ಭಾನುವಾರ, ಜೂನ್ 20, 2021
26 °C
ವಿವಾಹಕ್ಕೆ ಆನ್‌ಲೈನ್‌ನಲ್ಲಿ ಸಾಕ್ಷಿಯಾದ ಸಂಬಂಧಿಕರು

ವಧು–ವರರಿಗೆ ವರ್ಚುವಲ್‌ ಆಶೀರ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು/ವಿಟ್ಲ: ಕೋವಿಡ್–19 ನಿಂದಾಗಿ ಮದುವೆ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಆದರೆ, ಸಾವಿರಾರುಜನ ಸಂಬಂಧಿಕರನ್ನು ಬಿಟ್ಟು ಮದುವೆ ಆಗುವುದಾದರೂ ಹೇಗೆ? ಇದಕ್ಕೊಂದು ಉಪಾಯ ಕಂಡುಕೊಂಡಿತ್ತು ಬಂಟ್ವಾಳ ತಾಲ್ಲೂಕಿನ ಕನ್ಯಾನದ ಪರಿವಾರ.

ಗುರುವಾರ ನಡೆದ ವಿವಾಹ ಕಾರ್ಯಕ್ರಮದಲ್ಲಿ ಆ ಪರಿವಾರದ ಎಲ್ಲರೂ ಪಾಲ್ಗೊಂಡಿದ್ದರು. ಆದರೆ, ತಂತ್ರಜ್ಞಾನದ ಸಹಾಯದಿಂದ ಮಾರ್ಗಸೂಚಿಗೆ ಅನುಗುಣವಾಗಿ ಎಲ್ಲರೂ ವಿವಾಹಕ್ಕೆ ಸಾಕ್ಷಿಯಾದರು. ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ ವಧು–ವರರಿಗೆ ವರ್ಚುವಲ್‌ ಆಶೀರ್ವಾದ ಮಾಡಿದರು.

ಕನ್ಯಾನದ ಅಹ್ಮದ್‌ ಅಲಿ ಕಂಬರ್‌ ಅವರ ಕುಟುಂಬದಲ್ಲಿ ಗುರುವಾರ ಇಂತಹ ವಿಶಿಷ್ಟ ವಿವಾಹ ನಡೆಯಿತು. ಕುಟುಂಬದ ಮುಖ್ಯಸ್ಥರಾದ ಅಹ್ಮದ್‌ ಅಲಿ ಕಂಬರ್‌ ಅವರಿಗೆ 8 ಮಂದಿ ಸಹೋದರಿಯರು ಹಾಗೂ ಒಬ್ಬ ಸಹೋದರ. ನಾಲ್ಕು ತಲೆಮಾರಿನ ಕುಟುಂಬದ ಸದಸ್ಯರು, ದೇಶ ಹಾಗೂ ವಿದೇಶದ ವಿವಿಧೆಡೆ ನೆಲಸಿದ್ದಾರೆ. ಹೀಗಾಗಿ ಕುಟುಂಬದ ಮದುವೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವಾಗಿತ್ತು. ಆದರೆ, ಕುಟುಂಬದ ಯುವ ಸದಸ್ಯರೊಬ್ಬರು ತಂತ್ರಜ್ಞಾನವನ್ನು ಬಳಸಿಕೊಂಡು, ಎಲ್ಲರೂ ವಿವಾಹದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ.

ವಿನ್ಯಾಸಗಾರ್ತಿಯಾಗಿರುವ ಕಂಬರ್‌ ಕುಟುಂಬದ ನಫೀಸತ್‌ ನಹಾನಾ ಅವರ ಮದುವೆ ಚಿಕ್ಕಮಗಳೂರಿನ ಉದ್ಯಮಿ ಇಸ್ಮಾಯಿಲ್‌ ರಖೀಬ್‌ ಅವರೊಂದಿಗೆ ಕೊಣಾಜೆಯ ಪಟ್ಟೋರಿಯಲ್ಲಿ ನಡೆಯಿತು. ಆದರೆ, ವಿವಾಹದ ಸ್ಥಳದಲ್ಲಿ ಕೇವಲ 50 ಮಂದಿ ಹಾಜರಿದ್ದರೂ, ವಿವಿಧೆಡೆಗಳಿದ್ದ ಸಂಬಂಧಿಕರು ವಿಡಿಯೊ ಹಾಗೂ ಝೂಮ್‌ ಮೀಟ್‌ ಮೂಲಕ ವಧು–ವರರಿಗೆ ಆಶೀರ್ವದಿಸಿದರು.

15 ವರ್ಷದ ಝೋಯಾ ಈ ಏರ್ಪಾಡು ಮಾಡಿದ್ದು, ಕುಟುಂಬದ ಸದಸ್ಯರೆಲ್ಲರ ಹಾರೈಕೆ ಉಳ್ಳ 28 ನಿಮಿಷಗಳ ವಿಡಿಯೊ ಮಾಡಿದ್ದರು. ಇದರಲ್ಲಿ ನಹಾನಾ ಅವರ ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಕುಟುಂಬದ ಸದಸ್ಯರು ಹಾರೈಸಿದ್ದರು. ಈ ವಿಡಿಯೊ ಅನ್ನು ವಿವಾಹ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ನ್ಯೂಝಿಲ್ಯಾಂಡ್‌, ಜರ್ಮನಿ, ಸೌದಿ ಅರೇಬಿಯಾ, ಯುಎಇ, ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದ ವಿವಿಧೆಡೆ ನೆಲೆಸಿರುವ 218 ಮಂದಿ ಝೂಮ್‌ ಮೀಟ್‌ ಮೂಲಕ ಮದುವೆಗೆ ಸಾಕ್ಷಿಯಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.