ಭಾನುವಾರ, ಸೆಪ್ಟೆಂಬರ್ 19, 2021
24 °C
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಮಾನಾಥ ರೈ ಆರೋಪ

ಸಿ.ಟಿ.ರವಿಯಂಥವರೇ ನಿಜವಾದ ದೇಶದ್ರೋಹಿಗಳು: ಮಾಜಿ ಸಚಿವ ರಮಾನಾಥ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ‘ದೇಶದ ಒಳಿತಿಗಾಗಿ ಜೈಲಿಗೆ ಹೋದವರು ಮತ್ತು ಹುತಾತ್ಮರಾದವರ ಬಗ್ಗೆ ಹಗುರವಾಗಿ ಮಾತನಾಡುವ ಸಿ.ಟಿ. ರವಿಯಂತಹವರೇ ನಿಜವಾದ ದೇಶದ್ರೋಹಿಗಳು’ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದರೆ ಎಲ್ಲವೂ ತಾನೇ ಎಂದು ರವಿ ಭಾವಿಸಿದಂತಿದೆ. ಮೇಕೆದಾಟು ವಿಷಯದಲ್ಲಿ ಕರ್ನಾಟಕದ ಪರ ನಿಲ್ಲಬೇಕಿದ್ದ ರವಿ, ತಮಿಳುನಾಡು ಪರ ನಿಂತಿರುವುದು ಅಕ್ಷಮ್ಯ. ಇತಿಹಾಸ ಜ್ಞಾನವಿಲ್ಲದ, ಸಾಮಾಜಿಕ ಹಿನ್ನಲೆಯೂ ಇಲ್ಲದ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿದವರ ಬಗ್ಗೆ ಅಸಂಬದ್ಧವಾಗಿ, ಹಗುರವಾಗಿ ಮಾತನಾಡುವ ಸಿಟಿ ರವಿ ಅಂಥವರಿಗೆ ಬಿಜೆಪಿ ಮಣೆ ಹಾಕುತ್ತಿರುವುದು ವಿಪರ್ಯಾಸ’ ಎಂದರು.

‘ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ ಮಹಾತ್ಮರ ಹೆಸರನ್ನು ಬದಲಾಯಿಸುವ ಮತ್ತು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಬಿಜೆಪಿಗರು ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್‌ ಸ್ಮಾರಕಗಳ ಹೆಸರನ್ನೂ ಕೂಡ ಬದಲಾಯಿಸಿದರೂ ಅಚ್ಚರಿಯಿ‌ಲ್ಲ. ಸಿ.ಟಿ.ರವಿ, ಸಚಿವ ಕೆ.ಎಸ್. ಈಶ್ವರಪ್ಪ ಅವರಂತಹವರು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಬಗ್ಗೆ ಸಿ.ಟಿ.ರವಿ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಗೋಡ್ಸೆಗೆ ದೇಶಪ್ರೇಮಿಯ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಇದು ಖಂಡನೀಯ’ ಎಂದು ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಪ್ರಮುಖರಾದ ಶಶಿಧರ ಹೆಗ್ಡೆ, ಇಬ್ರಾಹಿಂ ಕೋಡಿಜಾಲ್, ಹರಿನಾಥ್, ನವೀನ್ ಡಿಸೋಜ, ಅಪ್ಪಿ, ಪ್ರತಿಭಾ ಕುಳಾಯಿ, ಪ್ರಕಾಶ್ ಸಾಲ್ಯಾನ್, ಸದಾಶಿವ ಉಳ್ಳಾಲ್, ನೀರಜ್‌ಪಾಲ್, ಗಣೇಶ್ ಪೂಜಾರಿ, ಶಬ್ಬೀರ್ ಎಸ್., ಧನಂಜಯ ಮಟ್ಟು, ನಝೀರ್ ಬಜಾಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು