ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಲ್ಲಾಳದಲ್ಲಿ ಬಸ್‌ಸಿಬ್ಬಂದಿ ಪ್ರತಿಭಟನೆ, ಲಘು ಲಾಠಿ ಪ್ರಹಾರ

ತಲಪಾಡಿ ಟೋಲ್‌ ಶುಲ್ಕ, ಲಾಸ್ಟ್ ಸ್ಟಾಪ್ ವಿವಾದ, 29 ರಂದು ತುರ್ತು ಸಭೆ
Last Updated 26 ಫೆಬ್ರುವರಿ 2020, 12:59 IST
ಅಕ್ಷರ ಗಾತ್ರ

ಉಳ್ಳಾಲ: ಸಿಟಿ ಬಸ್‌ಗಳಿಗೆ ಟೋಲ್ ಬೂತ್ ನಿಗದಿಪಡಿಸಿದ ಶುಲ್ಕ ತುಂಬುವುದನ್ನು ಪ್ರತಿಭಟಿಸಿ ಒಂದೂವರೆ ತಿಂಗಳಿನಿಂದ ತಲಪಾಡಿ ಟೋಲ್ ದಾಟಿಹೋಗದಿರುವುದು, ಪ್ರಯಾಣಿಕರು ಒಂದು ಕಿ.ಮೀ. ನಡೆಯಬೇಕಾದ ಪ್ರಕರಣ ಬುಧವಾರ ಪ್ರತಿಭಟನೆಯ ರೂಪ ಪಡೆಯಿತು. ಪೊಲೀಸರು ಲಾಠಿಬಳಸಿ ಗುಂಪು ಚದುರಿಸಿದರು. ಕೊನೆಗೆ ಪ್ರಕರಣ ಇತ್ಯರ್ಥವಾಗದ ಕಾರಣ ಇದೇ 29ರಂದು ಸಭೆ ನಡೆಸುವ ಭರವಸೆಯಲ್ಲಿ ಪ್ರಕರಣ ಗೊನೆಗೊಂಡಿದೆ.

ತಲಪಾಟಿ ಟೋಲ್‌ ಗೇಟ್‌ ಎದುರಲ್ಲೇ ಕೊನೆನಿಲ್ದಾಣ ಮಾಡಿ, ಸಿಟಿಬಸ್‌ಗಳು ವಾಮಸ್‌ ನಗರಕ್ಕೆ ಬರುತ್ತಿದ್ದುದರಿಂದಗೇಟ್‌ ದಾಟಿ ಹೋಗಬೇಕಾದ ಎಲ್ಲ ಪ್ರಯಾಣಿಕರು ತೊಂದರೆಗೀಡಾಗಿದ್ದರು. ಪ್ರಯಾಣಿಕರು ಬುಧವಾರ ಸಿಟಿಬಸ್‌ ತಂಗುವ ಜಾಗದಲ್ಲೇ ತಾತ್ಕಾಲಿಕ ಅಂಗಡಿಗಳನ್ನು ಇರಿಸಿ ಗೇಟ್‌ದಾಟಿ ಹೋಗುವಂತೆ ಆಗ್ರಹಿಸಿದ್ದರು.

ಜನರ ಒತ್ತಾಯದಂತೆ ಗೇಟ್‌ ದಾಟಿದ ಬಸ್‌ಗಳಿಗೆ ಸಿಬ್ಬಂದಿ ಶುಲ್ಕ ಕೇಳಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ ಸಿಬ್ಬಂದಿ ಬಸ್‌ಗಳನ್ನು ಗೇಟಿಗೆ ಅಡ್ಡವಾಗಿಟ್ಟು ಪ್ರತಿಭಟಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಉಳ್ಳಾಲ ಪೊಲೀಸರು ಉದ್ರಿಕ್ತ ಗುಂಪಿನ ಮೇಲೆ ಲಘು ಲಾಠಿ ಚಾರ್ಜ್ ನಡೆಸಿದರು.

ವಿವರ: ಟೋಲ್ ನಿಗದಿಪಡಿಸಿದ ದರವನ್ನು ಪಾವತಿಸಲು ಸಿಟಿ ಬಸ್‌ ಮಾಲೀಕರಿಗೆ ಅಸಾಧ್ಯ. 40 ವರ್ಷಗಳಿಂದ ತಲಪಾಡಿಯಿಂದ ಮಂಗಳೂರಿಗೆ ಸಾರಿಒಗೆ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತಿದೆ. ಇದೀಗ ತಲಪಾಡಿ ಟೋಲ್‌ಗೇಟ್‌ ಆರಂಭವಾದ ಬಳಿಕ ಕೇವಲ ಅರ್ಧ ಕಿ.ಮೀ. ತೆರಳಲು ವಾರ್ಷಿಕ ಲಕ್ಷಾಂತರ ಹಣ ಪಾವತಿಸುವುದು ನ್ಯಾಯಯುತವಲ್ಲ ಎಂದು ಮಾಲೀಕರು ತಿಳಿಸಿದ್ದರು.

ಹಿಂದಿನ ವ್ಯವಹಾರದಂತೆ ಬಸ್‌ ವ್ಯವಹಾರವೂ ಲಾಭದಾಯಕವಾಗಿಲ್ಲ. ಬಸ್‌ ಮಾಲೀಕರು ಒಟ್ಟಾಗಿ ತಾವೇ ನಿಗದಿಪಡಿಸಿದ ದರ ನೀಡುವುದಾಗಿ ಟೋಲ್ ಅಧಿಕಾರಿಗಳಿಗೆ ವಿನಂತಿಸಿಕೊಂಡರೂ ಅವರು ಒಪ್ಪಿಗೆ ಸೂಚಿಸಿಲ್ಲ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಇದೇ 9ರಂದು ತಲಪಾಡಿ ನಾಗರಿಕರು, ಗಡಿನಾಡು ರಕ್ಷಣಾ ವೇದಿಕೆ ಹಾಗೂ ಸಿಟಿ ಬಸ್ ಮಾಲೀಕರು ಟೋಲ್ ಎದುರು ಜಮಾಆವಣೆಗೊಂಡು ಪರಿಹಾರಕ್ಕೆ ಒತ್ತಾಯಿಸಿದರೂ ಟೋಲ್‌ ಸಂಸ್ಥೆ ಅಧಿಕಾರಿಗಳ ಅನುಪಸ್ಥಿತಿಯಿಂದ ಅಂದು ಕೂಡ ಸಂಧಾನ ವಿಫಲವಾಗಿತ್ತು. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲು ಮನವಿ ನೀಡಿ ಮನವಿ ಮಾಡಿಕೊಂಡಿದ್ದರು.

ಜಿಲ್ಲಾಧಿಕಾರಿಯವರು ಸಹಾಯಕ ಪೊಲೀಸ್ ಕಮಿಷನರ್‌ (ಎಸಿಪಿ), ಉಳ್ಳಾಲ ಠಾಣಾ ಅಧಿಕಾರಿಗಳಲ್ಲಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಮನವಿ ಬಳಿಕವೂ ಟೋಲ್ ಶುಲ್ಕ ವಸೂಲಿ ಸಂಸ್ಥೆ ಅಧಿಕಾರಿಗಳು ಪಟ್ಟುಬಿಡದ ಪ್ರಯುಕ್ತ ಬಸ್‌ಗಳನ್ನು ಟೋಲ್‌ಗೇಟ್‌ಗೆ ಮೊದಲೇ ಸಂಚಾರ ಮೊಟಕುಗೊಳಿಸಿ, ಒಂದು ಕಿ.ಮೀ. ಮೊದಲೇ ನಿಲುಗಡೆಗೊಳಿಸುತ್ತಿದ್ದುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದರು.

ಪ್ರತಿಭಟನೆ: ಸುಡುಬಿಸಿಲಿನಲ್ಲಿ ವಿದ್ಯಾರ್ಥಿಗಳು, ವೃದ್ಧರು, ಗರ್ಭಿಣಿಯರು, ಮಕ್ಕಳು ನಡೆದುಕೊಂಡೇ ಸಾಗಿ ತಲಪಾಡಿಯನ್ನು ಸೇರುವ ವಾತಾವರಣ ಮುಂದುವರಿಯಿತು. ನೊಂದ ಜನರು ಹಾಗೂ ಸ್ಥಳೀಯರು ಬುಧವಾರ ಬೆಳಿಗ್ಗೆ ಏಳು ಗಂಟೆಯಿಂದ ಸಿಟಿ ಬಸ್‌ಗಳು ತಿರುಗುವ ಟೋಲ್ ಎದುರಿನ ಜಾಗದಲ್ಲಿ ತಾತ್ಕಾಲಿಕ ಅಂಗಡಿಯನ್ನಿಟ್ಟು, ತಲಪಾಡಿವರೆಗೂ ಬಸ್‌ಗಳು ಹೋಗುವಂತೆ ಒತ್ತಾಯಿಸಿದರು. ಅದರ ಪರಿಣಾಮ ಬೆಳಿಗ್ಗೆ 7 ರಿಂದ 9ರವರೆಗೆ ಸಿಟಿ ಬಸ್‌ಗಳು ಟೋಲ್ ಪಾವತಿಸದೆ ತಲಪಾಡಿಯ ಕೊನೆ ನಿಲ್ದಾಣದವರೆಗೆ ತೆರಳಿದವು.

ಟೋಲ್ ಸಿಬ್ಬಂದಿ ಶುಲ್ಕ ಪಾವತಿಸುವಂತೆ ಒತ್ತಾಯಿಸಿದ ಕಾರಣ ಬಸ್‌ಗಳು ಕ್ಯಾಷ್ ಕೌಂಟರ್‌ನಲ್ಲೇ ನಿಲ್ಲುವಂತೆ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಪ್ರಾಧೇಶಿಕ ರಸ್ತೆ ಸಾರಿಗೆ ಪ್ರಾಧಿಕಾರದ ಆಧಿಕಾರಿಗಳು (ಆರ್‌ಟಿಒ) ನೀಡಿರುವ ಸಮಯ ಪಾಲಿಸಲು ಅಸಾಧ್ಯ ಎಂದು ಸಿಟಿ ಬಸ್‌ಗಳು ಎಲ್ಲಾ ಗೇಟುಗಳ ಎದುರುಗಡೆ ನಿಂತು ಪ್ರತಿಭಟನೆ ಆರಂಭಿಸಿದರು.

ಇದರಿಂದ ಒಂದು ಭಾಗದಲ್ಲಿ ಮಂಜೇಶ್ವರದವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತರೆ, ಇನ್ನೊಂದು ಭಾಗದಲ್ಲಿ ಕೆ.ಸಿ.ರೋಡು ವರೆಗೂ ವಾಹನಗಳು ಸಾಲುಗಟ್ಟಿ ನಿಲುಗಡೆ ಮಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಟೋಲ್ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡು ಟೋಲ್‌ಗೇಟ್‌ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಲಘು ಲಾಠಿ ಪ್ರಹಾರ: ಉಳ್ಳಾಲ ಪೊಲೀಸರು ಸ್ಥಳಕ್ಕೆ ಬಂದು ಸಿಟಿ ಬಸ್‌ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಸ್ಥಳದಲ್ಲಿ ಇನ್ನಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ಗುಂಪುಗಳನ್ನು ಚದುರಿಸಿದರು. ಒಂದು ಗಂಟೆಯ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.

ಉದ್ರಿಕ್ತ ಗುಂಪು ಹಾಗೂ ಟೋಲ್‌ಗೇಟ್‌ ಸಿಬ್ಬಂದಿ ಪಟ್ಟುಬಿಡದೇ ನಿಂತಾಗ ಇದೇ 29 ರಂದು ಜಿಲ್ಲಾಧಿಕಾರಿ, ಸಂಸದರು, ಟೋಲ್ ಅಧಿಕಾರಿಗಳನ್ನು ಜತೆಗೆ ಸೇರಿಸಿಕೊಂಡು ತುರ್ತು ಸಭೆ ನಡೆಸುವ ಕುರಿತು ಮನವಿ ಮಾಡುವುದಾಗಿ ಎಸಿಪಿ ಕೋದಂಡರಾಮ ಹೇಳಿದರು. ಅವರ ಹೇಳಿಕೆ ಆಧರಿಸಿ ಸಾರ್ವಜನಿಕರು ಪ್ರತಿಭಟನೆಯನ್ನು ಕೈಬಿಟ್ಟರು.

ಆದರೆ, ಪ್ರತಿಭಟನೆ ಮಾತುಕತೆ ಬಳಿಕವೂ ಸಿಟಿಬಸ್‌ಗಳು ಮತ್ತೆ ಟೋಲ್‌ ಗೇಟ್‌ ದಾಟಿ ಕೊನೆ ನಿಲ್ದಾಣಕ್ಕೆ ಹೋಗದೆ, ವಾಪಸ್‌ ಬರುತ್ತಿರುವುದರಿಂದ ಪ್ರಯಾಣಿಕರ ಸಂಕಷ್ಟ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT