ಭಾನುವಾರ, ಸೆಪ್ಟೆಂಬರ್ 26, 2021
28 °C
ಡಿವೈಎಫ್‌ಐ ಘಟಕದಿಂದ ಕ್ಲಾಕ್‌ ಟವರ್ ಎದುರು ಪ್ರತಿಭಟನೆ

ಮಂಗಳೂರು: ಹೆಚ್ಚುತ್ತಿರುವ ನಿರುದ್ಯೋಗ- ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಉದ್ಯೋಗ ಸೃಷ್ಟಿಸಿ ನಿರುದ್ಯೋಗದಿಂದ ರಕ್ಷಿಸಬೇಕು, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು, ಸರೋಜಿನಿ ಮಹಿಷಿ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ವತಿಯಿಂದ ಕ್ಲಾಕ್ ಟವರ್ ಬಳಿ ಸೋಮವಾರ ಪ್ರತಿಭಟನೆ ನಡೆಯಿತು. 

ಡಿವೈಎಫ್ಐ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ‘ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಶಾಲಾ–ಕಾಲೇಜುಗಳು ನಿರುದ್ಯೋಗಿಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಗಳಾಗಿ ಪರಿವರ್ತನೆಗೊಳ್ಳುತ್ತಿವೆ. ದೇಶ ಸ್ವಾತಂತ್ರ್ಯ ಗಳಿಸಿದ ಮೇಲೆ ಇಷ್ಟು ವರ್ಷಗಳಲ್ಲಿ ಈ ಮಟ್ಟಕ್ಕೆ ನಿರುದ್ಯೋಗ ಹೆಚ್ಚಿರುವುದು ಇದೇ ಮೊದಲು. ಪ್ರಧಾನಿ ನರೇಂದ್ರ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈವರೆಗೂ ಇದು ಸಾಧ್ಯವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ‌ಸಂತೋಷ್ ಬಜಾಲ್ ಮಾತನಾಡಿ, ‘ಯುವಜನರಿಗೆ ಉದ್ಯೋಗ ಕೊಡಿ ಇಲ್ಲವೇ ನಿರುದ್ಯೋಗ ಭತ್ಯೆ ಕೊಡಿ ಎಂಬ ಪ್ರಮುಖ ಬೇಡಿಕೆಯನ್ನು ಡಿವೈಎಫ್ಐ ಮುಂದಿಡುತ್ತ ಬಂದಿದೆ. ಕೋವಿಡ್ ಸಂದರ್ಭದಲ್ಲಿ ನಿರುದ್ಯೋಗ ಹೆಚ್ಚಳ ಪ್ರಮಾಣ ಭೀಕರ ಹಂತಕ್ಕೆ ತಲುಪಿದೆ. ಇದಕ್ಕೆ ಕೋವಿಡ್ ಮಾತ್ರ ಕಾರಣವಲ್ಲ, ದೇಶದ ಆರ್ಥಿಕ ನೀತಿಯೂ ಕಾರಣವಾಗಿದೆ’ ಎಂದರು.

‘ನೋಟ್ ಅಮಾನ್ಯೀಕರಣಗೊಂಡ ಸಂದರ್ಭದಲ್ಲೇ ಬಹಳಷ್ಟು ಸಣ್ಣಪುಟ್ಟ ಕೈಗಾರಿಕೆಗಳು ಬಾಗಿಲು ಮುಚ್ಚಿದ್ದವು. ಈಗ ಅದು ಗಂಭೀರ ಸ್ವರೂಪಕ್ಕೆ ತಲುಪಿದೆ. ರಾಜ್ಯದಲ್ಲಿ 2.50 ಲಕ್ಷಕ್ಕೂ ಮಿಕ್ಕಿ ಸರ್ಕಾರಿ ಉದ್ಯೋಗಗಳು ಖಾಲಿ ಇವೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಬಹುತೇಕ 13 ಸಾವಿರಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಪ್ರಮುಖ ಇಲಾಖೆಗಳಲ್ಲಿ ಖಾಲಿ ಇವೆ. ಜಿಲ್ಲೆಯಲ್ಲಿರುವ ಸಾರ್ವಜನಿಕ, ಖಾಸಗಿ ರಂಗದ ಕೈಗಾರಿಕೆಗಳಲ್ಲಿರುವ ಉದ್ಯೋಗಗಳಿಂದ ಸ್ಥಳೀಯರು ವಂಚಿತರಾಗಿದ್ದಾರೆ. ಜಿಲ್ಲೆಯ ಉದ್ಯೋಗ ವಿನಿಮಯ ಕೇಂದ್ರದಲ್ಲಿರುವ ಒಟ್ಟು 7 ಹುದ್ದೆಗಳಲ್ಲಿ 5 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕೆಲಸ ಮೊದಲು ಇಲ್ಲಿಂದಲ್ಲೇ ನಡೆಯಬೇಕು’ ಎಂದು ಒತ್ತಾಯಿಸಿದರು.

ಡಿವೈಎಫ್ಐ ಮಂಗಳೂರು ನಗರ ಅಧ್ಯಕ್ಷ ನವೀನ್ ಕೊಂಚಾಡಿ, ಕಾರ್ಯದರ್ಶಿ ಸಾದಿಕ್ ಕಣ್ಣೂರು, ಪ್ರಮುಖರಾದ ಮನೋಜ್ ವಾಮಂಜೂರು, ಹನೀಫ್ ಬೆಂಗರೆ, ಕೃಷ್ಣ ತಣ್ಣೀರುಬಾವಿ, ಪ್ರಮೀಳಾ ದೇವಾಡಿಗ, ವೆಂಕಟೇಶ್, ಅಸುಂತ ಡಿಸೋಜ, ಲೋಕೇಶ್, ನಾಸಿರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು