ಗುರುವಾರ , ನವೆಂಬರ್ 21, 2019
20 °C

ನನ್ನ ಕೆನ್ನೆಗೆ ಹೊಡೆದಿದ್ದು ನಿಜ: ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ

Published:
Updated:

ಮಂಗಳೂರು: ‘ಕಾಂಗ್ರೆಸ್‌ನ ಮಾಜಿ ಮೇಯರ್ ಗುಲ್ಝಾರ್ ಬಾನು ಅವರ ಪುತ್ರ ಅಜೀಂ ನನ್ನ ಕೆನ್ನೆಗೆ ಹೊಡೆದಿದ್ದು ನಿಜ. ನನ್ನ ಆಪ್ತ ಕಾರ್ಯದರ್ಶಿಗೂ ಪೆಟ್ಟು ಬಿದ್ದಿರುವುದರಿಂದ ಪ್ರಕರಣ ದಾಖಲಾಗಿದೆ. ಆದರೆ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅ‌ವರು ಪ್ರಕರಣ ವಾಪಸ್ ಪಡೆಯುವಂತೆ ನನ್ನ ಮೇಲೆ ಒತ್ತಡ ಹೇರಿದರು’ ಎಂದು ಮಾಜಿ ಶಾಸಕ ಬಿ.ಎ. ಮೊಹಿಯುದ್ದೀನ್‌ ಬಾವ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶಾಸಕ ಕಾಮತ್ ನನಗೆ ಕರೆ ಮಾಡಿ ಪ್ರಕರಣ ಹಿಂಪಡೆಯುವಂತೆ ಹೇಳಿದ್ದರು. ಅವರ ಮೇಲೆ ಈ ರೀತಿಯ ಹಲ್ಲೆ ಆಗಿದ್ದರೆ ಅವರು ಸುಮ್ಮನೇ ಇರುತ್ತಿದ್ರಾ? ಶಾಸಕರು ಆರೋಪಿ ಪರ ಯಾಕೆ ಈ ರೀತಿ ಹೇಳಿದರು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಶಾಸಕ ಕಾಮತ್ ನನ್ನ ಉತ್ತಮ ಸ್ನೇಹಿತ ಎಂದು ಬಾವಾ ತಿಳಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ಮುಗಿಸಿ ಹೊರಬರುವಾಗ ಗುಲ್ಝಾರ್ ಬಾನು, ಅವರ ಪುತ್ರ, ಇನ್ನೊಬ್ಬರು ಮಾತ್ರ ಇದ್ದರು. ಅವರನ್ನು ಸಮಾಧಾನ ಮಾಡಿ ಕಳಿಸುವುದಕ್ಕೆ ಹೋದ ವೇಳೆ ಏಕಾಏಕಿ ಆಗಿ ಗುಲ್ಝಾರ್ ಅವರ ಪುತ್ರ ನನ್ನ ಮೇಲೆ ಹಲ್ಲೆಗೆ ಮುಂದಾಗಿ ಕೆನ್ನೆಗೆ ಬಾರಿಸಿದರು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿಯೂ ಬಿತ್ತರವಾಗಿದೆ. ಕೆನ್ನೆಗೆ ಪೆಟ್ಟು ಬಿದ್ದ ಪರಿಣಾಮ ರಾತ್ರಿ ಕಿವಿ ನೋವು ಬಂದು ನಿದ್ದೆ ಬರಲಿಲ್ಲ. ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದೇ ಈ ವೇಳೆ ಪೊಲೀಸರು ಆಸ್ಪತ್ರೆಗೆ ಬಂದಿದ್ದ ವೇಳೆ ಘಟನೆ ಕುರಿತು ವಿವರಿಸಿದ್ದೇನೆ. ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದೇನೆ. ನಾನು ಪ್ರಕರಣ ದಾಖಲಿಸಲು ಹೋಗಿಲ್ಲ. ನನ್ನ ಆಪ್ತ ಕಾರ್ಯದರ್ಶಿಗೆ ಕೂಡ ಪೆಟ್ಟು ಬಿದ್ದಿದ್ದರಿಂದ ಕೇಸ್ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.

ಪಾಲಿಕೆ ಚುನಾವಣೆಯಲ್ಲಿ ಪಾರದರ್ಶಕವಾಗಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಬಂದಿದ್ದ ವೇಳೆ ಕೂಡಾ ಅಲ್ಲಿನ ಮತದಾರರು ಬೇರೆಯವರಿಗೆ ಅವಕಾಶ ನೀಡುವಂತೆ ಹೇಳಿದ್ದರೂ ಕೂಡಾ ಗುಲ್ಝಾರ್‌ ಬಾನು ಅವರಿಗೆ ಪಕ್ಷವು ಟಿಕೆಟ್ ನೀಡಿತ್ತು. ಆದರೆ, ಎಸ್‌ಡಿಪಿಐ ಅಭ್ಯರ್ಥಿ ಜಯ ಗಳಿಸಿದ್ದರು. ಚೊಕ್ಕಬೆಟ್ಟು ವಾರ್ಡ್ ಪ್ರತಿ ಬಾರಿ ಕಾಂಗ್ರೆಸ್‌ಗೆ ದೊಡ್ಡ ಅಂತರದ ಗೆಲುವು ನೀಡುತ್ತ ಬಂದರೂ ಅವರಿಗೆ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ವಾರ್ಡ್ ಮತ್ತು ಬೂತ್ ಅಧ್ಯಕ್ಷರು ಕೆಲವು ಹೆಸರುಗಳನ್ನು ಶಿಫಾರಸು ಮಾಡಿ ಕಳುಹಿಸಿದ್ದರು. ಅದರಲ್ಲಿ ಗುಲ್ಝಾರ್‌ ಬಾನು ಅವರ ಹೆಸರೂ ಇತ್ತು. ಪಕ್ಷದ ಹೈಕಮಾಂಡ್ ಜೊತೆ ವಿಚಾರ ಮಾಡಿ ಅಂತಿಮವಾಗಿ ಮಾಜಿ ಶಾಸಕರೊಬ್ಬರ ಪುತ್ರಿಗೆ ಅವಕಾಶ ನೀಡಿದೆ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಮಾಜಿ ಶಾಸಕ ಬಾವಾ ತಿಳಿಸಿದರು.

ಟಿಕೆಟ್‍ ₹ 10 ಲಕ್ಷ ಪಡೆದಿದ್ದೇನೆ ಎಂಬ ಸುಳ್ಳು ಆರೋಪವನ್ನೂ ಮಾಡಲಾಗಿದೆ. ನಾನು ವಿಧಾನಸಭೆಗೆ ಸ್ಪರ್ಧೆ ಮಾಡಿದ್ದ ವೇಳೆಯಲ್ಲೂ ಯಾರಲ್ಲೂ ಹಣ ಕೇಳಿಲ್ಲ. ಪಕ್ಷದಿಂದಲೂ ಹಣ ಪಡೆಯದೆ ನಾನೇ ಖರ್ಚು ಮಾಡಿದ್ದೇನೆ. ಈಗ ಟಿಕೆಟ್‍ ಕೊಡಿಸುವುದಾಗಿ ಯಾರಿಂದಲೂ ನಯಾಪೈಸೆ ಹಣ ಪಡೆದಿಲ್ಲ, ಚಾರಿತ್ರ್ಯಹರಣ ಮಾಡುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದರು.

ಗುಲ್ಝಾರ್ ಬಾನು ಅವರಿಗೆ ಟಿಕೆಟ್ ಕೊಡಿಸುವುದಾಗಿ ನಾನು ಆಶ್ವಾಸನೆ ನೀಡಿಲ್ಲ. ಅರ್ಜಿ ಹಾಕಿ, ಬೆಂಬಲಿಸುವೆ ಎಂದಿದ್ದೆ. ಬ್ಲಾಕ್ ಅಧ್ಯಕ್ಷರು ಶಿಫಾರಸು ಮಾಡಿ ಕಳುಹಿಸಿಕೊಟ್ಟ ಪಟ್ಟಿಯಲ್ಲಿ ಮೊದಲ ಹೆಸರೇ ಗುಲ್ಜಾರ್ ಅವರದ್ದಾಗಿತ್ತು. ಆದರೆ ಈ ವಾರ್ಡ್ ನನ್ನ ಸ್ವಂತ ವಾರ್ಡ್ ಆಗಿರುವುದರಿಂದ ಅಲ್ಲಿ ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ. ಎಸ್‌ಡಿಪಿಐನಿಂದ ಪ್ರಭಾವಿ ವ್ಯಕ್ತಿಯೊಬ್ಬರು ಕಣದಲ್ಲಿರುವುರಿಂದ ಕಾಂಗ್ರೆಸ್ ಗೆಲ್ಲುವ ಸವಾಲಿದೆ. ಪಕ್ಷದ ಹಿರಿಯರು ಈ ಎಲ್ಲ ಮಾನದಂಡಗಳ ಆಧಾರದಲ್ಲಿಯೇ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಬಾವ ತಿಳಿಸಿದರು.

ಮಂಗಳೂರು ಉತ್ತರ ವಿಧಾನಸಭಾ ವ್ಯಾಪ್ತಿಯಲ್ಲಿ 23 ವಾರ್ಡ್‍ಗಳು ಸೇರಿದಂತೆ ಪಾಲಿಕೆಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇದಕ್ಕೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಕಾರಣ. ವಿಧಾನಸಭೆಯಲ್ಲಿ ಬಿಜೆಪಿ ಕೋಮು ಭಾವನೆ ಕೆರಳಿಸಿದ್ದರಿಂದ ನನಗೆ ಸೋಲಾಗಿರಬಹುದು. ಈ ಬಾರಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ. ಶಾಸಕತ್ವದ ಅವಧಿಯಲ್ಲಿ ತಂದ ಅನುದಾನದ ಕಾಮಗಾರಿಗಳನ್ನು ಈಗಿನ ಶಾಸಕರು ಉದ್ಘಾಟಿಸುತ್ತಿದ್ದಾರೆ. ಯಾರದ್ದೋ ಮಗನನ್ನು ನಾನು ಹುಟ್ಟಿಸಿದ್ದು ಎನ್ನುತ್ತಿದ್ದಾರೆ. ಸುರತ್ಕಲ್ ಕ್ಷೇತ್ರ ಅಭಿವೃದ್ಧಿ ನನ್ನ ಕಾಲದಲ್ಲಿ. ಈಗಿನ ಶಾಸಕರು ಜನರ ಕೈಗೂ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡರಾದ ಸದಾಶಿವ ಶೆಟ್ಟಿ, ಸಂತೋಷ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)