ಜಿಲ್ಲಾ ಪಂಚಾಯಿತಿ ಚುನಾವಣೆ– ಮೀಸಲಾತಿ ಅವೈಜ್ಞಾನಿಕ: ವಸಂತ ಬಂಗೇರ ಟೀಕೆ

ಬೆಳ್ತಂಗಡಿ: ‘ಚುನಾವಣಾ ಆಯೋಗ ಘೋಷಿಸಿರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ಮೀಸಲಾತಿ ಅವೈಜ್ಞಾನಿಕವಾಗಿದೆ. ಬೆಳ್ತಂಗಡಿಯ ಇತಿಹಾಸದಲ್ಲಿಯೇ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಒಂದೇ ಒಂದು ಕ್ಷೇತ್ರವನ್ನು ಮೀಸಲಿಡದೆ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಆರೋಪಿಸಿದರು.
ಬೆಳ್ತಂಗಡಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬೆಳ್ತಂಗಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು 40,958 ಜನಸಂಖ್ಯೆ ಇದೆ. ಹೀಗಿದ್ದರೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಒಂದೂ ಕ್ಷೇತ್ರವನ್ನು ಮೀಸಲಿಟ್ಟಿಲ್ಲ. ಇದರಲ್ಲಿ ಶಾಸಕ ಹರೀಶ್ ಪೂಂಜ ನೇರವಾಗಿ ಶಾಮೀಲಾಗಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತದೆ’ ಎಂದು ಹೇಳಿದರು.
‘ತಾಲ್ಲೂಕಿನ ಕೆಲವೊಂದು ಕಡೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರವನ್ನು ಸಾಮಾನ್ಯ ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಧರ್ಮಸ್ಥಳ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಈ ಹಿಂದೆ ಕೂಡ ಹಿಂದುಳಿದ ವರ್ಗ (ಎ) ಮೀಸಲಾತಿ ಇದ್ದು, ಈ ಬಾರಿ ಅದೇ ಮೀಸಲಾತಿ ಪುನರಾವರ್ತನೆಯಾಗಿದೆ ಎಂದರು.
ಇಂದು ಸೈಕಲ್ ಜಾಥಾ: ‘ತೈಲ ಬೆಲೆ ಏರಿಕೆ ವಿರುದ್ಧ ಪಕ್ಷದ ವತಿಯಿಂದ ಉಜಿರೆಯ ಪಿ.ಸಿ.ಪೈ ಪೆಟ್ರೋಲ್ ಬಂಕ್ ಬಳಿಯಿಂದ ಹಳೆಕೋಟೆಯ ಮಹಾವೀರ ಸರ್ವೀಸ್ ಸ್ಟೇಷನ್ ವರೆಗೆ ಸೈಕಲ್ ಜಾಥಾ ಇದೇ 7ರಂದು ಆಯೋಜಿಸಲಾಗಿದೆ. ಜತೆಗೆ ಪಾದಯಾತ್ರೆ ಕೂಡ ನಡೆಯಲಿದೆ. ಜಾಥಾದ ನೇತೃತ್ವವನ್ನು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸಚಿವ ಗಂಗಾಧರ ಗೌಡ ವಹಿಸಲಿದ್ದಾರೆ’ ಎಂದು ಹೇಳಿದರು.
11 ರಂದು ರಕ್ತದಾನ ಶಿಬಿರ: ವೆನ್ಲಾಕ್ ಜಿಲ್ಲಾಸ್ಪತ್ರೆಯ ರಕ್ತನಿಧಿ ಘಟಕ ಮತ್ತು ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಇದೇ 11 ರಂದು ಬೆಳ್ತಂಗಡಿಯ ಗುರುನಾರಾಯಣ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ಗ್ರಾಮೀಣ ಅಧ್ಯಕ್ಷ ರಂಜನ್ ಜಿ ಗೌಡ ಪೂರಕ ಮಾಹಿತಿ ನೀಡಿದರು.
ಮನೋಹರ್ ಕುಮಾರ್ ಇಳಂತಿಲ, ಕೇಶವ ಪಿ. ಗೌಡ, ಎಸ್.ಸಿ ಘಟಕದ ಅಧ್ಯಕ್ಷ ಬಿ.ಕೆ ವಸಂತ, ಮಾಜಿ ಅಧ್ಯಕ್ಷ ಚಂದು ಎಲ್, ಮಾಲಾಡಿ ಗ್ರಾಮ ಪಂಚಾಯಿತಿ ಸದಸ್ಯ ಬೇಬಿ ಸುವರ್ಣ, ಪ್ರಭಾಕರ ಶಾಂತಿಕೋಡಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.