ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಸೃಷ್ಟಿಗೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ

Last Updated 10 ಸೆಪ್ಟೆಂಬರ್ 2019, 7:03 IST
ಅಕ್ಷರ ಗಾತ್ರ

ಮಂಗಳೂರು: ಉದ್ಯೋಗ ಸೃಷ್ಟಿಸಿ ಯುವಜನರನ್ನು ನಿರುದ್ಯೋಗದಿಂದ ರಕ್ಷಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರ ಯುವಜನರು ಉದ್ಯೋಗ ವಂಚಿತರಾಗುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳಿಂದ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿದರು.

ಹೆಚ್ಚಿನ ಉದ್ಯೋಗ ಸೃಷ್ಟಿಸುವ ಮೂಲಕ ಯುವಜನರನ್ನು ನಿರುದ್ಯೋಗದ ಭೀತಿಯಿಂದ ಪಾರು ಮಾಡಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಜಿಲ್ಲೆಯ ಬೃಹತ್‌ ಕೈಗಾರಿಕೆಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಇಮ್ತಿಯಾಝ್‌ ಮಾತನಾಡಿ, ‘ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಆ ಕೆಲಸ ಮಾಡಲಿಲ್ಲ. ಎರಡನೇ ಅವಧಿಯಲ್ಲೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತಿಲ್ಲ. ಕೇಂದ್ರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಉದ್ಯಮ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದೆ’ ಎಂದರು.

ಇತ್ತೀಚಿನ ಕೆಲವು ದಿನಗಳಲ್ಲಿ ದೇಶದಲ್ಲಿ ಏಳು ಲಕ್ಷಕ್ಕೂ ಹೆಚ್ಚು ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ 13,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಎಲ್ಲವನ್ನೂ ಭರ್ತಿ ಮಾಡಬೇಕು. ಎಂಆರ್‌ಪಿಎಲ್‌, ಎಸ್‌ಇಜೆಡ್‌, ಓಎನ್‌ಜಿಸಿ, ರೈಲ್ವೆ, ಬ್ಯಾಂಕಿಂಗ್‌ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಡಿವೈಎಫ್‌ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ದಯಾನಂದ ಶೆಟ್ಟಿ ಮಾತನಾಡಿ, ‘ಎಂಆರ್‌ಪಿಎಲ್‌, ಎಸ್‌ಇಜೆಡ್‌ ಸ್ಥಾಪನೆಗೆ ಜಿಲ್ಲೆಯ ಜನರು ಜಮೀನು ಕಳೆದುಕೊಂಡಿದ್ದಾರೆ. ಪರಿಸರವೂ ಮಲಿನವಾಗುತ್ತಿದೆ. ಆದರೆ, ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಪರಿಸ್ಥಿತಿ ಬದಲಾಗಬೇಕು’ ಎಂದರು.

ಡಿವೈಎಫ್ಐ ಜಿಲ್ಲಾ ಘಟಕದ ಖಜಾಂಚಿ ಮನೋಜ್ ವಾಮಂಜೂರು, ಮುಖಂಡರಾದ ಅಶ್ರಫ್ ಕೆ.ಸಿ. ರೋಡ್, ಶ್ರೀನಾಥ್ ಕುಲಾಲ್ ಮಾತನಾಡಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ನವೀನ್ ಕೊಂಚಾಡಿ, ಸಹ ಕಾರ್ಯದರ್ಶಿ ಸಾದಿಕ್ ಕಣ್ಣೂರು, ಮುಖಂಡರಾದ ನಿತಿನ್ ಕುತ್ತಾರ್, ರಝಾಕ್ ಮೊಂಟೆಪದವು, ಸುನಿಲ್ ತೇವುಲ, ರಫೀಕ್ ಹರೇಕಳ, ನೌಶಾದ್ ಬೆಂಗರೆ, ಪ್ರಶಾಂತ್ ಎಂ.ಬಿ, ಅಶ್ರಫ್ ಹರೇಕಳ, ದಿನೇಶ್ ಬೊಂಡಂತಿಲ, ರಿಯಾಝ್‌ ಮೂಡುಬಿದಿರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT