾಜನಗರದ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಪಾದಯಾತ್ರೆ ಮೂಲಕ ಮನೆ-ಮನೆಗೆ ತೆರಳಿ ಮತಯಾಚನೆ ಮಾಡಿದರು.

ನಂತರ ಮಾತನಾಡಿದ ಅವರು, ‘ನಮ್ಮ ತಂದೆ ವಾಟಾಳ್ ನಾಗರಾಜ್ ಅವರು ಈ ನಾಡು ಕಂಡ ಹುಟ್ಟು ಹೋರಾಟಗಾರರು. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದ ವ್ಯಕ್ತಿ. ಯಾವುದೇ ಪದವಿ, ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಅಂದಿನ ಕಾಲದಲ್ಲಿ ಮುಖ್ಯಮಂತ್ರಿಗಳಾಗಿದ್ದ ಎಸ್, ನಿಂಜಲಿಂಗಪ್ಪ, ವೀರೇಂದ್ರ ಪಾಟೀಲ, ದೇವರಾಜ ಅರಸ್ ಸೇರಿದಂತೆ ಇತರರು ಮಂತ್ರಿ ಮಾಡುತ್ತೇನೆ ಎಂದು ಹೇಳಿದರೂ ಅವರು ಮಂತ್ರಿ ಪದವಿಗೆ ಆಸೆ ಪಡಲಿಲ್ಲ. ಯಾವುದೇ ಕಪ್ಪು ಚುಕ್ಕಿ ಇಲ್ಲದೆ ಇರುವ ಅವರನ್ನು ಈ ಬಾರಿ ಚುನಾವಣೆಯಲ್ಲಿ ಶಾಸನಸಭೆಗೆ ಗೆಲ್ಲಿಸಿ ಕೊಡಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀನಿವಾಸಗೌಡ, ರವಿಚಂದ್ರಪ್ರಸಾದ್, ವರದನಾಯಕ, ಹೇಮಂತ್, ಮಹೇಶ್, ರಾಜು, ರವಿ, ಗೌರಮ್ಮ, ಸಾಜೀರ, ಶಾಂತಮ್ಮ, ಸಣ್ಣಮ್ಮ, ತಾಂಡವಮೂರ್ತಿ, ಬಸವರಾಜು, ಮಹೇಶ್, ಗೋವಿಂದನಾಯಕ, ಲಿಂಗಣ್ಣನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT