ಮಂಗಳವಾರ, ನವೆಂಬರ್ 19, 2019
23 °C

ಪೂಜಾರಿ ಬೆಂಬಲಿಗರ ಮೂಲೆಗುಂಪು: ತೀವ್ರ ಆಕ್ರೋಶ

Published:
Updated:

ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಗೆ ಟಿಕೆಟ್ ಹಂಚಿಕೆ ವೇಳೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಬೆಂಬಲಿಗರನ್ನು ಕಡೆಗಣಿಸಲಾಗಿದ್ದು, ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್‌ನ ಧ್ಯೇಯ ಉದ್ದೇಶಗಳನ್ನು ಕೆಲ ಸ್ಥಾಪಿತ ಹಿತಾಸಕ್ತಿಯ ನಾಯಕರು ಬಲಿ ಕೊಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಮೇಯರ್ ಆಗಿದ್ದ ಮಾಜಿ ಕಾರ್ಪೊರೇಟರ್ ಗುಲ್ಜಾರು ಬಾನು ಅವರನ್ನು ಅವರ ಕ್ಷೇತ್ರದಲ್ಲಿ ಕಡೆಗಣಿಸಲಾಗಿದೆ. ಮಾಜಿ ಶಾಸಕರ ಮೇಲೆ ನಡೆದಿರುವ ಹಲ್ಲೆಯ ಪ್ರಕರಣವನ್ನು ಗುರಿಯಾಗಿಟ್ಟುಕೊಂಡು ಇದೀಗ ಅವರ ಪುತ್ರನನ್ನು ಬಂಧಿಸಿರುವುದು ಬೇಸರದ ಸಂಗತಿ. ಮಾಜಿ ಮೇಯರ್‌ಗಳಾದ ಪುರಂದರ ದಾಸ್ ಕೂಳೂರು, ಮಹಾಬಲ ಮಾರ್ಲ ಅವರಿಗೂ ಟಿಕೆಟ್ ನೀಡಿಲ್ಲ. ಕಾಂಗ್ರೆಸ್‌ ಪಕ್ಷದ ನಿಷ್ಠಾವಂತರಿಗೆ, ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು.

‘ಮಾಜಿ ಸಚಿವ ರಮಾನಾಥ ರೈ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಜಯ ಕುಮಾರ್ ಶೆಟ್ಟಿ ಅವರು, ತಮಗೆ ಗೃಹ ಸಚಿವ ಸ್ಥಾನ ತಪ್ಪಿ ಹೋಗುವಲ್ಲಿ ನಾನು ಕಾರಣ ಎಂದು ಹೇಳಿದ್ದರು. ನಾನು ಸಭೆಯಲ್ಲಿ ಅವರ ಮೊದಲಿನ ಕೆಲ ಅವ್ಯವಸ್ಥೆ ಬಗ್ಗೆ ಹೇಳಿದ್ದೆ. ಹಾಗಿದ್ದರೂ ಅವರಿಗೆ ಮಂತ್ರಿ ಪದವಿ ಸಿಕ್ಕಿತ್ತು. ಆದರೆ, ನನ್ನ ಮೇಲೆ ದೂಷಣೆ ಮಾಡುತ್ತಾರೆ. ಅವರಿಗೆ ಕಾಂಗ್ರೆಸ್ ಸಿದ್ಧಾಂತ ಬಗ್ಗೆ ಜ್ಞಾನದ ಕೊರತೆ ಇದೆ. ನನಗೆ ನಿಜ ಹೇಳಲು ಯಾವುದೇ ಭಯ ಇಲ್ಲ. ನನಗೆ ಹಿಂದೆ ವಿಧಾನಸಭೆಗೆ ಟಿಕೆಟ್ ನೀಡಿದಾಗ ಬೇರೆ ಪಕ್ಷಗಳಿಂದ ಆಹ್ವಾನ ಬಂದಿತ್ತು. ಆದರೆ, ಕಾಂಗ್ರೆಸ್‌ಗಿಂತ ಉನ್ನತ ಪಕ್ಷ ಬೇರೆ ಯಾವುದೂ ಇಲ್ಲ. ಹಾಗಾಗಿ ಪಕ್ಷದಲ್ಲೇ ಇದ್ದೇನೆ. ಪಕ್ಷದಲ್ಲಿ ಕೆಲವೊಂದು ಕುಂದು ಕೊರತೆಗಳಿವೆ. ಅದನ್ನು ಹಿರಿಯ ನಾಯಕರು ತಿಳಿಯಬೇಕು’ ಎಂದು ಅವರು ಹೇಳಿದರು.
ಪುರಂದರದಾಸ್‌ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗುತ್ತಿಲ್ಲ ಎಂದು ಹಿಂದೆಯೇ ಹೇಳಿದ್ದರೆ, ನಾವು ಅಷ್ಟೇನೂ ಬೇಸರ ಪಡುತ್ತಿರಲಿಲ್ಲ. ಆದರೆ, ಕಚೇರಿಗೆ ಕರೆದು ಬಿ ಫಾರಂ ಸಿದ್ಧ ಮಾಡಲು ಹೇಳಿ ಕೊನೆ 10 ನಿಮಿಷದಲ್ಲಿ ಟಿಕೆಟ್ ನೀಡದಿರುವುದು ಬೇಸರ ತಂದಿದೆ. ಅದಕ್ಕಾಗಿ ಈ ಪತ್ರಿಕಾಗೋಷ್ಠಿ ನಡೆಸುವ ಅನಿವಾರ್ಯತೆ ಎದುರಾಯಿತು ಎಂದು ವಕೀಲ, ಹಿರಿಯ ಕಾಂಗ್ರೆಸ್‌ ನಾಯಕ ಕಳ್ಳಿಗೆ ತಾರನಾಥ ಶೆಟ್ಟಿ ತಿಳಿಸಿದರು.

ಹಿಂದೆ ಟಿಕೆಟ್ ನೀಡುವ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಅವರು ಬ್ಲಾಕ್ ಮಟ್ಟದ ಅಧ್ಯಕ್ಷರ ಅಭಿಪ್ರಾಯ ಪಡೆದು ಹಿರಿಯ ನಾಯಕರಲ್ಲಿ ಸಮಾಲೋಚಿಸಿ ಪಟ್ಟಿ ಅಂತಿಮಗೊಳಿಸುತ್ತಿದ್ದರು. ಆದರೆ, ಈ ಬಾರಿ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಮಾಜಿ ಶಾಸಕರ ನಿರ್ದೇಶನದ ಮೇಲೆಯೇ ತಯಾರು ಮಾಡಲಾಗಿದೆ. ಆಕಾಂಕ್ಷಿ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್‌ಗೆ ಅರ್ಜಿ ಸಲ್ಲಿಸಬೇಕು. ಬ್ಲಾಕ್‌ನಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಆಯ್ದು ಜಿಲ್ಲಾ ಕಾಂಗ್ರೆಸ್‌ಗೆ ಶಿಫಾರಸು ಮಾಡಲಾಗುತ್ತದೆ. ಅದನ್ನು ಜಿಲ್ಲಾ ನಾಯಕರು ಹಾಗೂ ಕೆಪಿಸಿಸಿ ವಕ್ತಾರರು ಅಂತಿಮಗೊಳಿಸುತ್ತಿದ್ದರು. ಆದರೆ ಈ ಬಾರಿ ಈ ಪ್ರಕ್ರಿಯೆಯನ್ನೇ ಮಾಡಿಲ್ಲ ಎಂದು ತಿಳಿಸಿದರು.

 ಇಂಟಕ್ ಪದಾಧಿಕಾರಿ ಶಶಿರಾಜ್ ಅಂಬಟ್, ಕರುಣಾಕರ್ ಇದ್ದರು.

ಪ್ರತಿಕ್ರಿಯಿಸಿ (+)