ಮಂಗಳವಾರ, ಮೇ 17, 2022
27 °C
ಮಾಹಿತಿ ಕಾರ್ಯಕ್ರಮದಲ್ಲಿ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌

ದಕ್ಷಿಣ ಕನ್ನಡ: ಇಸಿಜಿಯಿಂದ ಪ್ರಾಣಾಪಾಯ ತಡೆಯಲು ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಗ್ರಾಮ ಪಂಚಾಯಿತಿಯ ಪ್ರತಿ 50 ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ ಸೌಲಭ್ಯ ಲಭ್ಯವಾದಲ್ಲಿ, ಹೃದಯಾಘಾತದಿಂದ ಉಂಟಾಗುವ ಪ್ರಾಣಾಪಾಯ ತಡೆಯಲು ಸಾಧ್ಯವಾಗಲಿದೆ ಎಂದು ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಹೇಳಿದರು.

ಮಂಗಳೂರು ಪ್ರೆಸ್‌ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ಗುರುವಾರ ಪತ್ರಕರ್ತರು ಮತ್ತು ಅವರ ಕುಟುಂಬದ ಸದಸ್ಯರಿಗೆ ಹೃದ್ರೋಗ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೃದಯ ತೊಂದರೆ ಕಾಣಿಸಿಕೊಂಡಾಗ ತಪಾಸಣೆ ಅಗತ್ಯ. ನಗರ ಪ್ರದೇಶಗಳಲ್ಲಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವುದರಿಂದ ತಕ್ಷಣ ತಪಾಸಣೆ, ಚಿಕಿತ್ಸೆಗೆ ಸಾಧ್ಯವಾಗುತ್ತದೆ. ಆದರೆ ಕುಗ್ರಾಮಗಳಲ್ಲಿ ಹೃದ್ರೋಗಿಗೆ ಸೂಕ್ತ ಸಮಯದಲ್ಲಿ ತಪಾಸಣೆ, ಚಿಕಿತ್ಸೆ ಒದಗಿಸುವುದು ಅಗತ್ಯವಾಗಿದೆ ಎಂದರು.

ಹೃದಯಾಘಾತವನ್ನು ಖಾತರಿ ಮಾಡಲು ಇಸಿಜಿ ಸರಳ ವಿಧಾನ ಆಗಿದ್ದು, ಈ ಸೌಲಭ್ಯ ಹತ್ತಿರದಲ್ಲೇ ದೊರಕಿದರೆ ರೋಗಿಯನ್ನು ಅಪಾಯದಿಂದ ಕಾಪಾಡಲು ಸಾಧ್ಯವಾಗಲಿದೆ. ಹೃದಯಾಘಾತದ ಒಂದು ಗಂಟೆಯ ಅವಧಿ ಅತೀ ಅಮೂಲ್ಯವಾಗಿದೆ. 50 ಕಿ.ಮೀ. ವ್ಯಾಪ್ತಿಯಲ್ಲಿ ಇಸಿಜಿ ವ್ಯವಸ್ಥೆ ಲಭ್ಯವಿದ್ದಲ್ಲಿ ಹೃದಯದ ತೊಂದರೆಯನ್ನು ಖಾತರಿ ಪಡಿಸಲು ಸಾಧ್ಯವಾಗುತ್ತದೆ. ಬಳಿಕ ಪ್ರಾಥಮಿಕ ಚಿಕಿತ್ಸೆ ಒದಗಿಸಬಹುದು ಎಂದು ವಿವರಿಸಿದರು.

ಬಂಟ್ವಾಳ ಮತ್ತು ಸುಳ್ಯ ಪ್ರೆಸ್‌ಕ್ಲಬ್‌ಗೆ ಇಸಿಜಿ ಯಂತ್ರಗಳನ್ನು ವಿತರಿಸಲಾಯಿತು. ಕೆಎಂಸಿ ಆಸ್ಪತ್ರೆಯ ಡಾ.ಆನಂದ ವೇಣುಗೋಪಾಲ್, ಮುಖ್ಯ ವ್ಯವಸ್ಥಾಪಕ ಸುರೇಂದ್ರ ಪ್ರಸಾದ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ವೇದಿಕೆಯಲ್ಲಿದ್ದು, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಹರೀಶ್ ರೈ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.