ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ವಾರ ಲಾಕ್‌ಡೌನ್‌ ವಿಸ್ತರಣೆ ಅಗತ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮುಖ್ಯಮಂತ್ರಿ ಜೊತೆಗಿನ ವಿಡಿಯೊ ಸಂವಾದ
Last Updated 11 ಜೂನ್ 2021, 4:24 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟಿವಿಟಿ ಶೇ 20 ರಷ್ಟಿದೆ. ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆ ಮಾಡಲು ಲಾಕ್‌ಡೌನ್‌ ಅನ್ನು ಒಂದು ವಾರ ವಿಸ್ತರಿಸುವುದು ಒಳಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಗೆ ಮನವಿ ಮಾಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಗುರುವಾರ ನಡೆದ ವಿಡಿಯೊ ಸಂವಾದ ದಲ್ಲಿ ಮಾತನಾಡಿದ ಅವರು, ‘ಸೀಮಿತ ಕಾರ್ಯಚಟುವಟಿಕೆ ಸೇರಿದಂತೆ ಕೈಗಾರಿ ಕೆಗಳಲ್ಲಿ ಶೇ 50 ರಷ್ಟು ಕಾರ್ಮಿ ಕರು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟು ಲಾಕ್‌ಡೌನ್‌ ಮುಂದು ವರಿಸುವುದು ಒಳಿತು’ ಎಂದರು.

ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಲಾಕ್‌ಡೌನ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾ ಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡದಂತೆ ನಿಯಂತ್ರಿಸಲುವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲೆಯ 8 ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಸಹಾಯದಿಂದ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ವರ್ಗಾಯಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಗೆ 35ಸಾವಿರ ಡೋಸ್‌ ಲಸಿಕೆ ನೀಡುವಂತೆ ಮನವಿ ಮಾಡಿದ ಅವರು, ಲಸಿಕೆ ನೀಡಿದಲ್ಲಿ ಅವುಗಳನ್ನು ಜನರಿಗೆ ಒದಗಿಸಲು ಯೋಜನೆಗಳನ್ನು ರೂಪಿಸಿ ಯಶಸ್ವಿಗೊಳಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ. ಮಾತನಾಡಿ, ಜಿಲ್ಲೆಯಲ್ಲಿ 6,999 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, ಮಂಗಳೂರು ನಗರ ಹಾಗೂ ಬಂಟ್ವಾಳದ ಸುತ್ತಮುತ್ತ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ನಿತ್ಯ 3,300 ರಿಂದ 4ಸಾವಿರದವರೆಗೆ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಸುಳ್ಯ ತಾಲ್ಲೂಕಿನ ಕಾಲೊನಿಗಳಲ್ಲಿ ಹಾಗೂ ವೃದ್ಧಾಶ್ರಮಗಳಲ್ಲಿ ಕೋವಿಡ್ ಸೋಂಕು ಏಕಾಏಕಿ ಹರಡಿ ಹೆಚ್ಚಿನ ಸಕ್ರಿಯ ಪ್ರಕರಣಗಳು ಬರುತ್ತಿವೆ ಎಂದರು.

ವಿಡಿಯೊ ಸಂವಾದದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಾಧಿಕಾರಿ ಡಾ. ಕುಮಾರ್, ನಗರ ಪೊಲೀಸ್ ಕಮಿಷನರ್‌ ಎನ್‌. ಶಶಿಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಉಪ ವಿಭಾಗಾಧಿಕಾರಿ ಮದನ್ ಮೋಹನ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್‌, ಅಧಿಕಾರಿಗಳು ಇದ್ದರು.

‘ಲಾಕ್‌ಡೌನ್‌ ವಿಸ್ತರಣೆ: ಸಭೆ’

ಮಂಗಳೂರು: ಜಿಲ್ಲೆಯಲ್ಲಿ ಜೂ.14ರ ಬಳಿಕ ಬಹುತೇಕ ಮತ್ತೆ ಒಂದು ವಾರ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಕೈಗಾರಿಕೆಗಳನ್ನು ಹೊರತುಪಡಿಸಿ, ಜಿಲ್ಲೆಯಲ್ಲಿ ಒಂದು ವಾರ ಲಾಕ್‌ಡೌನ್ ವಿಸ್ತರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೆವು. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಜೂ.14ರ ಬಳಿಕ ಬಹುತೇಕ ಮತ್ತೆ ಒಂದು ವಾರ ಲಾಕ್‌ಡೌನ್ ಮುಂದುವರಿಸಲಾಗುವುದು ಎಂದು ಹೇಳಿದರು.

ಯಾವ ಸೀಮಿತ ವಿಷಯಗಳಿಗೆ ಲಾಕ್‌ಡೌನ್‌ನಿಂದ ರಿಯಾಯಿತಿ ನೀಡಬಹುದು ಎಂಬುದರ ಕುರಿತಂತೆ ಶುಕ್ರವಾರ (ಜೂ.11) ಸಂಸದರು, ಶಾಸಕರ ಸಭೆ ಮಾಡಲಾಗುವುದು ಎಂದರು.

‘ಪರೀಕ್ಷೆ ಹೆಚ್ಚಿಸಲು ನಿರ್ಧಾರ’

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಮಾಡುವ ಉದ್ದೇಶದಿಂದ ಕೋವಿಡ್ ಪರೀಕ್ಷೆಯನ್ನು ವ್ಯಾಪಕಗೊಳಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ವಸತಿ ಸಮುಚ್ಚಯಗಳಲ್ಲಿ ಕೋವಿಡ್ ಪ್ರಕರಣ ದೃಢವಾದಲ್ಲಿ, ಸಮುಚ್ಚದ ಎಲ್ಲ ನಿವಾಸಿಗಳನ್ನು ಪ್ರಾಥಮಿಕ ಸಂಪರ್ಕವೆಂದು ಪರಿಗಣಿಸಿ ತಪಾಸಣೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

ಪಾಲಿಕೆ ವ್ಯಾಪ್ತಿಯೊಳಗೆ ಸದ್ಯ ಪಾಸಿಟಿವಿಟಿ ಶೇ 17ರಷ್ಟಿದ್ದು, ಕೋವಿಡ್ ಪರೀಕ್ಷೆಯನ್ನು ವ್ಯಾಪಕಗೊಳಿಸಿ ದೃಢ ಪ್ರಮಾಣ ಕಡಿಮೆಗೊಳಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಗರ ಫ್ಲಾಟ್ ಮಾಲೀಕರ ಅಸೋಸಿಯೇಶನ್ ಮತ್ತು ವಸತಿ ಸಮುಚ್ಚಯದ ನಿವಾಸಿಗಳು ಸಹಕಾರ ನೀಡುವಂತೆ ಅವರು ಮನವಿ ಮಾಡಿದ್ದಾರೆ.

‘ವೈಫಲ್ಯ ಮರೆಮಾಚಲು ಲಾಕ್‌ಡೌನ್‌’

ಜಿಲ್ಲೆಗೆ ಸೀಮಿತವಾಗಿ ಲಾಕ್‌ಡೌನ್ ಮುಂದುವರಿಸುವ ಉಸ್ತುವಾರಿ ಸಚಿವರ ಪ್ರಸ್ತಾಪ ಜನವಿರೋಧಿಯಾಗಿದ್ದು, ಅಗತ್ಯ ನಿರ್ಬಂಧಗಳೊಂದಿಗೆ ಲಾಕ್‌ಡೌನ್ ತೆರವುಗೊಳಿಸಲು ಮುಂದಾಗಲಿ ಎಂದು ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಪರೀಕ್ಷೆ ಹೆಚ್ಚಳ, ಸೋಂಕಿತರನ್ನು ಪ್ರತ್ಯೇಕಗೊಳಿಸುವುದು, ಸಮರ್ಪಕ ವಿತರಣೆ, ಸುಸಜ್ಜಿತ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆದು ಗಂಭೀರ ಲಕ್ಷಣಗಳಿಲ್ಲದ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಚಿವರು ವಿಫಲರಾಗಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳ ವೈಫಲ್ಯಗಳನ್ನು ಲಾಕ್‌ಡೌನ್ ಮುಂದುವರಿಸುವ ಅಗ್ಗದ ಗಿಮಿಕ್ ಮೂಲಕ ಸಚಿವರು ಮರೆಮಾಚಲು ಹೊರಟಿದ್ದಾರೆ ಎಂದು ದೂರಿದ್ದಾರೆ.

ಕೋವಿಡ್‌ ನಿಯಂತ್ರಣಕ್ಕೆ ಲಾಕ್‌ಡೌನ್ ಹೊರತಾದ, ಜನರ ದುಡಿಮೆಗೆ ಆವಕಾಶ ನಿರಾಕರಿಸದ ಇನ್ನಿತರ ನಿರ್ಬಂಧಗಳನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT