ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕ್ಷೇತ್ರ ಕಾರ್ಪೊರೇಟ್‌ ಕಂಪನಿಗೆ: ಆಕ್ರೋಶ

ರೈತರ ಹೋರಾಟ ಬೆಂಬಲಿಸಿ ಐಕ್ಯ ವೇದಿಕೆಯಿಂದ ಹೆದ್ದಾರಿ ತಡೆ
Last Updated 25 ಸೆಪ್ಟೆಂಬರ್ 2020, 11:19 IST
ಅಕ್ಷರ ಗಾತ್ರ

ಮಂಗಳೂರು: ರೈತ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಸಾತಿ, ಸಂಸದರನ್ನು ಅಮಾನತುಗೊಳಿಸಿದ ನರೇಂದ್ರ ಮೋದಿ ಸರ್ಕಾರದ ಫ್ಯಾಸಿಸ್ಟ್ ನಡೆಯನ್ನು ಖಂಡಿಸಿ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ ಯುವಜನ, ಮಹಿಳಾ ಸಂಘಟನೆಗಳು, ಕಾಂಗ್ರೆಸ್‌, ಜೆಡಿಎಸ್‌, ಸಿಪಿಎಂ, ಸಿಪಿಐ ಪಕ್ಷಗಳ ಐಕ್ಯ ವೇದಿಕೆಯಿಂದ ನಗರದ ನಂತೂರು ಜಂಕ್ಷನ್ ಬಳಿಯಲ್ಲಿ ಶುಕ್ರವಾರ ಹೆದ್ದಾರಿ ತಡೆ ಚಳವಳಿ ನಡೆಯಿತು.

ಪ್ರತಿಭಟನಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ‘ಕೃಷಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಮೂರು ಸುಗ್ರೀವಾಜ್ಞೆಗಳು, ಆಹಾರಧಾನ್ಯಗಳು ಮತ್ತು ಇತರ ಕೃಷಿ ಸರಕುಗಳನ್ನು ಅವಶ್ಯಕ ಸರಕುಗಳ ಪಟ್ಟಿಯಿಂದ ತೆಗೆಯಲಿದ್ದು, ದಾಸ್ತಾನು ಮಿತಿಗಳನ್ನು ಏರಿಸಿವೆ. ರಾಜ್ಯಗಳ ಎಪಿಎಂಸಿಗಳನ್ನು ಸರ್ವನಾಶಗೊಳಿಸುವ ಮೂಲಕ ಆಹಾರ ಭದ್ರತೆಯ ಶಕ್ತಿಯನ್ನೂ ಕೂಡ ಕುಂದಿಸುತ್ತವೆ’ ಎಂದು ಹೇಳಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ನಾಯಕ ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್‌ ಮಾತನಾಡಿ, ‘ಆತ್ಮನಿರ್ಭರದ ಹೆಸರಿನಲ್ಲಿ ಮೋದಿ ಸರ್ಕಾರವು ನವ ಉದಾರವಾದಿ ನೀತಿಗಳನ್ನು ಅನುಸರಿಸುವ ಮೂಲಕ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಕಾರ್ಪೊರೇಟ್‌ ಕಂಪನಿಗಳಿಗೆ ಒಪ್ಪಿಸಲು ಸಜ್ಜಾಗಿದೆ’ ಎಂದು ದೂರಿದರು.

ರೈತರ ಹೋರಾಟವನ್ನು ಬೆಂಬಲಿಸಿ ಮಾಜಿ ಶಾಸಕ ಜೆ.ಆರ್. ಲೋಬೊ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಐ ಜಿಲ್ಲಾ ನಾಯಕ ಬಿ.ಶೇಖರ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ, ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಸದಾಶಿವ, ದಲಿತ ನಾಯಕರಾದ ಎಂ.ದೇವದಾಸ್, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ, ಜೆ.ಬಾಲಕೃಷ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ ಪಿ.ವಿ.ಮೋಹನ್ ಮಾತನಾಡಿ, ‘ದೇಶಪ್ರೇಮದ ಹೆಸರಿನಲ್ಲಿ ಜನತೆಯನ್ನು ಭಾವನಾತ್ಮಕವಾಗಿ ವಂಚಿಸಿ, ಪ್ರತಿಯೊಂದು ಹೆಜ್ಜೆಯಲ್ಲೂ ದೇಶದ್ರೋಹಿ ಕಾನೂನುಗಳನ್ನು ಜಾರಿಗೊಳಿಸುವ ನರೇಂದ್ರ ಮೋದಿ ಸರ್ಕಾರದ ಕ್ರಮ ಖಂಡಿನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ವಾಸುದೇವ ಉಚ್ಚಿಲ್, ರಾಮಣ್ಣ ವಿಟ್ಲ, ಪ್ರೇಮನಾಥ ಶೆಟ್ಟಿ, ಸುಧಾಕರ ಜೈನ್, ವಿವಿಯನ್ ಪಿಂಟೋ, ಎಚ್‌.ಟಿ. ರಾವ್, ಸೀತಾರಾಮ ಬೇರಿಂಜ, ಸುನಿಲ್ ಕುಮಾರ್ ಬಜಾಲ್, ಸುರೇಶ್ ಬಂಟ್ವಾಳ, ಪದ್ಮಾವತಿ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಧೀರಜ್ ಪಾಲ್, ದಿನೇಶ್ ಕುಂಪಲ, ಜಗದೀಶ್, ಕಾಂಗ್ರೆಸ್ ನಾಯಕರಾದ ಸದಾಶಿವ ಉಳ್ಳಾಲ, ಸಂತೋಷ್ ಕುಮಾರ್ ಶೆಟ್ಟಿ, ಮಹಮ್ಮದ್ ಸಲೀಂ, ಶಾಲೆಟ್ ಪಿಂಟೋ, ಭಾರತಿ ಪ್ರಶಾಂತ್, ಶೋಭಾ ಕೇಶವ್, ಶಶಿಕಲಾ ಸುರತ್ಕಲ್, ಅಪ್ಪಿ, ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್, ಎ.ಸಿ. ವಿನಯರಾಜ್, ನವೀನ್ ಡಿಸೋಜ, ಶಂಶುದ್ದೀನ್, ಅಶ್ರಫ್, ಜೆಡಿಎಸ್‌ ಮುಖಂಡರಾದ ದಿನಕರ ಉಳ್ಳಾಲ, ರವೀಂದ್ರನಾಥ ಶೆಟ್ಟಿ, ಸಿಪಿಐನ ವಿ.ಕುಕ್ಯಾನ್, ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ, ಭಾರತಿ ಬೋಳಾರ, ದಲಿತ ಸಂಘಟನೆಯ ರಘು ಎಕ್ಕಾರ್, ತಿಮ್ಮಯ್ಯ ಕೊಂಚಾಡಿ, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ, ರಾಜೇಂದ್ರ ಚಿಲಿಂಬಿ, ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್, ಅಶ್ರಫ್‌ ಕೆ.ಸಿ.ರೋಡ್, ಸುನಿಲ್ ತೇವುಲ, ಜಗತ್, ಸುಧಾಕರ್ ಕಲ್ಲೂರು, ಹರ್ಷಿತ್ ಭಾಗವಹಿಸಿದ್ದರು.

ಬೆಳ್ಳಾರೆಯಲ್ಲಿ ಪ್ರತಿಭಟನೆ:ಎಸ್‌ಡಿಪಿಐ ವತಿಯಿಂದ ಕೇಂದ್ರ ಸರ್ಕಾರದ ರೈತ ಮತ್ತು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ವಿರುದ್ಧ ಬೆಳ್ಳಾರೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ವಲಯ ಘಟಕದ ಅಧ್ಯಕ್ಷ ಸಿದ್ದೀಕ್ ಬೆಳ್ಳಾರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪದಾಧಿಕಾರಿಗಳಾದ ಇಕ್ಬಾಲ್ ಬೆಳ್ಳಾರೆ ಕೆ. ಮಮ್ಮಾಲಿ, ಬಸೀರ್ ಬಿ.ಎ., ಶಹೀದ್ ಎಂ., ಆಸೀರ್ ಎ.ಬಿ., ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಜೈನುದ್ದೀನ್ ಯು.ಎಚ್., ಹಮೀದ್ ಮರಕ್ಕಡ, ಫೈಝಲ್ ಜಿ. ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT