ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ | ಬಾವಿ ನೀರು ಕುಡಿದು ಎಂಟು ವಿದ್ಯಾರ್ಥಿಗಳು ಅಸ್ವಸ್ಥ

ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಪೆರ್ಲ ಶಾಲೆಯಲ್ಲಿ ದುರ್ಘಟನೆ
Last Updated 2 ಡಿಸೆಂಬರ್ 2019, 11:13 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿಬಾಜೆ ಪೆರ್ಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಬಾವಿಯ ನೀರನ್ನು ಕುಡಿದ ಎಂಟು ವಿದ್ಯಾರ್ಥಿಗಳು ಸೋಮವಾರ ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ನಾಲ್ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ ಬಾವಿಯಿಂದ ನೀರೆತ್ತಿ ಶಾಲೆಯ ಕೈತೋಟದಲ್ಲಿರುವ ತರಕಾರಿ ಗಿಡಗಳಿಗೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಕೆಲವರು ಆ ನೀರನ್ನು ಕುಡಿದಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದು, ಹೊಟ್ಟೆ ನೋವು ಎಂದು ಹೇಳಿದ್ದಾರೆ.

ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣವೇ ಕೊಕ್ಕಡದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ನಂತರ ನಾಲ್ವರನ್ನು ಬೆಳ್ತಂಗಡಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದು, ಹೆಚ್ಚು ಅಸ್ವಸ್ಥರಾಗಿದ್ದ ನಾಲ್ವರನ್ನು ಮಂಗಳೂರಿಗೆ ಕರೆತಂದು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತು.

ಆರನೇ ತರಗತಿ ವಿದ್ಯಾರ್ಥಿಗಳಾದ ರಾಜೇಶ್‌ (12), ಮೋನಿಸ್‌ (12), ಶ್ರವಣ್‌ (12), ಸುದೀಪ್‌ (12), ಏಳನೇ ತರಗತಿ ವಿದ್ಯಾರ್ಥಿ ಚೇತನ್‌ ಕುಮಾರ್‌ (13), ಎಂಟನೇ ತರಗತಿ ವಿದ್ಯಾರ್ಥಿಗಳಾದ ರಾಧಾಕೃಷ್ಣ (14), ಸುಧೀಶ್‌ (14) ಮತ್ತು ಯೋಗೀಶ್‌ (14) ಅಸ್ವಸ್ಥಗೊಂಡಿರುವವರು.

ಘಟನೆ ಕುರಿತು ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮಿಪ್ರಸಾದ್‌, ‘ಎಲ್ಲ ವಿದ್ಯಾರ್ಥಿಗಳೂ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಶಾಲಾ ಆವರಣದಲ್ಲಿರುವ ಬಾವಿಯ ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನೀರಿನಲ್ಲಿ ಏನಾದರೂ ಮಿಶ್ರಣ ಆಗಿತ್ತೇ ಎಂಬುದು ವರದಿ ಬಂದ ಬಳಿಕವಷ್ಟೆ ತಿಳಿಯಲಿದೆ. ಬಾವಿಗೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT