ಭಾನುವಾರ, ಮೇ 22, 2022
22 °C
ದ.ಕ. ಜಿಲ್ಲೆಯಾದ್ಯಂತ ಹಬ್ಬದ ಸಂಭ್ರಮ: ಸಾಮೂಹಿಕ ಪ್ರಾರ್ಥನೆ

ದಕ್ಷಿಣ ಕನ್ನಡ | ಈದ್‌–ಉಲ್‌ ಫಿತ್ರ್‌ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪವಿತ್ರ ರಂಜಾನ್‌ನ ಉಪವಾಸ ವ್ರತ ಪೂರೈಸಿ, ಜಿಲ್ಲೆಯಲ್ಲಿ ಮಂಗಳವಾರ (ಮೇ 3) ಸಡಗರ, ಸಂಭ್ರಮದಿಂದ ‘ಈದ್‌–ಉಲ್‌ ಫಿತ್ರ್’ ಆಚರಿಸಲು ಸಿದ್ಧತೆ ಶುರುವಾಗಿದೆ.

ಎರಡು ವರ್ಷ ಕೋವಿಡ್-19ನಿಂದಾಗಿ ಸರ್ಕಾರದ ಸೂಚನೆಯ ಮೇರೆಗೆ ಅತ್ಯಂತ ಸರಳವಾಗಿ ಈದ್ ಆಚರಿಸಲಾಗಿದೆ. ಜಿಲ್ಲೆಯ ಮಸೀದಿ ಮತ್ತು ಈದ್ಗಾಗಳಲ್ಲಿ ಸಾಮೂಹಿಕ ನಮಾಜ್‌, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನದ ಬಳಿಕ ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವ ಮೂಲಕ ಹಬ್ಬದ ಸಂಭ್ರಮ ಇಮ್ಮಡಿಸಲು ಮುಸ್ಲಿಮರು ಉತ್ಸುಕರಾಗಿದ್ದಾರೆ.

ನಗರದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಬೆಳಿಗ್ಗೆ 8ಕ್ಕೆ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.

ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನಲ್ಲಿ ಬೆಳಿಗ್ಗೆ 8.30ಕ್ಕೆ ಖತೀಬ್ ಅನ್ವರ್ ಅಲಿ ದಾರಿಮಿಯ ನೇತೃತ್ವದಲ್ಲಿ ಈದ್ ನಮಾಜ್‌ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ. ಜಿಲ್ಲೆಯ ಎಲ್ಲ ಮಸೀದಿ ಮತ್ತು ಈದ್ಗಾಗಳಲ್ಲಿ ನಿಗದಿತ ಸಮಯಕ್ಕೆ ಈದ್ ನಮಾಜ್‌ ಮತ್ತು ಖುತ್ಬಾ ಪಾರಾಯಣ ನಡೆಯಲಿದೆ.

‘ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಕೊಡದೆ ನಾಡಿನ ಸರ್ವ ಮುಸ್ಲಿಮರು ಹಬ್ಬವನ್ನು ಸಂಭ್ರಮಿಸಬೇಕು’ ಎಂದು ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್.ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.

‘ರಂಜಾನ್‌ನ 30 ಉಪವಾಸ ವ್ರತ ಪೂರೈಸಿ, ಶಾಂತಿ, ಸಹನೆ, ಸೌಹಾರ್ದದ ಸಂದೇಶ ಸಾರಿದ ಮುಸ್ಲಿಮರು ಈದ್‌–ಉಲ್‌ ಫಿತ್ರ್ ದಿನವನ್ನು ಸಂಭ್ರಮಿಸಬೇಕು. ಸಹೋದರ ಸಮುದಾಯದ ಜನರೊಂದಿಗೆ ಸೌಹಾರ್ದ ಬೆಸೆಯುವ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಆಗಬೇಕು’ ಎಂದು ಯೇನೆಪೋಯ ವಿಶ್ವವಿದ್ಯಾಲಯದ ಕುಲಾಧಿಪತಿ ಯೇನೆಪೋಯ ಅಬ್ದುಲ್ಲಾ ಕುಂಞಿ ಸಲಹೆ ನೀಡಿದ್ದಾರೆ.

‘ದ್ವೇಷ, ಅಸೂಯೆ, ಕೋಮು ವರ್ಗೀಕರಣದ ಮಧ್ಯೆ ಶಾಂತಿ, ಸಹನೆ, ಸಮಾಧಾನದ ರಂಜಾನ್‌ ಹಬ್ಬವನ್ನು ಆಚರಿಸಲಾಗುತ್ತದೆ. ಕರುಣೆಯ ಸಂದೇಶ ಸಾರುವ ಈದ್‌–ಉಲ್‌ ಫಿತ್ರ್‌ ಸರ್ವರಿಗೂ ಒಳಿತನ್ನು ಕರುಣಿಸಲಿ. ಜಾತಿ ಧ್ರುವೀಕರಣದ ಮೂಲಕ ಸಮಾಜವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ಯತ್ನವನ್ನು ವಿಫಲಗೊಳಿಸಿ, ಕಾರುಣ್ಯದ, ಸಹಬಾಳ್ವೆಯ ಸುಂದರ ನಾಡನ್ನು ಕಟ್ಟಲು ಎಲ್ಲರೂ ಕೈ ಜೋಡಿಸೋಣ’ ಎಂದು ನಗರದ ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿ ಕೋಶಾಧಿಕಾರಿ ಸೈಯದ್ ಅಹ್ಮದ್ ಬಾಷಾ ತಂಙಳ್ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು