ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವಸ್ತು ಮಾರಾಟಕ್ಕೆ ಡ್ರಗ್ಸ್‌ ಪಾರ್ಟಿಗಳೇ ವೇದಿಕೆ: ಮುಂಬೈ ಪೊಲೀಸರ ಮಾಹಿತಿ

Last Updated 19 ಸೆಪ್ಟೆಂಬರ್ 2020, 16:49 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಶನಿವಾರ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನದಿಂದ ಹಲವಾರು ಪ್ರಶ್ನೆಗಳು ಉದ್ಭವವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

ನೃತ್ಯ ಸಂಯೋಜಕ ಕಿಶೋರ್, ಮಂಗಳೂರು ಮೂಲದವನಾಗಿದ್ದರೂ ಮುಂಬೈನಲ್ಲಿ ಹೆಚ್ಚಿನ ಸಂಪರ್ಕ ಹೊಂದಿದ್ದಾರೆ. ಕಿಶೋರ್ ಡ್ರಗ್ಸ್ ದಂಧೆ ಮಾಡುವ ಬಗ್ಗೆ ಮುಂಬೈ ಪೊಲೀಸರಿಂದಲೇ ನಗರದ ಪೊಲೀಸರಿಗೆ ಮಾಹಿತಿ ಬಂದಿದೆ ಎನ್ನಲಾಗಿದ್ದು, ಆ ಮಾಹಿತಿ ಆಧರಿಸಿಯೇ ಶನಿವಾರ ದಾಳಿ ನಡೆಸಲಾಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ನಗರದಲ್ಲಿ ಡ್ರಗ್ಸ್‌ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ಕಿಶೋರ್‌ ಶೆಟ್ಟಿ, ಬೆಂಗಳೂರಿನ ಆ್ಯಂಕರ್‌ ಕಂ ನಟಿ ಸೇರಿದಂತೆ ಹಲವರನ್ನು ಆಹ್ವಾನಿಸುತ್ತಿದ್ದ. ಎಂಡಿಎಂಎ ಮಾತ್ರೆ ಮತ್ತು ಪೌಡರ್‌ ಮಾರಾಟಕ್ಕೆ ಈ ಪಾರ್ಟಿಗಳೇ ವೇದಿಕೆಯಾಗಿದ್ದವು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಸಂಪರ್ಕ ಪತ್ತೆಗೆ ಜಾಲ: ಮುಂಬೈನಲ್ಲಿ ಖರೀದಿಸಿದ ಮಾದಕ ವಸ್ತುಗಳನ್ನು ಮಂಗಳೂರಿಗೆ ತರುತ್ತಿದ್ದುದು ಹೇಗೆ ಎನ್ನುವ ಪ್ರಶ್ನೆ ಆರಂಭವಾಗಿದೆ. ವಿಮಾನ ನಿಲ್ದಾಣಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತದೆ. ರೈಲು ಸಂಚಾರವೂ ಇದೀಗ ಆರಂಭವಾಗಿದೆ. ಸಮುದ್ರದ ಮೂಲಕ ಮುಂಬೈನ ಮಾದಕ ವಸ್ತು ನಗರಕ್ಕೆ ಬರುತ್ತಿತ್ತೇ ಎನ್ನುವ ಸಂಶಯ ಪೊಲೀಸರದ್ದಾಗಿದೆ.

5 ವರ್ಷಗಳ ನಂಟು: ಬೆಂಗಳೂರಿನ ಆ್ಯಂಕರ್ ಕಂ ನಟಿಯ ಜತೆಗೆ ಕಿಶೋರ್‌ ಶೆಟ್ಟಿಗೆ 5 ವರ್ಷಗಳಿಂದ ನಂಟಿರುವುದು ವಿಚಾರಣೆಯ ವೇಳೆ ಬಯಲಾಗಿದೆ. ಆ್ಯಂಕರ್ ಜತೆಗೆ ಕಿಶೋರ್‌ ಮುಂಬೈನಲ್ಲಿ ಓಡಾಡಿರುವ ಬಗ್ಗೆಯೂ ಮಾಹಿತಿ ದೊರೆತಿದೆ.

ಮುಂಬೈನಿಂದ ಬರುತ್ತಿದ್ದ ಡ್ರಗ್ಸ್ ಮಂಗಳೂರಿನ ಮೂಲಕ ಬೆಂಗಳೂರಿಗೆ ಸರಬರಾಜು ಆಗುತ್ತಿದೆಯೇ ಎನ್ನುವ ಸಂಶಯ ಆರಂಭವಾಗಿದೆ. ಈ ಬಗ್ಗೆ ಪೊಲೀಸರು ಹಲವರಿಗೆ ನೋಟಿಸ್‌ ನೀಡಿ, ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

***

ಪ್ರಾಥಮಿಕ ತನಿಖೆಯಿಂದ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಸಮಗ್ರ ತನಿಖೆ ನಡೆಸಿ, ಡ್ರಗ್ಸ್‌ ಜಾಲವನ್ನು ಸಂಪೂರ್ಣ ಭೇದಿಸಲಾಗುವುದು.

– ವಿಕಾಸ್‌ಕುಮಾರ್ ವಿಕಾಸ್‌, ನಗರ ಪೊಲೀಸ್ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT