ಮಂಗಳವಾರ, ಜೂನ್ 28, 2022
28 °C

ಕಾಡಾನೆ ದಾಳಿ: 500ಕ್ಕೂ ಅಧಿಕ ಅಡಿಕೆ ಮರ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳೆಹೊನ್ನೂರು: ಪಟ್ಟಣದ ಚಿಕ್ಕಮಗಳೂರು ರಸ್ತೆಯಲ್ಲಿರುವ ರೋಟರಿ ವೃತ್ತದ ಸಮೀಪ ಹಾಗೂ ಬನ್ನೂರು ಬಳಿಯ ಅಡಿಕೆ ತೋಟಕ್ಕೆ ಕಾಡಾನೆಗಳು ದಾಳಿ ಮಾಡಿದ್ದು ಅಪಾರ ಹಾನಿಯಾಗಿದೆ.

ಬನ್ನೂರು ಸಮೀಪದ ಕುಂಬ್ರಮನೆ ಎಂಬಲ್ಲಿ ನಾಲ್ಕು ಕಾಡಾನೆಗಳು ಕೃಷಿಕರ ತೋಟದ ಮೇಲೆ ದಾಳಿ ನಡೆಸಿವೆ. ಇದಿರಿಂದಾಗಿ ಮಂಜುನಾಥ್‍ ಗೌಡ, ಪ್ರದೀಪ್, ಶ್ರೀನಿವಾಸ್ ಎಂಬುವರಿಗೆ ಸೇರಿದ 500ಕ್ಕೂ ಅಧಿಕ ಅಡಿಕೆ ಮರಗಳು ನಾಶಗೊಂಡಿವೆ ಎಂದು ಅವರು ದೂರಿದ್ದಾರೆ.

ಭದ್ರಾನದಿ ದಂಡೆಯ ಪಕ್ಕದಲ್ಲಿರುವ ಅನುಪಮಾ ಆಳ್ವ ಎಂಬುವರಿಗೆ ಸೇರಿದ ಕಾಫಿ, ಅಡಿಕೆ ಹಾಗೂ ಬಾಳೆಯ ತೋಟಕ್ಕೆ ಕಾಡಾನೆಗಳು ಎರಡು ಮೂರು ದಿನಗಳಿಂದ ನಿರಂತರವಾಗಿ ಬರುತ್ತಿದ್ದು, ಬೆಳೆಗಳನ್ನು ಧ್ವಂಸಗೊಳಿಸಿವೆ.

ಬನ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಣಕ್ಕಿ, ಹಲಸೂರು, ದೇವದಾನ, ಕಾರೇಹಡ್ಲು, ಭದ್ರಾ ಎಸ್ಟೇಟ್ ಪ್ರದೇಶದಲ್ಲಿಯೂ ಕೆಲ ದಿನಗಳಿಂದ ನಿರಂತರವಾಗಿ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಜಕ್ಕಣಕ್ಕಿ ಗ್ರಾಮದಲ್ಲಿ ಮಂಗಳವಾರ ಎರಡು ಕಾಡಾನೆಗಳು ರೈತರೊಬ್ಬರ ತೋಟಕ್ಕೆ ಬಂದಿರುವುದನ್ನು ಸ್ಥಳೀಯರು ದೃಢಪಡಿಸಿದ್ದಾರೆ.

‘ಆನೆಗಳು ಕೃಷಿ ಜಮೀನಿಗೆ ದಾಳಿ ನಡೆಸಿದ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕೃಷಿಕರಿಗೆ ಪಟಾಕಿ ಕೊಟ್ಟು ಹೋಗುತ್ತಿದ್ದಾರೆ. ಈ ಹಿಂದೆ ಆನೆಗಳು ತೋಟಕ್ಕೆ ದಾಳಿ ನಡೆಸಿದಾಗ ಅರಣ್ಯ ಇಲಾಖೆ ಸಿಬ್ಬಂದಿ ಜನರನ್ನು ಸೇರಿಸಿ ಆನೆಗಳನ್ನು ಓಡಿಸುತ್ತಿದ್ದರು. ಈಗ ಅದನ್ನು ಕೈಬಿಟ್ಟಿದ್ದು, ಕೇವಲ ಪಟಾಕಿ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ’ ಎಂದು ಮುಖಂಡ ವೆನಿಲ್ಲಾ ಭಾಸ್ಕರ್ ದೂರಿದ್ದಾರೆ.

‘ಬೆಳೆಹಾನಿಯಾದ ಕೃಷಿಕರಿಗೆ ಸಮರ್ಪಕ ಪರಿಹಾರ ನೀಡಬೇಕು. ಪಟ್ಟಣದ ಮುಖ್ಯರಸ್ತೆ ಬದಿಯಲ್ಲೇ ಇರುವ ತೋಟಕ್ಕೆ ಎರಡು ಮೂರು ದಿನಗಳಿಂದ ಕಾಡಾನೆಗಳು ಬಂದು ಹಾನಿ ಮಾಡುತ್ತಿರುವುದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೇ ಸೂಕ್ತ ಕ್ರಮಕೈಗೊಂಡು ಆನೆಗಳನ್ನು ಬೇರೆಡೆಗೆ ಓಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು