ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃ ಭಾಷೆಯಲ್ಲೇ ಶಿಕ್ಷಣ ಇರಬೇಕು: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಲಹೆ

Last Updated 2 ನವೆಂಬರ್ 2019, 8:45 IST
ಅಕ್ಷರ ಗಾತ್ರ

ಮಂಗಳೂರು:ಮಕ್ಕಳಿಗೆ ಎಸ್ಎಸ್ಎಲ್ ಸಿ ವರೆಗೂ ಮಾತೃಭಾಷಾ ಮಾಧ್ಯಮದಲ್ಲೇ ಶಿಕ್ಷಣ ನೀಡಲು ರಾಜ್ಯ ಸರ್ಕಾರಗಳು ಕ್ರಮ‌ ಕೈಗೊಳ್ಳಬೇಕು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಲಹೆ ನೀಡಿದರು.

ಇಲ್ಲಿನ ಸುರತ್ಕಲ್ ಎನ್ಐಟಿಕೆಯಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, 'ಮಾತೃಭಾಷೆ ನಮ್ಮ ಕಣ್ಣು ಇದ್ದಂತೆ. ಇತರ ಭಾಷೆಗಳು ಕನ್ನಡಕ ಇದ್ದಂತೆ. ಕಣ್ಣು ಇದ್ದರೆ ದೃಷ್ಟಿಯನ್ನು ಸುಧಾರಿಸಿಕೊಳ್ಳಬಹುದು' ಎಂದರು.

ಮಕ್ಕಳು ಪ್ರೌಢಶಾಲಾ ಹಂತದವರೆಗೂ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಬೇಕು. ದೇಶದಲ್ಲಿ 760 ಭಾಷೆಗಳಿವೆ. ಎಲ್ಲ ಭಾಷೆಗಳಿಗೂ ಪ್ರಾಮುಖ್ಯ ದೊರೆಯಬೇಕು. ಮಾತೃಭಾಷೆಯಲ್ಲಿ ಕಲಿಯಲು ಮತ್ತು ಮಾತನಾಡಲು ಹಿಂಜರಿಕೆ ಇರಬಾರದು. ಹೆಮ್ಮೆಯಿಂದ ಮಾತೃಭಾಷೆ ಬಳಸುವ ವಾತಾವರಣ ನಿರ್ಮಾಣವಾಗಬೇಕು ಎಂದರು.

'ನಮ್ಮ ಭಾಷೆಯಲ್ಲೇ ಮಾತನಾಡೋಣ. ಇತರೆ ಭಾಷೆಗಳನ್ನು ಗೌರವಿಸೋಣ ಎಂಬುದು ನಮ್ಮ ಧ್ಯೇಯ ಆಗಬೇಕು. ಭಾಷೆ ಮತ್ತು ಭಾವನೆ ಒಂದಕ್ಕೊಂದು ನಂಟು ಹೊಂದಿವೆ. ಮಾತೃಭಾಷೆಯ ಮೂಲಕ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಲು ಸಾಧ್ಯವಿದೆ' ಎಂದರು.

ದೇಶ ಒಂದಾಗಿದೆ: ಸಂವಿಧಾನದ 370ನೇ ವಿಧಿ ರದ್ಧತಿಯ ಬಳಿಕ ದೇಶ ಸಮಗ್ರವಾಗಿ ಒಂದಾಗಿದೆ. ದೇಶದ ಬಹುಪಾಲು ಜನರು ಇದರಿಂದ ಸಂತೋಷಗೊಂಡಿದ್ದಾರೆ. ಬೆರಳೆಣಿಕೆ ಜನರಷ್ಟೇ ಕೊಂಕು ಮಾತನಾಡುತ್ತಿದ್ದಾರೆ ಎಂದು ಉಪ ರಾಷ್ಟ್ರಪತಿ ಹೇಳಿದರು.

'ನೆರೆಯ ರಾಷ್ಟ್ರ‌ ಭಯೋತ್ಪಾದಕರನ್ನು ಬಳಸಿಕೊಂಡು ಭಾರತಕ್ಕೆ ತೊಂದರೆ ಕೊಡಲು ಯತ್ನಿಸುತ್ತಿದೆ. ದೇಶ ಅದಕ್ಕೆ ಸರಿಯಾದ ಉತ್ತರ ಕೊಡುತ್ತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT